Advertisement

ಶತ ಸಂಭ್ರಮ ಶಾಲಾ ಪ್ರಗತಿಗೆ ರೋಟರಿ ಸಾಥ್‌

10:20 AM Apr 07, 2018 | Team Udayavani |

ಸುಳ್ಯ : ನಗರದ ಜ್ಯೋತಿ ಸರ್ಕಲ್‌ ಬಳಿಯಲ್ಲಿನ ಸುಳ್ಯ ಸರಕಾರಿ ಹಿ.ಪ್ರಾ. ಶಾಲೆಗೆ ಈಗ 105ರ ಹರೆಯ. ಶತಮಾನದ ಹಿನ್ನೆಲೆಯಲ್ಲಿರುವ ಈ ಶಾಲೆಗೆ ಇನ್ನಷ್ಟು ನವೋತ್ಸವ ತುಂಬುವ ಪ್ರಯತ್ನದ ಭಾಗವಾಗಿ ರೋಟರಿ ಕ್ಲಬ್‌ ಸುಳ್ಯ ಸಿಟಿ ಮುಂದಿನ ಹತ್ತು ವರ್ಷ ದತ್ತು ತೆಗೆದುಕೊಂಡಿದೆ..!

Advertisement

ಪ್ರತಿ ವರ್ಷ ತನ್ನ ಸಮಾಜಸೇವಾ ಕಾರ್ಯದ ಪರಿಧಿಯೊಳಗೆ ಸರಕಾರಿ ಶಾಲೆಯ ಅಗತ್ಯತೆಗೆ ಸ್ಪಂದಿಸಲು ರೋಟರಿ ಕ್ಲಬ್‌ ಯೋಜನೆ ರೂಪಿಸಿದೆ. ರೋಟರಿ ಜಿಲ್ಲಾ ಗವರ್ನರ್‌ ಉಪಸ್ಥಿತಿಯಲ್ಲಿ ಮೊದಲ ಹಂತದ ಕೊಡುಗೆ ಲೋರ್ಕಾಪಣೆ ಆಗಿದೆ. ಇನ್ನುಳಿದ ಬೇಡಿಕೆಗೆ ಈಡೇರಿಕೆ ಹಂತ- ಹಂತವಾಗಿ ಆಗಲಿದೆ.

ನಗರದೊಳಗಿನ ಈ ಸರಕಾರಿ ಶಾಲೆಗೆ 105 ವರ್ಷ ತುಂಬಿದೆ. 1910 ಅಕ್ಟೋಬರ್‌ 16ರಂದು ಕಿರಿಯ ಪ್ರಾಥಮಿಕ ಶಾಲೆ ಆಗಿ ಸ್ಥಾಪನೆ ಗೊಂಡ ಈ ವಿದ್ಯಾಸಂಸ್ಥೆ ಕ್ರಮೇಣ ಹಿರಿಯ ಪ್ರಾಥಮಿಕ ಶಾಲೆ ಆಗಿ ಮೇಲ್ದರ್ಜೆಗೆ ಏರಿತ್ತು. ಸುಮಾರು 4 ಎಕರೆ ಸ್ಥಳ ಶಾಲೆಗಿದೆ. ಮೈದಾನ, ಕುಡಿಯುವ ನೀರಿನ ವ್ಯವಸ್ಥೆ ಇದೆ. ಶತಮಾನದ ಸಂದರ್ಭ ನೆನೆಪಿಸುವ ಅಂದಿನ ಐದು ಕೊಠಡಿಗಳಲ್ಲಿ ಈಗಲೂ ಪಾಠ ಪ್ರವಚನ ನಡೆಯುತ್ತಿದೆ. ಉಳಿದ ಐದು ಕೊಠಡಿಗಳು ಹೊಸದಾಗಿ ನಿರ್ಮಾಣಗೊಂಡಂತವು. ನವ ಸುಳ್ಯದ ನಿರ್ಮಾತೃ ಕುರುಂಜಿ ವೆಂಕಟರಮಣ ಗೌಡ ಅವರಂತಹ ಮೇರು ಸಾಧಕರು ಇದೇ ಸರಕಾರಿ ಶಾಲೆಯಲ್ಲಿ ಓದಿದವರು. 

