ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರುಣಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಈವರೆಗೆ 1600 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ಅಭಿವೃದ್ಧಿಪಡಿಸಿದ್ದಾರೆ ಎಂದು ವರುಣಾ ಕ್ಷೇತ್ರದ ವಸತಿ ಜಾಗೃತಿ ಸಮಿತಿ ಅಧ್ಯಕ್ಷ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ವರುಣಾ ಕ್ಷೇತ್ರದ ಬಿಳಿಗಲಿ ಗ್ರಾಮದ ಲಿಂಗಾಯಿತರ ಬೀದಿಯ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ಅಭಿವೃದ್ಧಿಯ 70 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಗುರುವಾರ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು. ಕ್ಷೇತ್ರದಲ್ಲಿ ಸಾಮಾನ್ಯ ವರ್ಗದ ಜನರ ಬೀದಿಗಳ ರಸ್ತೆ ಅಭಿವೃದ್ಧಿಗೆ 117 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ.
ಶೇ.90 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರು ವಾಸಿಸುವ ರಸ್ತೆ ಮತ್ತು ಚರಂಡಿ ಕಾಮಗಾರಿಗಳು ಮುಗಿದಿವೆ. ಬಾಕಿ ಉಳಿದಿರುವ ಕಾಮಗಾರಿಗಳನ್ನು ಮಾಡಿಕೊಡುತ್ತೇವೆ ಎಂದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರ ವಹಿಸಿಕೊಂಡಾಗ ಅಭಿವೃದ್ಧಿಯಲ್ಲಿ ರಾಜ್ಯ 13ನೇ ಸ್ಥಾನದಲ್ಲಿತ್ತು.
ಕಳೆದ ನಾಲ್ಕೂವರೆ ವರ್ಷದಲ್ಲಿ ಕರ್ನಾಟಕ ರಾಜ್ಯವನ್ನು ಒಂದನೇ ಸ್ಥಾನಕ್ಕೆ ಮುಖ್ಯಮಂತ್ರಿಗಳು ತಂದು ಇಡೀ ದೇಶಕ್ಕೆ ಅಭಿವೃದ್ಧಿಯಲ್ಲಿ ಮಾದರಿ ಮಾಡಿದ್ದಾರೆ. ಹಸಿವು ಮುಕ್ತ, ಗುಡಿಸಲುಮುಕ್ತ, ಶೌಚಾಲಯಮುಕ್ತ ರಾಜ್ಯವಾಗಬೇಕೆಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕನಸು. ಈಗ ಅದು ನನಸಾಗುತ್ತಿದೆ.
ಸಮೃದ್ಧ ಕರ್ನಾಟಕ ನಿರ್ಮಾಣ ಮಾಡಲು ಹೊರಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈಯನ್ನು ನೀವೆಲ್ಲರೂ ಬಲಪಡಿಸಬೇಕೆಂದು ಮನವಿ ಮಾಡಿದರು. ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ ಎಂ. ರಾಮಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಸ್ವಾಮಿ,
ಕೆಎಚ್‌ಬಿ ನಿರ್ದೇಶಕ ಮಾಲೇಗೌಡ, ಗ್ರಾ.ಪಂ ಅಧ್ಯಕ್ಷ ಸೋಮಣ್ಣ, ತಾ.ಪಂ. ಸದಸ್ಯೆ ಲಿಂಗರಾಜಮ್ಮ, ಕೆಪಿಸಿಸಿ ಸದಸ್ಯ ಪುರುಷೋತ್ತಮ್, ಮುಖಂಡರಾದ ಹೊಸಕೋಟೆ ಕುಮಾರ, ಶಿವನಾಗ, ಪದ್ಮ, ಕುಮಾರ, ಮಹೇಶ್, ಶಿವಸ್ವಾಮಿ ನಾಗರಾಜ್ ಈ ಸಂದರ್ಭದಲ್ಲಿ ಹಾಜರಿದ್ದರು.