Advertisement

Arrested: ರೌಡಿ ಕೊಲೆ; 20 ವರ್ಷ ಬಳಿಕ ಚಿತ್ರ ನಿರ್ದೇಶಕ ಸೆರೆ

10:47 AM Jul 18, 2024 | Team Udayavani |

ಬೆಂಗಳೂರು: ವಿಲ್ಸನ್‌ಗಾರ್ಡನ್‌ ಠಾಣೆ ವ್ಯಾಪ್ತಿ ಯಲ್ಲಿ 2004ರಲ್ಲಿ ನಡೆದಿದ್ದ ರೌಡಿಶೀಟರ್‌ ಕೊಲೆ ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ ಸಿನಿಮಾ ನಿರ್ದೇಶಕನನ್ನು ಸಿಸಿಬಿಯ ಸಂಘಟಿತ ಅಪರಾಧ ದಳದ ಪೊಲೀಸರು 20 ವರ್ಷಗಳ ಬಳಿಕ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಸದ್ದುಗುಂಟೆಪಾಳ್ಯ ನಿವಾಸಿ ಗಜೇಂದ್ರ ಅಲಿಯಾಸ್‌ ಗಜ (46)  ಎಂಬಾತನನ್ನು ಬಂಧಿಸಲಾಗಿದೆ. 2004ರಲ್ಲಿ  ರಾಜಕೀಯ ರ್ಯಾಲಿಯಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿತ್ತು. ಆಗ ಒಂದು ಗುಂಪು ರೌಡಿಶೀಟರ್‌ ಆಗಿದ್ದ ರವಿ ಅಲಿಯಾಸ್‌ ಕೊತ್ತ ರವಿ ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿತ್ತು. ಈ ಸಂಬಂಧ ವಿಲ್ಸನ್‌ ಗಾರ್ಡನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಚಂದ್ರಪ್ಪ ಮತ್ತು ಬಾಬು ಎಂಬುವರ ಜತೆಗೆ 8ನೇ ಆರೋಪಿಯಾಗಿದ್ದ ಗಜೇಂದ್ರನನ್ನು ಬಂಧಿಸಲಾಗಿತ್ತು. 1 ವರ್ಷದ ಬಳಿಕ ಆರೋಪಿ ಜಾಮೀನು ಪಡೆದು ಕೊಂಡು ಬಿಡುಗಡೆಯಾಗಿದ್ದ. ಆ ನಂತರ ಆರೋಪಿ ತಮಿಳುನಾಡಿನ ವೆಲ್ಲೂರಿನಲ್ಲಿ 3 ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ. ಬಳಿಕ ಬೆಂಗಳೂರಿಗೆ ಬಂದು, ಕುಟುಂಬ ಸಮೇತ ಸುದ್ದಗುಂಟೆಪಾಳ್ಯದಲ್ಲಿ ವಾಸವಾಗಿದ್ದ ಎಂದು ಪೊಲೀಸರು ಹೇಳಿದರು.

ಸಿನಿಮಾ ನಿರ್ದೇಶಕ: ಬೆಂಗಳೂರಿಗೆ ಬಂದಿದ್ದ ಗಜೇಂದ್ರ, ಸಿನಿಮಾ ನಿರ್ದೇಶನದ ಬಗ್ಗೆ ಒಲವು ಬೆಳೆಸಿಕೊಂಡು ಸ್ಯಾಂಡಲ್‌ವುಡ್‌ನ‌ಲ್ಲಿ “ಪುಟಾಣಿ ಪವರ್‌’ ಸೇರಿ 3 ಸಿನಿಮಾಗಳನ್ನು ನಿರ್ದೇಶಿಸಿದ್ದಾನೆ. ಆದರೂ ತನ್ನ ಮೇಲಿನ ಕೊಲೆ ಕೇಸ್‌ ಬಗ್ಗೆ ಭಯಗೊಂಡಿದ್ದ ಗಜೇಂದ್ರ, ಪೊಲೀಸರು ಮರೆತಿ ದ್ದಾರೆ ಎಂದು ಭಾವಿಸಿ ಓಡಾಡಿಕೊಂಡಿದ್ದ. ಆದರೆ, ಕೋರ್ಟ್‌ಗೆ ಹಾಜರಾಗದೆ ನಾಪತ್ತೆ ಯಾಗಿದ್ದ ಆರೋಪಿಗಳ ಬಂಧಿಸು ವಂತೆ ಕೋರ್ಟ್‌ ಪೊಲೀಸರಿಗೆ ಸೂಚಿಸಿತ್ತು. ಆ ಹಿನ್ನೆಲೆಯಲ್ಲಿ ತನಿಖೆ ಆರಂಭಿಸಿದ್ದ ಸಿಸಿಬಿ ಪೊಲೀಸರು, ಆರೋಪಿಯ ಈ ಹಿಂದಿನ ವಿಳಾಸ ಪರಿಶೀಲಿಸಿದ್ದರು. ಆಗ ತಮಿಳುನಾಡಿನ ವೆಲ್ಲೂರಿಗೆ ಹೋಗಿದ್ದಾಗಿ ಗೊತ್ತಾಗಿದೆ. ನಂತರ ವೆಲ್ಲೂರಿಗೂ ಒಂದು ತಂಡ ಹೋದಾಗ, ಆತ ಬೆಂಗಳೂರಿನ ಸದ್ದುಗುಂಟೆ ಪಾಳ್ಯದಲ್ಲಿ ವಾಸವಾಗಿದ್ದಾನೆ ಎಂಬ ಮಾಹಿತಿ ಸಿಕ್ಕಿದೆ.

ಬಳಿಕ ಆತನ ಮನೆಗೆ ದಾಳಿ ನಡೆಸಿ, ಆತನ ಆಧಾರ್‌ ಕಾರ್ಡ್‌, ಇತರೆ ದಾಖಲೆ ಪರಿಶೀಲಿಸಿದಾಗ ಈತನೇ ಗಜೇಂದ್ರ ಎಂದು ಖಚಿತ ಪಡಿಸಿಕೊಂಡು ಬಂಧಿಸಲಾಗಿದೆ. ಆರೋಪಿಯ ವಿಚಾರಣೆಯಲ್ಲಿ, ಪ್ರಕರಣದಲ್ಲಿ ತಮ್ಮ ಪರ ವಾದ ಮಂಡಿಸಿದ್ದ ವಕೀಲರಿಗೆ ಈ ಬಗ್ಗೆ ಪ್ರಶ್ನಿಸಿದಾಗ, ಕೇಸ್‌ ಖುಲಾಸೆಗೊಂಡಿದೆ ಎಂದು ಮಾಹಿತಿ ನೀಡಿದ್ದರು. ಹೀಗಾಗಿ ಸುಮ್ಮನಾಗಿದ್ದಾಗಿ ಆರೋಪಿ ಹೇಳಿಕೆ ನೀಡಿದ್ದಾನೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next