ಬೆಂಗಳೂರು: ಕಳೆದ ವರ್ಷದ ಕೊನೆಯ ದಿನವಾದ ಡಿ.31ರಂದು ಬಿಬಿಎಂಪಿಯಲ್ಲಿ 12.5 ಕೋಟಿ ರೂ. ತೆರಿಗೆ ಸಂಗ್ರಹವಾಗಿದ್ದು, ದಾಖಲೆ ನಿರ್ಮಾಣವಾಗಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಬಿಬಿಎಂಪಿಯು 3,000 ಕೋಟಿ ರೂ. ತೆರಿಗೆ ಸಂಗ್ರಹಿಸುವ ಗುರಿ ಹೊಂದಿತ್ತು.
ಈ ಗುರಿ ತಲುಪಲು ಪಾಲಿಕೆಯಿಂದ ತೆರಿಗೆ ಸಂಗ್ರಹ ಆಂದೋಲ ಆಯೋಜಿಸಿ ಹೆಚ್ಚು ತೆರಿಗೆ ಬಾಕಿ ಉಳಿಸಿಕೊಂಡವರಿಗೆ ನೋಟಿಸ್ ಕೂಡ ಜಾರಿ ಮಾಡಲಾಗಿತ್ತು. ಅಲ್ಲದೆ, ಆಸ್ತಿ ತೆರಿಗೆ ಸಂಗ್ರಹ ಪ್ರಮಾಣ ಹೆಚ್ಚಿಸುವ ಕುರಿತು ಮೇಯರ್ ವಲಯವಾರು ಸಭೆಗಳನ್ನು ನಡೆಸಿದ್ದರು. ಆದರೆ, ಯಾವುದೇ ಪ್ರಯೋಜನವಾಗಿರಲಿಲ್ಲ.
ಒಂದೇ ದಿನ 12.5 ಕೋಟಿ ರೂ. ಸಂಗ್ರಹಕ್ಕೆ ಸಾಕ್ಷಿಯಾಗಿರುವ ಸೋಮವಾರ, ಅತೀ ಹೆಚ್ಚು ತೆರಿಗೆ ಸಂಗ್ರಹವಾದ ದಿನ ಎಂಬ ದಾಖಲೆಗೆ ಪಾತ್ರವಾಗಿದೆ. ಇದರೊಂದಿಗೆ ಕಳೆದ ವರ್ಷಾಂತ್ಯಕ್ಕೆ ಒಟ್ಟು 2,220 ಕೋಟಿ ರೂ. ತೆರಿಗೆ ಸಂಗ್ರಹಿಸಿದಂತಾಗಿದೆ. ಪೂರ್ವ ನಿಗದಿತ ಗುರಿಯಂತೆ ಪಾಲಿಕೆ ಕಂದಾಯ ವಿಭಾಗದ ಅಧಿಕಾರಿಗಳು ಮುಂದಿನ ಮೂರು ತಿಂಗಳ ಒಳಗಾಗಿ 880 ಕೋಟಿ ರೂ. ತೆರಿಗೆ ವಸೂಲಿ ಮಾಡಬೇಕಿದೆ.
ಬಿಬಿಎಂಪಿ ದಾಖಲೆಗಳ ಪ್ರಕಾರ ಈವರೆಗೆ 16.62 ಲಕ್ಷ ಆಸ್ತಿ ಮಾಲೀಕರು ತೆರಿಗೆ ಪಾವತಿಸಿದ್ದಾರೆ. ಅದರಲ್ಲಿ ಆನ್‌ಲೈನ್ ಮೂಲಕ 5.85 ಲಕ್ಷ ಮತ್ತು ಚಲನ್ ಮೂಲಕ 5.61 ಲಕ್ಷ ಮಂದಿ ತೆರಿಗೆ ಪಾವತಿಸಿದ್ದಾರೆೆ. ಉಳಿದ ಆಸ್ತಿ ಮಾಲೀಕರು ಚೆಕ್, ಇನ್ನಿತರ ವಿಧಾನಗಳ ಮೂಲಕ ತೆರಿಗೆ ಪಾವತಿಸಿದ್ದರೆ ಎಂದು ಪಾಲಿಕೆ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಪ್ರಸಕ್ತ ಆರ್ಥಿಕ ವರ್ಷ 3,000 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಹೊಂದಿದ್ದು, ಇನ್ನು ಮೂರು ತಿಂಗಳು ಬಾಕಿ ಇರುವಾಗಲೇ 2200 ಕೋಟಿ ರೂ. ಸಂಗ್ರಹಿಸಲಾಗಿದೆ. ಉಳಿದ 3 ತಿಂಗಳಲ್ಲಿ 800 ಕೋಟಿ ರೂ. ಸಂಗ್ರಹಿಸಿ ಗುರಿ ಮುಟ್ಟುತ್ತೇವೆ ಎಂಬ ಆತ್ಮವಿಶ್ವಾಸವಿದೆ.
-ಎಂ.ಶಿವರಾಜು, ಬಿಬಿಎಂಪಿ ಆಡಳಿತ ಪಕ್ಷದ ನಾಯಕ