Advertisement

ಆರ್‌.ಆರ್‌. ನಗರದಲ್ಲಿ ಡಿ.ಕೆ.ಸುರೇಶ್‌ ಕಾರ್ಯತಂತ್ರ

11:40 AM Oct 27, 2020 | Suhan S |

ಬೆಂಗಳೂರು: ರಾಜರಾಜೇಶ್ವರಿ ನಗರ ಕ್ಷೇತ್ರದ ಉಪ ಚುನಾವಣೆಯನ್ನು ಪ್ರತಿಷ್ಠೆ ಯಾಗಿ ತೆಗೆದುಕೊಂಡಿರುವ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಸಂಸದ ಡಿ.ಕೆ.ಸುರೇಶ್‌, ಕಳೆದ ಒಂದು ವಾರದಿಂದ ಕ್ಷೇತ್ರದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಸುತ್ತಾಡಿ ಪಕ್ಷದ ಅಭ್ಯರ್ಥಿ ಕುಸುಮಾರನ್ನು ಗೆಲ್ಲಿಸಿ ಕೊಂಡು ಬರಲು ಕಸರತ್ತು ನಡೆಸಿದ್ದಾರೆ.

Advertisement

ಆರ್‌.ಆರ್‌. ನಗರ ಚುನಾವಣೆ ಘೋಷಣೆಗೂ ಮೊದಲೇ ಮೂರು ತಿಂಗಳು ಕ್ಷೇತ್ರದಲ್ಲಿ ಅಭ್ಯರ್ಥಿ ಆಯ್ಕೆ ಬಗ್ಗೆ ತೆರೆ ಮರೆಯಲ್ಲಿ ಕಾರ್ಯತಂತ್ರ ರೂಪಿಸಿದ್ದ ಡಿ.ಕೆ. ಸುರೇಶ್‌ ಕಸುಮಾ ಅವರನ್ನು ಅಭ್ಯರ್ಥಿಯನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ, ಕುಸುಮಾ ಅಭ್ಯರ್ಥಿ ಎಂದು ಆಯ್ಕೆ ಯಾದ ಸಂದರ್ಭದಲ್ಲಿ ಸೋಂಕಿಗೆ ತುತ್ತಾಗಿದ್ದರು. ಕೋವಿಡ್ ದಿಂದ ಗುಣಮುಖರಾದ ನಂತರ ಡಿ.ಕೆ.ಸುರೇಶ್‌ ಪ್ರತಿ ದಿನವೂ ಕ್ಷೇತ್ರದಲ್ಲಿಯೇ ಮೊಕ್ಕಾಂ ಹೂಡಿದ್ದು, ತಳ ಮಟ್ಟದಲ್ಲಿ ಕಾರ್ಯಕರ್ತರ ಜತೆ ಸಭೆಗಳನ್ನು ನಡೆಸಿ, ಬೇರೆ ಪಕ್ಷಗಳಿಂದ ಸೇರ್ಪಡೆಯಾಗುವ ಕಾರ್ಯಕರ್ತರನ್ನು ಪಕ್ಷಕ್ಕೆ ಸೆಳೆಯುವ ಕೆಲಸ ಮಾಡುತ್ತಿದ್ದಾರೆ.

ಕಾರ್ಯಕರ್ತರಿಗೆ ಧೈರ್ಯ: ರಾಜರಾಜೇಶ್ವರಿ ನಗರದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ವಿರುದ್ಧ ಅನಗತ್ಯ ದೂರು ಸಲ್ಲಿಸಿ ಕಿರಿ ಮಾಡಲಾಗುತ್ತಿದೆ ಎಂಬ ಕಾರಣಕ್ಕೆ ಕಾಂಗ್ರೆಸ್‌ ಕಾರ್ಯಕರ್ತರು ಆತಂಕಕ್ಕೆ ಒಳಗಾಗಿದ್ದಾರೆ. ಅಲ್ಲದೇ ಹೊರಗಿನವರು ಕ್ಷೇತ್ರದಲ್ಲಿ ಬಂದು ಜನರಿಂದ ಓಟರ್‌ ಐಡಿ ಪಡೆದುಕೊಂಡು ಹಣ ಹಂಚುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಅದನ್ನು ಪ್ರಶ್ನಿಸುವ ಕಾಂಗ್ರೆಸ್‌ ಕಾರ್ಯಕರ್ತರ ಮೇಲೆ ಹಲ್ಲೆ ಹಾಗೂ ಅವರ ವಿರುದ್ಧ ಪ್ರಕರಣ ದಾಖಲಿಸುವ ಕೆಲಸ ನಡೆಯುತ್ತಿದೆ ಎಂದು ಕಾಂಗ್ರೆಸ್‌ ಕಾರ್ಯಕರ್ತರು ಭಯದ ವಾತಾವರಣವಿದೆ ಎಂದು ಆತಂಕ ಗೊಂಡಿದ್ದಾರೆ.

