ಬೆಂಗಳೂರು: ಅಬಕಾರಿ ಇಲಾಖೆಯಲ್ಲಿ ರಕ್ಷಕ ಹುದ್ದೆ ಕೊಡಿಸುವುದಾಗಿ ಹುಬ್ಬಳ್ಳಿ ಮೂಲದ ವ್ಯಕ್ತಿಯೊಬ್ಬ ಗದಗ ಜಿಲ್ಲೆಯ ಯುವಕನಿಗೆ 15 ಲಕ್ಷ ರೂ. ವಂಚಿಸಿರುವ ಸಂಗತಿ ಬೆಳಕಿಗೆ ಬಂದಿದೆ.
ಈ ಸಂಬಂಧ ಗದಗ ಜಿಲ್ಲೆಯ ರವಿ ಶಿವಪ್ಪ ತಳವಾರ ಎಂಬುವರು ಮಾ.22ರಂದು ಉಪ್ಪಾರಪೇಟೆ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಆಧಾರದ ಮೇಲೆ ಹುಬ್ಬಳ್ಳಿಯ ತಾಜನಗರ ನಿವಾಸಿ ಸಾಯಿರಾಜ್ ಬಸವರಾಜ್ ರಾಮ್ ಜೀ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಶೋಧ ಮುಂದುವರಿಸಿದ್ದಾರೆ.
ಸ್ನೇಹಿತ ಆನಂದ್ ಎಂಬಾತನ ಮೂಲಕ ರವಿ ಅವರಿಗೆ ಕೆಲ ತಿಂಗಳ ಹಿಂದೆ ಆರೋಪಿಯ ಪರಿಚಯವಾಗಿತ್ತು. ಈ ವೇಳೆ ತಾನು ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿದ್ದು, ಬೆಂಗಳೂರಿನಲ್ಲಿರುವ ಹಿರಿಯ ಸರ್ಕಾರಿ ಅಧಿಕಾರಿಗಳ ಪರಿಚಯವಿದೆ.
ಹಣ ಕೊಟ್ಟರೆ, ಅಬಕಾರಿ ಇಲಾಖೆಯಲ್ಲಿ ಖಾಲಿ ಇರುವ ರಕ್ಷಕ ಹುದ್ದೆ ಕೊಡಿಸುತ್ತೇನೆ ಎಂದು ನಂಬಿಸಿದ್ದ. ಬಳಿಕ ಮಾತುಕತೆ ನಡೆಸಲು ರವಿ ಹಾಗೂ ಆತನ ಸ್ನೇಹಿತರನ್ನು ಮೆಜೆಸ್ಟಿಕ್ ಸಮೀಪದ ಖಾಸಗಿ ಹೋಟೆಲ್‌ಗೆ ಕರೆಸಿಕೊಂಡಿದ್ದ ಆರೋಪಿ, 15 ಲಕ್ಷ ರೂ. ಕೊಟ್ಟರೆ ಕೆಲಸ ಕೊಡಿಸುವುದಾಗಿ ಹೇಳಿದ್ದಾನೆ.
ಆರೋಪಿಯ ಮಾತು ನಂಬಿದ ರವಿ ಹಾಗೂ ಸ್ನೇಹಿತರು. ಆತ ಸೂಚಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ 15 ಲಕ್ಷ ರೂ. ವರ್ಗಾವಣೆ ಮಾಡಿದ್ದಾರೆ. ಆದರೆ, ಹಣ ಕೊಟ್ಟು ಬಹಳ ದಿನಗಳಾದರೂ ಆರೋಪಿ, ಕೆಲಸ ಕೊಡಿಸದೆ ತಲೆಮರೆಸಿಕೊಂಡಿದ್ದ. ಕರೆ ಮಾಡಿದರೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ ಎಂದು ರವಿ ದೂರಿನಲ್ಲಿ ಆರೋಪಿಸಿದ್ದಾರೆ ಎಂದು ಪೊಲೀಸರು ಹೇಳಿದರು