Advertisement

“ಕರಗಕ್ಕೆ 2 ಲಕ್ಷ ರೂ. ಅನುದಾನ’

11:54 AM Jul 18, 2017 | Team Udayavani |

ದೇವನಹಳ್ಳಿ: ರಾಜ್ಯ ಸರ್ಕಾರವು ಪ್ರತಿ ವರ್ಷ ಕರಗ ಮಹೋತ್ಸವ ನಡೆಸಲು 2 ಲಕ್ಷ ರೂ. ಅನುದಾನ ನೀಡಲು ನಿರ್ಧರಿಸಿದ್ದು, ಶೀಘ್ರ ನೋಟಿಫಿಕೇಷನ್‌ ಹೊರಡಿಸಲಾಗುತ್ತಿದೆ ಎಂದು ವಿಧಾನ ಪರಿಷತ್‌ ಸದಸ್ಯ ಪಿ.ಆರ್‌.ರಮೇಶ್‌ ತಿಳಿಸಿದರು.

Advertisement

ಪಟ್ಟಣದ ನಗರೇಶ್ವರ ಸ್ವಾಮಿ ಕಲ್ಯಾಣ ಮಂಟಪದಲ್ಲಿ ತಾಲೂಕು ತಿಗಳರ ಸಂಘ ಹಾಗೂ ಮೌಕ್ತಿಕಾಂಬ ದೇವಾಲಯ ಸಮಿತಿ ವತಿಯಿಂದ ವಿಧಾನ ಪರಿಷತ್ತಿಗೆ ನೂತನವಾಗಿ ಆಯ್ಕೆಯಾದ ಪಿ.ಆರ್‌.ರಮೇಶ್‌ಗೆ ಸನ್ಮಾನ ಸಮಾರಂಭ ಹಾಗೂ ಜನಾಂಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ಪ್ರತಿ ವರ್ಷವೂ ತಿಗಳ ಸಮುದಾಯ 90 ಕಡೆ ಕರಗ ಆಚರಿಸುತ್ತಿದೆ. ಇದಕ್ಕೆ 2 ಲಕ್ಷ ರೂ. ನೀಡಲು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯರೊಂದಿಗೆ ಚರ್ಚಿಸಿದ್ದು, ಶೀಘ್ರ ಘೋಷಣೆ ಮಾಡಲಿದ್ದಾರೆ. ದೇವನಹಳ್ಳಿ ತಿಗಳರ ಸಂಘ, ಪುರಸಭೆ  ಸರ್ಕಾರಿ ಜಾಗ ಗುರುತಿಸಿಕೊಟ್ಟರೆ ಸಂಬಂಧಿಸಿದವರಿಗೆ ತಿಳಿಸಲಾಗುವುದು ಎಂದು ಹೇಳಿದರು.

ಸಮಾಜದವರ ಏಳಿಗೆಗೆ ಮಕ್ಕಳಿಗೆ ಶಾಲೆ, ಹಾಸ್ಟೇಲ್‌, ಸಮುದಾಯ ಭವನ ಮಾಡಬೇಕು. ತಿಗಳ ಸಮುದಾಯದವರು ಸ್ವಾಭಿಮಾನಿಗಳಾಗಿದ್ದು, ಸರ್ಕಾರದ ಸೌಲಭ್ಯ ಬಳಸಿಕೊಳ್ಳಬೇಕು. 11 ಜಿಲ್ಲೆಗಳಲ್ಲಿ ತಿಗಳ ಸಮುದಾಯ ಇದೆ. ಬಹಳಷ್ಟು ಜನ ಆರ್ಥಿಕವಾಗಿ ಹಿಂದುಳಿದಿರುವುದರಿಂದ ಸರ್ಕಾರವು ಆರ್ಥಿಕ ಮಟ್ಟ ಸುಧಾರಿಸುವ ನಿಟ್ಟಿನಲ್ಲಿ 2014-15ನೇ ಸಾಲಿನಲ್ಲಿ 2 ಕೋಟಿ ರೂ. 2015-16ನೇ ಸಾಲಿನಲ್ಲಿ 10 ಕೋಟಿ ರೂ., 2016-17ನೇ ಸಾಲಿನಲ್ಲಿ 15 ಕೋಟಿ ರೂ. ಕೇವಲ ತಿಗಳ ಸಮುದಾಯಕ್ಕೆ ನೀಡಿದೆ ಎಂದು ಹೇಳಿದರು.

