ಬೆಂಗಳೂರು: ಮಾಜಿ ಸಂಸದ ಡಿ.ಕೆ.ಸುರೇಶ್ ಸಹೋ ದರಿ ಎಂದು ಹೇಳಿಕೊಂಡು 14.6 ಕೆ.ಜಿ. ಚಿನ್ನ ಸಾಲ ಪಡೆದು ವಂಚಿಸಿದ ಪ್ರಕರಣದಲ್ಲಿ ಬಂಧನ ಕ್ಕೊಳಗಾಗಿರುವ ಐಶ್ವರ್ಯಾ ಗೌಡ ದಂಪತಿ ಮತ್ತೂಂದು ಚಿನ್ನಾಭರಣ ಅಂಗಡಿ ಮಾಲಿಕ ರಿಗೆ ಕೋಟ್ಯಂತರ ರೂ. ವಂಚಿಸಿರುವುದು ಬೆಳಕಿಗೆ ಬಂದಿದೆ.
ರಾಜರಾಜೇಶ್ವರಿನಗರ ನಿವಾಸಿ ಶಿಲ್ಪಾಗೌಡ ಎಂಬುವರು ನೀಡಿದ ದೂರಿನ ಮೇರೆಗೆ ರಾಜರಾಜೇಶ್ವರಿನಗರ ಠಾಣೆ ಪೊಲೀಸರು ಐಶ್ವರ್ಯಾ, ಆಕೆಯ ಪತಿ ಹರೀಶ್, ಬೌನ್ಸರ್ ಗಜ ಎಂಬುವರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಆರೋಪಿಗಳು ಇಲ್ಲಿಯೂ ಡಿ.ಕೆ.ಸುರೇಶ್ ಸಹೋ ದರಿ ಎಂದು ಹೇಳಿಕೊಂಡು ಮಹಿಳೆಯ ಸ್ನೇಹ ಬೆಳೆಸಿ ಬಳಿಕ ಆಕೆಯಿಂದ 3.25 ಕೋಟಿ ರೂ. ನಗದು ಹಾಗೂ 450 ಗ್ರಾಂ ಚಿನ್ನಾಭರಣ ಪಡೆದು ವಂಚಿಸಿರುವುದು ಪತ್ತೆಯಾಗಿದೆ.
ಏನಿದು ದೂರು?: ನಮ್ಮ ಮನೆಯ ಪಕ್ಕದ ರಸ್ತೆಯ ನಿವಾಸಿ ಐಶ್ವರ್ಯಾ ಗೌಡ 2 ವರ್ಷಗಳಿಂದ ಪರಿಚಯವಾಗಿದ್ದು, ಈ ವೇಳೆ ನಾನು ಡಿ.ಕೆ.ಸುರೇಶ್ ಸಹೋದರಿ ಎಂದು ಹೇಳಿಕೊಂಡಿದ್ದ ಐಶ್ವರ್ಯಾಗೌಡ, ನಾನು ಗೋಲ್ಡ್ ಬ್ಯುಸಿನೆಸ್, ಚಿಟ್ ಫಂಡ್ ವ್ಯವಹಾರ, ವಿಲ್ಲಾ ನಿರ್ಮಾಣ, ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದೇನೆ. ನೀವು ಹಣ ಹೂಡಿಕೆ ಮಾಡಿದರೆ ಅಧಿಕ ಲಾಭ ಪಡೆಯಬಹುದು ಎಂದು ನಂಬಿಸಿದ್ದರು. ಅಲ್ಲದೆ, ಕೆಲ ದಿನಗಳ ಬಳಿಕ ಐಶ್ವರ್ಯಾ ಗೌಡ ತನ್ನ ಬಳಿ ಚಿನ್ನ ಖರೀದಿ ಮಾಡಿದರೆ ಮಾರುಕಟ್ಟೆ ದರಕ್ಕಿಂತ ಕಡಿಮೆ ದರಕ್ಕೆ ಕೊಡಿಸುವುದಾಗಿ ಹೇಳಿದ್ದರು. ಆಕೆಯ ಮಾತು ನಂಬಿ ಸಂಬಂಧಿಕರು ಹಾಗೂ ಸ್ನೇಹಿತರಿಂದ ಹಣ ಪಡೆದು 65 ಲಕ್ಷ ರೂ. ನಗದು, 2.60 ಕೋಟಿ ರೂ. ಅನ್ನು ಐಶ್ವರ್ಯ ಗೌಡ ನೀಡಿದ್ದ ಸಾಯಿದಾ ಬಾಬು, ಧನು, ಶೀತಲ್, ಚೇತನ್, ಲಕ್ಷ್ಮೀ, ಪ್ರವೀಣ್, ಮಹೇಶ್, ಹರೀಶ್ ಹಾಗೂ ಇತರರ ಬ್ಯಾಂಕ್ ಖಾತೆಗಳಿಗೆ ವರ್ಗಾ ಯಿಸಿದ್ದೆ. ಅಂದರೆ, 2022ರ ಜನವರಿಂದ ಇದುವರೆಗೆ ಐಶ್ವರ್ಯಾ ಗೌಡಗೆ ಒಟ್ಟು 3.25 ಕೋಟಿ ರೂ. ನೀಡಿದ್ದೇನೆ ಎಂದು ಶಿಲ್ಪಾ ಗೌಡ ದೂರಿನಲ್ಲಿ ಉಲ್ಲೇಖೀಸಿದ್ದಾರೆ.
