ಬೆಂಗಳೂರು: ಬಹುಕೋಟಿ ಐಎಂಎ ವಂಚನೆ ಪ್ರಕರಣ ಸಂಬಂಧ ವಿಶೇಷ ಕಾರ್ಯಾಚರಣೆ ನಡೆಸಿದ ಎಸ್‌ಐಟಿ ಅಧಿಕಾರಿಗಳು ಸೋಮವಾರ ತಡರಾತ್ರಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದ ಶಿವಾಜಿನಗರ ಶಾಸಕ ಆರ್.ರೋಷನ್ ಬೇಗ್‌ರನ್ನು ಮಂಗಳವಾರ ಮಧ್ಯಾಹ್ನದವರೆಗೆ ವಿಚಾರಣೆ ನಡೆಸಿ, ಜುಲೈ 19ಕ್ಕೆ ಕಡ್ಡಾಯವಾಗಿ ಖುದ್ದು ವಿಚಾರಣೆಗೆ ಹಾಜರಾಗಲೇಬೇಕು ಎಂದು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಶಾಸಕ ರೋಷನ್ ಬೇಗ್‌ರನ್ನು ವಶಕ್ಕೆ ಪಡೆದ ಎಸ್‌ಐಟಿ ಅಧಿಕಾರಿಗಳು ನಂತರ ವೈದ್ಯಕೀಯ ಪರೀಕ್ಷೆ ನಡೆಸಿ ನೇರವಾಗಿ ಸಿಐಡಿ ಕಚೇರಿ ಆವರಣದಲ್ಲಿರುವ ಎಸ್‌ಐಟಿ ಕಚೇರಿಗೆ ಕರೆದೊಯ್ದರು. ನಂತರ ಮಂಗಳವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ ಒಂದು ಗಂಟೆವರೆಗೆ ಎಸ್‌ಐಟಿ ಮುಖ್ಯಸ್ಥ ರವಿಕಾಂತೇಗೌಡ ಹಾಗೂ ಡಿಸಿಪಿ ಎಸ್.ಗಿರೀಶ್ ರೋಷನ್ ಬೇಗ್‌ರನ್ನು ವಿಚಾರಣೆಗೊಳಪಡಿಸಿದರು.
ಈ ವೇಳೆ ವಿಚಾರಣೆಗೆ ಕಾಲಾವಕಾಶ ನೀಡಿದರೂ ತನಿಖಾಧಿಕಾರಿಗಳಿಗೆ ಮಾಹಿತಿ ನೀಡದೆ ಏಕಾಏಕಿ ಬೆಂಗಳೂರು ಬಿಟ್ಟು ಪುಣೆಗೆ ಹೋಗಲು ಕಾರಣವೇನು? ಪುಣೆ ಮೂಲಕ ಬೇರೆ ಯಾವ ಸ್ಥಳಕ್ಕೆ ಹೋಗಲು ಸಿದ್ಧತೆ ನಡೆಸಿದ್ದಿರಿ? ಖಾಸಗಿ ವಿಮಾನದಲ್ಲಿ ತಮ್ಮೊಂದಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಪ್ತ ಸಹಾಯಕ ಸಂತೋಷ್ ಇದ್ದರೆ? ಮಧ್ಯಾಹ್ನ ಕಾಲಾವಕಾಶ ಪಡೆದು ಸಂಜೆ ವೇಳೆಗೆ ಮನ್ಸೂರ್ ಖಾನ್ ವಿಡಿಯೋ ಬಿಡುಗಡೆ ಮಾಡುತ್ತಿದ್ದಂತೆ ನಗರ ಬಿಟ್ಟು ಹೋಗಲು ಕಾರಣವೇನು? ಎಂಬಿತ್ಯಾದಿ ಪ್ರಶ್ನೆಗಳನ್ನು ಶಾಸಕರಿಗೆ ಕೇಳಲಾಗಿತ್ತು. ಆದರೆ, ಯಾವುದಕ್ಕೂ ರೋಷನ್ ಬೇಗ್ ಸ್ಪಷ್ಟ ಉತ್ತರ ನೀಡಿಲ್ಲ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.