ಸಂವಿಧಾನದ ಹಕ್ಕಿನಲ್ಲಿ ಮೀಸಲಾತಿ ಇರುವುದರಿಂದ ಸಮಾಜದವರಿಗೆ ಪುರಸಭೆ, ನಗರಸಭೆ, ಗ್ರಾಪಂ, ಜಿಪಂ, ತಾಪಂ, ಬೆಂಗಳೂರು ಮಹಾನಗರ ಪಾಲಿಕೆ, ವಿವಿಧ ಕಡೆ ಸ್ಪರ್ಧೆ ಮಾಡಲು ಅವಕಾಶ ಲಭಿಸಿದೆ. ಸಂವಿಧಾನದ ಮೀಸಲಾತಿ ಹಕ್ಕು ಇಲ್ಲದಿದ್ದರೆ ಯಾರೂ ಆಯ್ಕೆಯಾಗಲು ಆಗುತ್ತಿರಲಿಲ್ಲ, ಬಿಬಿಎಂಪಿಯಲ್ಲಿ 25 ಜನ ತಮ್ಮ ಸಮುದಾಯದ ಸದಸ್ಯರಿರಬೇಕಾಗಿತ್ತು. ಆದರೆ, ಕೇವಲ 9 ಜನ ಇದ್ದಾರೆ ಎಂದು ಹೇಳಿದರು.

Advertisement

ಕರ್ನಾಟಕ ರಾಜ್ಯ ತಿಗಳ ಕ್ಷತ್ರಿಯ ಮಹಾಸಭಾ ಅಧ್ಯಕ್ಷ ಎಚ್‌.ಸುಬ್ಬಣ್ಣ ಉದ್ಘಾಟಿಸಿ ಮಾತನಾಡಿ, ತಿಗಳ ಸಮುದಾಯ ಕೃಷಿಯನ್ನೇ ಕುಲಕಸುಬಾಗಿ ಮುಂದುವರಿಕಿಕೊಂಡು ಬಂದಿದೆ. ಮಕ್ಕಳಿಗೆ ಶಿಕ್ಷಣ ನೀಡಿ ಆಸ್ತಿವಂತರಾಗಿ ಮಾಡಬೇಕು. ಪಿ.ಆರ್‌.ರಮೇಶ್‌ ಅವರನ್ನು ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಅಭಿನಂದಿಸಬೇಕು ಎಂದು ಹೇಳಿದರು.

ಕರ್ನಾಟಕ ರಾಜ್ಯ ತಿಗಳರ ಅಧ್ಯಕ್ಷ ಡಾ.ಸಿ.ಜಯರಾಜ್‌ ಮಾತನಾಡಿ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ರಾಜಕೀಯ ಪಕ್ಷದಿಂದ ಸಮುದಾಯದ ವ್ಯಕ್ತಿಗಳಿಗೆ ಟಿಕೆಟ್‌ ನೀಡಿದರೆ ಒಗ್ಗಟ್ಟಿನಿಂದ ಆಯ್ಕೆ ಮಾಡುವುದು ಜವಾಬ್ದಾರಿ ತಮ್ಮೆಲ್ಲರ ಮೇಲಿದೆ. ವಿಧಾನಸಭಾ ಚುನಾವಣೆಯಲ್ಲಿ ಎರಡರಿಂದ ಮೂವರು ಶಾಸಕರನ್ನು ಗೆಲ್ಲಿಸಿಕೊಳ್ಳಲೇಬೇಕು ಎಂದು ವಿವರಿಸಿದರು.

