ಬೆಂಗಳೂರು: ಹತ್ಯೆ, ಕೊಲೆ ಯತ್ನ ಪ್ರಕರಣಗಳಲ್ಲಿ ಬಂಧಿಸಲು ಹೋದವರ ಮೇಲೆಯೇ ಹಲ್ಲೆ ನಡೆಸಿದ ರೌಡಿಶೀಟರ್ ವಾಸುದೇವ್ ಅಲಿಯಾಸ್ ಆಂದ್ರಹಳ್ಳಿ ವಾಸುನನ್ನು ಸಿಸಿಬಿ ಪೊಲೀಸರು ಗುಂಡಿನ ದಾಳಿ ನಡೆಸಿ ಬಂಧಿಸಿದ್ದಾರೆ. ಪೊಲೀಸರ ಗುಂಡು ವಾಸುವಿನ ಬಲಗಾಲಿಗೆ ಬಿದ್ದಿದೆ. ಅಲ್ಲದೆ ಸಿಸಿಬಿ ಮುಖ್ಯಪೇದೆ ಉಮೇಶ್ ಅವರಿಗೂ ಗಾಯಗಳಾಗಿದ್ದು, ಕೆಂಗೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಜರಾಜೇಶ್ವರಿನಗರ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದಿದ್ದ ದರೋಡೆ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ಈತನಿಗಾಗಿ ಕಳೆದೊಂದು ತಿಂಗಳಿಂದ ಹುಡುಕಾಟ ನಡೆಸುತ್ತಿದ್ದರು. ವಾಸು ಮಂಗಳವಾರ ಸಂಜೆ ತನ್ನ ಸ್ನೇಹಿತನ ಹುಟ್ಟುಹಬ್ಬ ಆಚರಣೆಗಾಗಿ ಜ್ಞಾನಭಾರತಿ ಆವರಣದಲ್ಲಿ ಹೋಗುತ್ತಿದ್ದಾನೆ ಎಂಬ ಮಾಹಿತಿ ಸಂಗ್ರಹಿಸಿದ ಸಿಸಿಬಿ ಪಿಐ ಮಂಜುನಾಥ್ ತಮ್ಮ ತಂಡದೊಂದಿಗೆ ತೆರಳಿದ್ದರು. ಆದರೆ, ಆರೋಪಿ ಕ್ಷಣಾರ್ಧದಲ್ಲಿ ತಪ್ಪಿಸಿಕೊಂಡಿದ್ದು, ಆತನ ಚಲನವಲನಗಳ ಬಗ್ಗೆ ತೀವ್ರ ನಿಗಾವಹಿಸಿದ್ದರು.
ನಂತರ ರಾತ್ರಿ 9ಗಂಟೆ ಸುಮಾರಿಗೆ ಮರಿಯಪ್ಪನಪಾಳ್ಯದಲ್ಲಿ ಬೈಕ್‌ನಲ್ಲಿ ತೆರಳುವಾಗ ಪೊಲೀಸರು ಬೈಕ್ ನಿಲ್ಲಿಸುವಂತೆ ಸೂಚಿಸಿದ್ದಾರೆ. ಆದರೆ, ವಾಸು ಬೈಕ್ ನಿಲ್ಲಿಸದೇ ವೇಗವಾಗಿ ಹೋಗಲು ಯತ್ನಿಸಿದ್ದಾನೆ. ತಮ್ಮ ವಾಹನದಲ್ಲಿ ಸುಮಾರು ಒಂದು ಕಿಲೋಮೀಟರ್‌ವರೆಗೆ ಹಿಂಬಾಲಿಸಿದ ಪೊಲೀಸರು, ಬೈಕ್‌ಗೆ ಡಿಕ್ಕಿ ಹೊಡೆದಿದ್ದಾರೆ. ಆಗ ಸಿಸಿಬಿ ಇನ್ಸ್‌ಪೆಕ್ಟರ್ ಮಂಜುನಾಥ್ ಆರೋಪಿಗೆ ಶರಣಾಗುವಂತೆ ಸೂಚಿಸಿದ್ದಾರೆ. ಇದನ್ನು ಕೇಳದ ಆತ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ.
ಇದೇ ವೇಳೆ ಮುಖ್ಯ ಪೇದೆ ಉಮೇಶ್, ವಾಸುನನ್ನು ಬಂಧಿಸಲು ತೆರಳಿದಾಗ ಅವರ ಕುತ್ತಿಗೆ ಮತ್ತು ಕೈ ಮೇಲೆ ಡ್ಯಾ†ಗರ್‌ನಿಂದ ಹಲ್ಲೆ ನಡೆಸಿದ್ದಾನೆ. ಬಳಿಕ ಮಂಜುನಾಥ್ ಮೇಲೂ ಹಲ್ಲೆ ನಡೆಸಲು ಯತ್ನಿಸಿದಾಗ ಆತ್ಮರಕ್ಷಣೆಗಾಗಿ ಆರೋಪಿ ಬಲಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. 2016ರಲ್ಲಿ ರಾಜಗೋಪಾಲ್‌ನಗರದಲ್ಲಿ ಸಿ.ಡಿ ನರಸಿಂಹ ಎಂಬುವವರನ್ನು ಕೊಲೆ ಮಾಡಲು ಯತ್ನಿಸಿ ತಲೆಮರೆಸಿಕೊಂಡಿದ್ದ.
ಈತನ ವಿರುದ್ಧ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ 2 ಕೊಲೆ ಪ್ರಕರಣ, 4 ದರೋಡೆ ಮತ್ತು ಒಂದು ಕೊಲೆ ಯತ್ನ ಪ್ರಕರಣ ದಾಖಲಾಗಿದೆ. ಅಷ್ಟೇ ಅಲ್ಲದೇ, ಈಹಿಂದೆ ರಾಜಾಜಿನಗರದಲ್ಲಿ ದರೋಡೆಗೆ ಯತ್ನಿಸುವಾಗ ವಾಸುದೇವ್ ಸಹಚರರನ್ನು ಬಂಧಿಸಲಾಗಿತ್ತು. ಆಗ ಆರೋಪಿ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.