Advertisement

ನಾಲ್ಕಕ್ಕೆ ನಾಗಾಲೋಟ ಬೆಳೆಸೀತೇ ರಾಯಲ್‌ ಚಾಲೆಂಜರ್ ?

10:43 PM Apr 21, 2021 | Team Udayavani |

ಮುಂಬಯಿ : ಗೆಲುವಿನ ನಾಗಾಲೋಟ ಮುಂದುವರಿಸುತ್ತಿರುವ ಆರ್‌ಸಿಬಿ ತನ್ನ ಅಭಿಯಾನವನ್ನು ನಾಲ್ಕಕ್ಕೆ ವಿಸ್ತರಿಸುವ ಯೋಜನೆಯಲ್ಲಿದೆ. ಗುರುವಾರದ ಮುಖಾ ಮುಖೀಯಲ್ಲಿ ಕೊಹ್ಲಿ ಪಡೆಯನ್ನು ಎದುರಿಸುವ ತಂಡ ರಾಜಸ್ಥಾನ್‌ ರಾಯಲ್ಸ್‌. ಆರ್‌ಸಿಬಿಗೆ ಇದು ಮುಂಬಯಿಯಲ್ಲಿ ಮೊದಲ ಪಂದ್ಯವಾಗಿದೆ.

Advertisement

“ವಾಂಖೇಡೆ ಟ್ರ್ಯಾಕ್‌’ ಬ್ಯಾಟಿಂಗಿಗೆ ಹೆಚ್ಚಿನ ನೆರವು ನೀಡಲಿರುವ ಕಾರಣ ಇಲ್ಲಿ ಚೇಸಿಂಗ್‌ ನಡೆಸುವ ತಂಡಕ್ಕೆ ಮೇಲುಗೈ ಅವಕಾಶ ಜಾಸ್ತಿ. ಹೀಗಾಗಿ ಟಾಸ್‌ ಗೆಲುವು ನಿರ್ಣಾಯಕವಾಗಲಿದೆ.

ಆರ್‌ಸಿಬಿ ಬ್ಯಾಟಿಂಗ್‌ ಬಲಿಷ್ಠ
ಚೆನ್ನೈಯ ಬೌಲಿಂಗ್‌ ಟ್ರ್ಯಾಕ್‌ನಲ್ಲೂ ಚೇತೋಹಾರಿ ಬ್ಯಾಟಿಂಗ್‌ ನಡೆಸಿದ ಆರ್‌ಸಿಬಿ ವಾಂಖೇಡೆಯಲ್ಲಿ ರನ್‌ ಮಳೆ ಸುರಿಸುವ ಸಾಧ್ಯತೆ ಇದೆ. ಅಮೋಘ ಫಾರ್ಮ್ನಲ್ಲಿರುವ ಮ್ಯಾಕ್ಸ್‌ವೆಲ್‌, ಎಬಿಡಿ ಹೊಡಿಬಡಿ ಆಟಕ್ಕಿಳಿದರೆ, ನಾಯಕ ಕೊಹ್ಲಿ ಕೂಡ ಸಿಡಿದು ನಿಂತರೆ ತಂಡ ಇನ್ನೂರರ ಗಡಿ ದಾಟುವುದನ್ನು ತಡೆಯುವುದು ಕಷ್ಟವಾದೀತು.

ರಾಜಸ್ಥಾನ್‌ ಬೌಲಿಂಗ್‌ ದುರ್ಬಲ
ರಾಜಸ್ಥಾನ್‌ ಕೂಡ ಬ್ಯಾಟಿಂಗ್‌ ಬಲವನ್ನೇ ನೆಚ್ಚಿಕೊಂಡಿರುವ ತಂಡ. ದೊಡ್ಡ ಮೊತ್ತವನ್ನು ಚೇಸ್‌ ಮಾಡುವುದರಲ್ಲಿ ಸದಾ ಒಂದು ಕೈ ಮೇಲು. ಐಪಿಎಲ್‌ ನಾಯಕತ್ವದ ಮೊದಲ ಪಂದ್ಯದಲ್ಲೇ ಸೆಂಚುರಿ ಬಾರಿಸಿದ ಮೊದಲಿಗನೆಂಬ ಹಿರಿಮೆಯ ಸಂಜು ಸ್ಯಾಮ್ಸನ್‌ ಮೇಲೆ ತಂಡ ಹೆಚ್ಚಿನ ನಿರೀಕ್ಷೆ ಇರಿಸಿಕೊಂಡಿದೆ. ಬಟ್ಲರ್‌, ಮಿಲ್ಲರ್‌, ವೋಹ್ರಾ, ಪರಾಗ್‌, ತೇವಟಿಯಾ, ಮಾರಿಸ್‌ ಕೂಡ ಮುನ್ನುಗ್ಗಿ ಬಾರಿಸುವವರೇ ಆಗಿದ್ದಾರೆ.