ಇಂತಹ ಕಾರ್ಯಕರ್ತರಲ್ಲಿ ಧೈರ್ಯ ತುಂಬುವ ಕೆಲಸ ಮಾಡುತ್ತಿರುವ ಸಂಸದ ಡಿ.ಕೆ.ಸುರೇಶ್‌ ಕಾಂಗ್ರೆಸ್‌ ಕಾರ್ಯ ಕರ್ತರ ಮೇಲೆ ಹಲ್ಲೆ ನಡೆಸಿದ್ದ ಬಿಜೆಪಿಯ ಮಾಜಿ ಕಾರ್ಪೊರೇಟ  ರನ್ನು ಬಂಧಿಸುವಂತೆ ಪೊಲೀಸ್‌ ಠಾಣೆ ಎದುರು ಪ್ರತಿಭಟನೆ ನಡೆಸಿದರು. ಅಲ್ಲದೇ ಕ್ಷೇತ್ರದಲ್ಲಿ ಯಾವುದೇ ಕಾರಣಕ್ಕೂ ಪಕ್ಷದ ಕಾರ್ಯಕರ್ತರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎನ್ನುವ ಮೂಲಕ ಕಾರ್ಯಕರ್ತರಲ್ಲಿ ಧೈರ್ಯ ತುಂಬಿ ಚುನಾವಣಾ ಕಣದಲ್ಲಿ ಸಕ್ರೀಯರಾಗಿ ಕೆಲಸ ಮಾಡುವಂತೆ ಹುರಿದುಂಬಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆರ್‌.ಆರ್‌.ನಗರ ಕ್ಷೇತ್ರದಲ್ಲಿ ವಿವಿಧ ಸಮುದಾಯಗಳ ಸಭೆಗಳು ಹಾಗೂ ಕಾರ್ಯತಂತ್ರಗಳ ರೂಪಿಸುವಲ್ಲಿ ಹೆಚ್ಚು ಸಕ್ರೀಯರಾಗಿರುವುದರಿಂದ ಡಿ.ಕೆ. ಸುರೇಶ್‌ ಆರ್‌.ಆರ್‌.ನಗರದಲ್ಲಿ ತಳ ಮಟ್ಟದಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಸೇರಿಕೊಂಡು ಕೈ ಅಭ್ಯರ್ಥಿ ಗೆಲವಿಗೆ ಶ್ರಮಿಸುತ್ತಿದ್ದಾರೆ.

ಗೆಲುವಿಗಾಗಿ ಉರುಳು ಸೇವೆ :  ಆರ್‌. ಆರ್‌.ನಗರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾ ಸೋಮವಾರ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಉರುಳು ಸೇವೆ ಸಲ್ಲಿಸಿದ್ದಾರೆ. ತಮ್ಮ ತಂದೆಯೊಂದಿಗೆ ರಾಜರಾಜೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು. ನಂತರ ಕ್ಷೇತ್ರದ ಜನತೆಯ ಒಳಿತಿಗಾಗಿ ಉರುಳು ಸೇವೆ ಸಲ್ಲಿಸಿದ ಅವರು, ತಾಯಿ ರಾಜರಾಜೇಶ್ವರಿ ಎಲ್ಲರಿಗೂ ಸುಖ ಶಾಂತಿ, ನೆಮ್ಮದಿ ನೀಡಿ ಒಳ್ಳೆಯದು ಮಾಡಲಿ ಎಂದು ಪ್ರಾರ್ಥಿಸಿರುವುದಾಗಿ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next