ಈ ನಡುವೆ 2023ರ ಜೂನ್ನಲ್ಲಿ ಐಶ್ವರ್ಯಾ ಗೌಡ ತನ್ನ ವ್ಯವಹಾರಕ್ಕೆ ತುರ್ತಾಗಿ ಹಣ ಬೇಕಿದೆ. ನಿಮ್ಮ ಚಿನ್ನಾಭರಣ ಕೊಟ್ಟರೆ, ಅಡಮಾನವರಿಸಿ ಅವ್ಯವಹಾರಕ್ಕೆ ಬಳಸಿಕೊಂಡು ಬಳಿಕ ವಾಪಸ್ ನೀಡುವುದಾಗಿ ಹೇಳಿದ್ದರು. ಆಕೆಯ ಮಾತು ನಂಬಿ ಮನೆಯಲ್ಲಿದ್ದ 430 ಗ್ರಾಂ ಚಿನ್ನಾಭರಣ ಕೊಟ್ಟಿದ್ದೆ. ಆದರೆ, ಇದುವರೆಗೂ ವಾಪಸ್ ನೀಡಿಲ್ಲ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಇತ್ತೀಚೆಗೆ ಐಶ್ವರ್ಯಾಗೌಡಗೆ ಕರೆ ಮಾಡಿ ಹಣ ಮತ್ತು ಚಿನ್ನಾಭರಣ ವಾಪಸ್ ನೀಡುವಂತೆ ಕೇಳಿದ್ದಕ್ಕೆ ಆಕೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೆ, ನನಗೆ ರಾಜಕೀಯ ಮುಖಂಡರ ಪರಿಚಯವಿದ್ದು, ನಿನ್ನ ಚಾರಿತ್ರ್ಯ ವಧೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾಳೆ. ಆಕೆಯ ಬೌನ್ಸರ್ ಗಜ ಕೂಡ ಬೆದರಿಕೆ ಹಾಕಿದ್ದಾನೆ. ಹೀಗಾಗಿ ಕೋಟ್ಯಂತರ ರೂ. ನಗದು ಹಾಗೂ ಚಿನ್ನಾ ಭರಣ ಪಡೆದು ವಂಚಿಸಿದ ಐಶ್ವರ್ಯಗೌಡ, ಪತಿ ಹರೀಶ್ ಹಾಗೂ ಬೌನ್ಸರ್ ಗಜ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಶಿಲ್ಪಾಗೌಡ ದೂರಿನಲ್ಲಿ ಕೋರಿದ್ದಾರೆ.
ಮಂಡ್ಯದಲ್ಲೂ ಐಶ್ವರ್ಯಗೌಡ ವಿರುದ್ಧ ಎಫ್ಐಆರ್ ದಾಖಲು :
ಮಂಡ್ಯ: ಚಿನ್ನ ವಂಚನೆ ಪ್ರಕರಣದ ಆರೋಪಿ ಐಶ್ವರ್ಯಗೌಡ ವಿರುದ್ಧ ಮಂಡ್ಯದಲ್ಲೂ ದೂರು ನೀಡಲಾಗಿದ್ದು, ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಗುತ್ತಲು ರಸ್ತೆಯ ಬಸವನಗುಡಿ ನಿವಾಸಿ ರವಿಕುಮಾರ್ ಹಾಗೂ ಅರಕೇಶ್ವರ ನಗರದ ಪೂರ್ಣಿಮಾ ಎಂಬುವರು ದೂರು ನೀಡಿದ್ದಾರೆ. ಆರೋಪಿ ಐಶ್ವರ್ಯಗೌಡ, ಪತಿ ಹರೀಶ್, ಸಹೋದರ ಹಳ್ಳಿ ಮಂಜುನಾಥ್ ವಿರುದ್ಧ ದೂರು ದಾಖಲಾಗಿದ್ದು, ಪೊಲೀಸರು ಐಪಿಸಿ ಸೆಕ್ಷನ್ 406, 417, 420, 120ಬಿ, 504, 34ರಡಿ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ದೂರುದಾರರಾದ ರವಿಕುಮಾರ್ ಬಳಿ 40 ಲಕ್ಷ ರೂ. ಹಾಗೂ ಪೂರ್ಣಿಮಾ ಬಳಿ 100 ಗ್ರಾಂ ಚಿನ್ನ, 15 ಲಕ್ಷ ರೂ. ನಗದು ತೆಗೆದುಕೊಂಡು ವಂಚನೆ ಮಾಡಿದ್ದಾರೆ. ಕಳೆದ 2016ರಿಂದ 2019ರವರೆಗೆ ಹಂತ ಹಂತವಾಗಿ ಹಣ ಪಡೆದುಕೊಂಡು ವಂಚನೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಮಂಡ್ಯ ಪೂರ್ವ ಠಾಣೆ ಪೊಲೀಸರು ಎಫ್ಐಆರ್ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.