ಬೌಲಿಂಗ್‌ನಲ್ಲಿ ಚೇತನ್‌ ಸಕಾರಿಯಾ ಹೊರತುಪಡಿಸಿ ಉಳಿದವರೆಲ್ಲ ದುಬಾರಿಯಾ ಗುತ್ತಿದ್ದಾರೆ. ಜತೆಗೆ ಅನುಭವಿ ಸ್ಪಿನ್ನರ್‌ ಕೊರತೆಯೂ ತಂಡಕ್ಕೆ ಹಿನ್ನೆಡೆಯಾಗಿದೆ. ಈ ಸಮಸ್ಯೆಯನ್ನು ಹೋಗಲಾಡಿಸಿಕೊಂಡರೆ ರಾಜಸ್ಥಾನ್‌ಗೆ ಮೇಲುಗೈ ಅವಕಾಶ ಇದೆ.

Advertisement

ಬೌಲಿಂಗ್‌ ಪ್ರಯೋಗ ಸಲ್ಲದು
ಆರ್‌ಸಿಬಿಯ ಬೌಲಿಂಗ್‌ ವಿಭಾಗ ಕೂಡ ಈ ಬಾರಿ ಹೆಚ್ಚು ಘಾತಕ ಹಾಗೂ ವೈವಿಧ್ಯಮಯವಾಗಿದೆ. ಆದರೆ ಕೊನೆಯ ಹಂತದಲ್ಲಿ ಅನುಭವಿ ಬೌಲರ್‌ಗಳ ಓವರ್‌ ಬಾಕಿ ಇದ್ದರೂ ಸ್ಪಿನ್ನರ್‌ಗಳಿಗೋ ಅಥವಾ ಪಾರ್ಟ್‌ಟೈಮ್‌ ಬೌಲರ್‌ಗಳ ಕೈಗೆ ಚೆಂಡನ್ನಿತ್ತು ಪ್ರಯೋಗಕ್ಕಿಳಿಯುವ “ಹವ್ಯಾಸ’ವೊಂದು ಕ್ಯಾಪ್ಟನ್‌ ಕೊಹ್ಲಿಗೆ ಇದೆ. ಕೆಕೆಆರ್‌ ಎದುರಿನ ಪಂದ್ಯದಲ್ಲಿ ರಸೆಲ್‌ ಸಿಡಿಯುತ್ತಿದ್ದಾಗ ಸ್ಪಿನ್ನರ್‌ ಚಹಲ್‌ಗೆ ಓವರ್‌ ನೀಡಿದ್ದು ಇದಕ್ಕೊಂದು ಉತ್ತಮ ನಿದರ್ಶನ. ಸ್ವತಃ ಕೊಹ್ಲಿಯೇ ಒಂದು ಪಂದ್ಯದಲ್ಲಿ ಬೌಲಿಂಗ್‌ ಮಾಡಿ 28 ರನ್‌ ನೀಡುವ ಮೂಲಕ ಪಂದ್ಯದ ಸೋಲಿಗೆ ಕಾರಣವಾದುದನ್ನು ಮರೆಯುವಂತಿಲ್ಲ. ಹೀಗಾಗಿ ಅತಿಯಾದ ಆತ್ಮವಿಶ್ವಾಸ ಸಲ್ಲದು.

Advertisement

Udayavani is now on Telegram. Click here to join our channel and stay updated with the latest news.

Next