ರೋಟರಿ ಸಾಥ್‌
ಶತಮಾನದ ಇತಿಹಾಸ ಹೊಂದಿರುವ ಸರಕಾರಿ ಶಾಲೆಯ ಮೂಲ ಸೌಕರ್ಯಗಳ ವೃದ್ಧಿಗೆ ಕೈ ಜೋಡಿಸಿ ಅದನ್ನು ಖಾಸಗಿ ಶಾಲೆಯ ಗುಣಮಟ್ಟಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಸುಳ್ಯ ರೋಟರಿ ಸಿಟಿ ಕ್ಲಬ್‌ ಕೈ ಜೋಡಿಸಿದೆ. ಒಟ್ಟು ಹತ್ತು ವರ್ಷದ ತನಕ ಶಾಲೆಯನ್ನು ದತ್ತು ತೆಗೆದುಕೊಳ್ಳಲು ನಿರ್ಧರಿಸಿದ್ದು, ಮೊದಲ ಐದು ವರ್ಷ, ಅನಂತರದ ಐದು ವರ್ಷ ಎಂಬಂತೆ ವಿಂಗಡಿಸಿ, ಮೂಲ ಸೌಕರ್ಯ ಒದಗಿಸಲು ತೀರ್ಮಾನಿಸಿದೆ.

ದಾಖಲಾತಿ ಇದೆ
ಈ ಹಿಂದಿನ ವರ್ಷಕ್ಕಿಂತ ಕಳೆದ ವರ್ಷ ದಾಖಲಾತಿ ಸಂಖ್ಯೆ ಹೆಚ್ಚಾಗಿತ್ತು. ಮೂಲಭೂತ ಸೌಕರ್ಯಗಳ ಜೋಡನೆಗೆ ರೋಟರಿ ಸಂಸ್ಥೆ ಸಹಕಾರ ನೀಡುವ ಬಗ್ಗೆ ಯೋಜನೆ ರೂಪಿಸಿದ್ದು, ಶಾಲೆಗೆ ಅಗತ್ಯವಿರುವ ವ್ಯವಸ್ಥೆಗಳ ಕುರಿತು
ಅವರ ಗಮನಕ್ಕೆ ತಂದಿದ್ದೇವೆ. ಉಯ್ನಾಲೆ, ಜಾರುಬಂಡಿ ಮೊದಲಾದ ಕೊಡುಗೆಳನ್ನು ರೋಟರಿ ಸಂಸ್ಥೆ ಈಗಾಗಲೇ ಒದಗಿಸಿದೆ.
– ಸಂಪಾ ಎಚ್‌., ಮುಖ್ಯಗುರು,
ಸ.ಹಿ.ಪ್ರಾ.ಶಾಲೆ, ಸುಳ್ಯ

Advertisement

ಮಾದರಿ ಶಾಲೆ
ರೋಟರಿ ಕ್ಲಬ್‌ ಸುಳ್ಯ ಸಿಟಿ ಇದರ ವತಿಯಿಂದ ಸುಳ್ಯ ಸರಕಾರಿ ಶಾಲೆಯ ಆವಶ್ಯಕತೆಗೆ ಸ್ಪಂದಿಸುವ ಚಿಂತನೆ ನಡೆಸಿದ್ದು, ಮುಂದಿನ ಹತ್ತು ವರ್ಷದಲ್ಲಿ ಮಾದರಿ ವಿದ್ಯಾಸಂಸ್ಥೆಯನ್ನಾಗಿ ರೂಪಿಸುವ ಗುರಿ ಹೊಂದಲಾಗಿದೆ. ರೋಟರಿ ಸಂಸ್ಥೆ ಹಂತ-ಹಂತವಾಗಿ ಸ್ಪಂದಿಸಲಿದೆ.
– ಶರೀಫ್‌ ಬಿ.ಎಸ್‌.
ಅಧ್ಯಕ್ಷರು, ರೋಟರಿ ಕ್ಲಬ್‌ ಸುಳ್ಯ ಸಿಟಿ

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next