ರಾಜ್ಯ ಯೂತ್‌ ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಡಾ.ಎಸ್‌.ಲೋಕೇಶ್‌, ಮಾಜಿ ಉಪಮೇಯರ್‌ ವಾಸುದೇವಮೂರ್ತಿ ಮಾತನಾಡಿದರು. ತಾಲೂಕು ತಿಗಳರ ಸಂಘದ ಅಧ್ಯಕ್ಷ ವಿ.ಗೋಪಾಲ ಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಎಂ.ಎಚ್‌.ಮರಿಗೌಡ ಪ್ರಶಸ್ತಿ ಪುರಸ್ಕೃತ ಶಿವನಾಪುರ ಎಸ್‌.ಸಿ.ರಮೇಶ್‌ ಅವರ ಕೆ.ರೇಖಾಸಂಪತ್‌ ಮುಂದಾಳತ್ವದಲ್ಲಿ ಛಲಬಿಡದ ಸಾಧಕ ಸಾವಯುವ ಗುರು ಶಿವನಾಪುರ ರಮೇಶ್‌ ಪುಸ್ತಕ ಬಿಡುಗಡೆ ಮಾಡಲಾಯಿತು.

ಬುಳ್ಳಹಳ್ಳಿ ದ್ರೌಪತಿ ಆದಿಪರಶಕ್ತಿ ಮಹಾಸಂಸ್ಥಾನ ಪೀಠದ ಬಾಲಯೋಗಿ ಸಾಯಿನಾಥ ಮಹಾರಾಜ್‌ ದಿವ್ಯಸಾನ್ನಿಧ್ಯ ವಹಿಸಿದ್ದರು. ಬಿಬಿಎಂಪಿ ವಿರೋಧ ಪಕ್ಷದ ಮಾಜಿ ನಾಯಕ ಎ.ಎಚ್‌.ಬಸವರಾಜು, ಬಿಬಿಎಂಪಿ ಸದಸ್ಯರಾದ ಶ್ವೇತಾ, ಶಿವಕುಮಾರ್‌, ಭವ್ಯಾ, ಚಿಕ್ಕಬಳ್ಳಾಪುರ ಜಿಪಂ ಉಪಾಧ್ಯಕ್ಷೆ ನಿರ್ಮಲಾ, ಪುರಸಭಾ ಸದಸ್ಯ ಎನ್‌.ಶಶಿಕುಮಾರ್‌, ಕೇಶವಪ್ಪ, ಮುನಿಕೃಷ್ಣಪ್ಪ, ರಾಜ್ಯ ತಿಗಳ ಸಂಘದ ಉಪಾಧ್ಯಕ್ಷ ರಾಮಚಂದ್ರ, ಪ್ರಧಾನ ಕಾರ್ಯದರ್ಶಿ ಎಂ.ನಾಗರಾಜ್‌, ಕಾರ್ಯಕಾರಿ ಸಮಿತಿ ಸದಸ್ಯ ಎಸ್‌.ಸಿ.ಚಂದ್ರಪ್ಪ,

-ಸಿ.ಮುನಿಯಪ್ಪ, ಆರ್‌.ರಘು, ಚಂದ್ರಶೇಖರಯ್ಯ, ಕ್ರೀಡಾಪಟು ಪ್ರಜ್ವಲ್‌ ಭೂಪಾಲ್‌, ಕೆಂಪೇಗೌಡ ಪ್ರಶಸ್ತಿ ಪುರಸ್ಕೃತ ಯತ್ರಪ್ಪ, ಸಮಾಜ ಸೇವಕ ವೇಣುಗೋಪಾಲ್‌, ಮೌಕ್ತಿಕಾಂಬ ದೇಗುಲ ಸಮಿತಿ ಅಧ್ಯಕ್ಷ ಎಸ್‌.ಆರ್‌.ವಿಜಯಕುಮಾರ್‌, ತಾಲೂಕು ಸೊಸೈಟಿ ನಿರ್ದೇಶಕ ಸಿ.ಎಂ.ನಾರಾಯಣಸ್ವಾಮಿ, ತಾಲೂಕು ಜೆಡಿಎಸ್‌ ಹಿಂದುಳಿದ ವರ್ಗಗಳ ಅಧ್ಯಕ್ಷ ಎಂ.ಲಕ್ಷ್ಮಣ್‌, ಗ್ರಾಪಂ ಮಾಜಿ ಸದಸ್ಯ ರಾಮಚಂದ್ರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next