ನೋಟಿಸ್ ಜಾರಿ: ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಎರಡು ಬಾರಿ ನೋಟಿಸ್ ಜಾರಿ ಮಾಡಲಾಗಿತ್ತು. ಆದರೂ ತಮ್ಮ ಆಪ್ತರನ್ನು ಕಳುಹಿಸಿ ಇಲ್ಲದ ಸಬೂಬು ಹೇಳಿ ಕಾಲಾವಕಾಶ ಕೇಳಿದ್ದರು. ಪ್ರಮುಖವಾಗಿ ಮೊಮ್ಮಗಳಿಗೆ ಅನಾರೋಗ್ಯ, ವಿಧಾನಸಭೆ ಅಧಿವೇಶನ ನಡೆಯುತ್ತಿದೆ. ಹಜ್‌ಯಾತ್ರೆಕೈಗೊಳ್ಳಬೇಕು ಎಂದು ಕೋರಿದ್ದರು. ಅದಕ್ಕೆ ಸಮ್ಮತಿಸಿ ಜುಲೈ 19ಕ್ಕೆ ಖುದ್ದು ಹಾಜರಾಗುವಂತೆ ಸೂಚಿಸಲಾಗಿತ್ತು.
ಈ ಮಧ್ಯೆ ಪ್ರಮುಖ ಆರೋಪಿ ಮನ್ಸೂರ್ ಖಾನ್ ವಿಡಿಯೋ ಬಿಡುಗಡೆ ಮಾಡಿ ಜನಪ್ರತಿನಿಧಿಗಳ ಒತ್ತಡದಿಂದಲೇ ದೇಶ ಬಿಟ್ಟು ಬಂದೆ ಎಂದು ಮತ್ತೂಮ್ಮೆ ಹೇಳಿಕೆ ನೀಡಿದ್ದ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ ಏಕಾಏಕಿ ಖಾಸಗಿ ವಿಮಾನದಲ್ಲಿ ಪುಣೆಗೆ ಪರಾರಿಯಾಗುತ್ತಿರುವ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ವಶಕ್ಕೆ ಪಡೆಯಲಾಗಿತ್ತು ಎಂದು ಎಸ್‌ಐಟಿ ತಿಳಿಸಿದೆ.
ಬಿಡುಗಡೆಗೆ ಪ್ರಮುಖ ಕಾರಣ: ರೋಷನ್‌ಬೇಗ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಈ ಸಂಬಂಧ ವಿಚಾರಣೆಗಾಗಿ ಜು.18 ರಂದು ಹಾಜರಾಗುವಂತೆ ಸ್ಪೀಕರ್ ಸೂಚಿಸಿದ್ದಾರೆ. ಅಲ್ಲದೆ ಗುರುವಾರ ವಿಧಾನಸಭಾ ಅ ವೇಶನದಲ್ಲಿ ವಿಶ್ವಾಸಮತ ಕೋರಿಕೆ ಇದ್ದು ಇದರಲ್ಲಿ ರೋಷನ್‌ಬೇಗ್ ಕೂಡ ಭಾಗವಹಿಸಬೇಕಿದೆ. ಈ ಎಲ್ಲ ಕಾರಣಗಳಿಂದ ಜು. 19ರಂದು ಖುದ್ದು ವಿಚಾರಣೆಗೆ ಹಾಜರಾಗಬೇಕು ಎಂದು ಎಚ್ಚರಿಕೆ ನೀಡಿ ಕಳುಹಿಸಲಾಗಿದೆ. ಹಾಗೆಯೇ ಮತ್ತೂಮ್ಮೆ ನಗರದಿಂದ ಹೊರ ಹೋಗುವಾಗ ತನಿಖಾಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ರೋಷನ್ ಬೇಗ್ ಮನೆಗೆ ಭದ್ರತೆ: ಈ ಮಧ್ಯೆ ರೋಷನ್‌ಬೇಗ್‌ರನ್ನು ವಶಕ್ಕೆ ಪಡೆಯುತ್ತಿದ್ದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಸೋಮವಾರ ರಾತ್ರಿಯಿಂದಲೇ ಫ್ರೆಜರ್‌ಟೌನ್‌ನಲ್ಲಿರುವ ಅವರ ಮನೆಗೆ ಸೂಕ್ತ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.