ಬೆಂಗಳೂರು: ಬಿಜೆಪಿ ಮುಖಂಡ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ್ ಬಗರ್ ಹುಕುಂ ಸಮಿತಿಯಲ್ಲಿ 10 ಸಾವಿರ ಕೋಟಿ ರೂ. ಬೆಲೆ ಬಾಳುವ ಭೂಮಿಯನ್ನು ಕಾನೂನು ಬಾಹಿರವಾಗಿ ಮಂಜೂರು ಮಾಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ವಿ.ಎಸ್. ಉಗ್ರಪ್ಪ ಆರೋಪಿಸಿದ್ದಾರೆ.
ಎಸಿಬಿ ಅಶೋಕ್ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸಬೇಕು. ರಾಜ್ಯ ಸರ್ಕಾರ ಅಕ್ರಮವಾಗಿ ಮಂಜೂರು ಮಾಡಿದ ಜಮೀನು ವಶ ಪಡಿಸಿಕೊಂಡು ಅಶೋಕ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಈ ಬಗ್ಗೆ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ದಾಖಲೆ ಬಿಡುಗಡೆ ಮಾಡಿದ ಅವರು, ಬೆಂಗಳೂರು ದಕ್ಷಿಣ ತಾಲೂಕಿನ ಹಳ್ಳಿಗಳಲ್ಲಿ ಸುಮಾರು 245.17 ಎಕರೆ ಜಮೀನನ್ನು ಕಾನೂನು ಬಾಹಿರವಾಗಿ ಸಂಬಂಧಿಕರು ಹಾಗೂ ಅರ್ಹತೆ ಇಲ್ಲದವರಿಗೆ ಅಶೋಕ್ ಅಧ್ಯಕ್ಷತೆಯ ಬಗರ್ ಹುಕುಂ ಸಮಿತಿ ಮಂಜೂರು ಮಾಡಿದೆ ಎಂದು ಆರೋಪಿಸಿದರು.
ಬೆಂಗಳೂರು ದಕ್ಷಿಣ ತಾಲೂಕಿನಲ್ಲಿ ಆರ್.ಅಶೋಕ್ ಅಧ್ಯಕ್ಷರಾಗಿದ್ದ ಬಗರ್ ಹುಕುಂ ಸಮಿತಿಯಲ್ಲಿ ಕರ್ನಾಟಕ ಭೂ ಕಂದಾಯ ಕಾಯ್ದೆ ಅನ್ವಯ ಅನಧಿಕೃತವಾಗಿ 16 ಗ್ರಾಮಗಳಲ್ಲಿ ಮಾಜಿ ಕಾರ್ಪೊರೇಟರ್ ಮತ್ತು ಅವರ ಕುಟುಂಬಸ್ಥರು, ಕಬಡ್ಡಿ ಬಾಬು ಕುಟುಂಬಸ್ಥರು, ವಕೀಲ ಎ.ಪಿ. ರಂಗನಾಥ ಹಾಗೂ ಕುಟುಂಬ, ಜಿಪಂ ಮಾಜಿ ಸದಸ್ಯರು, ಉದ್ಯಮಿ ಆದಿಕೇಶವಲು ಸಂಬಂಧಿಕರು ಮತ್ತು ಬಿಜಿಎಸ್ ಮಠಕ್ಕೆ ಜಮೀನು ಮಂಜೂರು ಮಾಡಿದ್ದಲ್ಲದೇ ಗ್ರಾಮದಲ್ಲಿ ವಾಸವಿರದ ಆರ್ಥಿಕ ಸದೃಢರಿಗೂ 162 ಎಕರೆ ಜಮೀನು ಕಾನೂನು ಬಾಹಿರವಾಗಿ ಮಂಜೂರು ಮಾಡಿದ್ದಾರೆ ಎಂದು ಉಗ್ರಪ್ಪ ಆರೋಪಿಸಿದರು.
ಆರ್. ಅಶೋಕ್ ಮತ್ತು ಎಂ. ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ 1992-93 ರಿಂದ 2005-06 ರ ವರೆಗೆ ನಿಯಮ ಬಾಹಿರವಾಗಿ 88 ಫಲಾನುಭವಿಗಳಿಗೆ ಮಂಜೂರು ಮಾಡಿದ್ದು, 254 ಎಕರೆ 17 ಗುಂಟೆ ಜಮೀನನ್ನು ಮಂಜೂರಾತಿ ರದ್ದು ಪಡಿಸಿ ಬೆಂಗಳೂರು ದಕ್ಷಿಣ ಉಪ ವಿಭಾಗಾಧಿಕಾರಿ ಆದೇಶ ಹೊರಡಿಸಿದ್ದು, ಸರ್ಕಾರ ಎಸಿ ಆದೇಶದಂತೆ ಅಕ್ರಮವಾಗಿ ಮಂಜೂರು ಮಾಡಿದ್ದ ಜಮೀನು ವಾಪಸ್ ಪಡೆದು ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಮೋಹನ್ ಕೊಂಡಜ್ಜಿ ಹಾಗೂ ಪಿ.ಆರ್. ರಮೇಶ್ ಹಾಜರಿದ್ದರು.
ಐಟಿ ತನಿಖೆಯಲ್ಲಿ ಪ್ರಧಾನಿ ಹಸ್ತಕ್ಷೇಪ
ಇಂಧನ ಸಚಿವ ಡಿ.ಕೆ. ಶಿವಕುಮಾರ್ ಮನೆಯಲ್ಲಿ ಕಂತೆ ಕಂತೆ ಹಣ ಸಿಕ್ಕಿದೆ ಎಂದು ಪ್ರಧಾನಿ ಹೇಳಿರುವುದನ್ನು ನೋಡಿದರೆ, ಐಟಿ ಇಲಾಖೆಯ ಬಗ್ಗೆ ಅವರಿಗೆ ಮಾಹಿತಿ ನೀಡಿದವರು ಯಾರು, ಪ್ರಧಾನಿ ಆದಾಯ ತೆರಿಗೆ ಇಲಾಖೆಯ ತನಿಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಉಗ್ರಪ್ಪ ಆರೋಪಿಸಿದರು.
ರಾಜ್ಯದಲ್ಲಿ 165 ತಾಲೂಕುಗಳಲ್ಲಿ ಬರ ಇದ್ದರೂ ಪ್ರಧಾನಿ ಅರ್ಧ ದಿನ ಬರ ಪ್ರದೇಶಗಳ ಪ್ರವಾಸ ಮಾಡಿ ಪರಿಹಾರ ನೀಡುವ ಬಗ್ಗೆ ಯೋಚನೆ ಮಾಡದೇ ಅನಗತ್ಯ ಆರೋಪ ಮಾಡುತ್ತಿದ್ದಾರೆ ಎಂದು ಉಗ್ರಪ್ಪ ಆರೋಪಿಸಿದರು.