Advertisement
ಗುಲಾಬಿಯನ್ನು ಮಾಮೂಲಾಗಿ ಎಲ್ಲ ತಿಂಗಳಲ್ಲಿ ನಾಟಿ ಮಾಡಬಹುದಾದರೂ ಜೂನ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ನಾಟಿ ಮಾಡುವುದು ಒಳ್ಳೆಯದು. ಕಸಿ ಮಾಡಿದ ಸಸಿಗಳನ್ನು ಹತ್ತಿರದ ನರ್ಸರಿಯಿಂದ ತನ್ನಿ, ಒಂದು ಸಸಿಗೆ 8-10 ರೂ. ಆಗಬಹುದು. ನಾಟಿ ಮಾಡುವ ಮೊದಲು ಮೂರು ಅಡಿಗಳ ಸಾಲು ಮಾಡಿಕೊಂಡು ಮೂರು ಅಡಿಗೊಂದರಂತೆ ಸಣ್ಣ ಸಣ್ಣ ಗುಣಿ ಮಾಡಿಕೊಳ್ಳಿ, ಆ ಗುಣಿಗಳಲ್ಲಿ ಬೇವಿನ ಹಿಂಡಿ ಮಿಕ್ಸ್ ಮಾಡಿದ ಸಾವಯವ ಗೊಬ್ಬರ- ಎರೆಹುಳು ಗೊಬ್ಬರವನ್ನು ಹಾಕಿ ಮೇಲೆ ಮಣ್ಣು ಎಳೆಯಿರಿ. ನಂತರ ನೀರು ಹಾಯಿಸಿ ಸಸಿಗಳನ್ನು ನೆಡಿ.
ನಿರ್ವಹಣೆ
ಎಂಟು ದಿನಕ್ಕೊಮ್ಮೆ ತಪ್ಪದೇ ನೀರು ಕೊಡಿ. ನೀವು ನೀರನ್ನು ಕೃಷಿಹೊಂಡದಿಂದ ಕೊಡುತ್ತಿದ್ದರೆ ಆ ಹೊಂಡಕ್ಕೆ ಆವಾಗವಾಗ ಹಸುವಿನ ಸೆಗಣಿ – ಗಂಜಲ ಮಿಕ್ಸ್ ಮಾಡಿದ ಮಿಶ್ರಣವನ್ನು ಸುರಿಯುತ್ತಾ ಇರಿ. ಸಸ್ಯ ಸಂರಕ್ಷಣೆಯ ಬಗ್ಗೆ ಗಮನವಿರಲಿ. ಸಾವಯವಕ್ಕೆ ಹೆಚ್ಚು ಒತ್ತು ಕೊಡಿ. ಸಾವಯವ ಕೀಟನಾಶಕಗಳು ಬರೀ ಕೀಟನಾಶಕಗಳಾಗಿರದೆ ಟಾನಿಕ್ ರೂಪದಲ್ಲೂ ಬೆಳೆಗೆ ಸಹಾಯ ಮಾಡುತ್ತವೆ. ನಿಮಗೆ ಸ್ವತಃ ಸಾವಯವ ಕೀಟಾಣುನಾಶಕ ತಯಾರು ಮಾಡಿಕೊಳ್ಳಲು ಸಾಧ್ಯವಾಗದಿದ್ದರೆ ಮಾರುಕಟ್ಟೆಯಿಂದ ತನ್ನಿ. ಪ್ರತಿ ಸಲ ಸ್ಪ್ರೇ ಮಾಡುವಾಗ ಹದಿನಾರು ಲೀಟರ್ ಕ್ಯಾನಿಗೆ ನೂರು ಎಂಎಲ್ ಗಂಜಲ, ಚೂರು ಅರಿಷಿಣ ಪುಡಿ ಮಿಕ್ಸ್ ಮಾಡಿ. ನೀವು ಗುಲಾಬಿ ಗಿಡಗಳಿಗೆ ಬೇವಿನ ಹಿಂಡಿ ಕೊಡುವುದು ಕಡ್ಡಾಯ, ಪ್ರತಿ ಸಲ ಎರೆಹುಳು ಗೊಬ್ಬರ ಹಾಕಿದಾಗ ಅದರಲ್ಲಿ ಬೇವಿನ ಹಿಂಡಿ ಮಿಕ್ಸ್ ಮಾಡಿ. ರಾಸಾಯನಿಕ ಗೊಬ್ಬರ ಕೊಡುವ ರೂಢಿ ಇರುವವರು ಪ್ರತಿ ಎರಡು ತಿಂಗಳಿಗೊಮ್ಮೆ ಗಿಡದ ಸುತ್ತ ರಿಂಗ್ ಮಾಡಿ ಮೂರು ಟೀ ಸ್ಪೂನ್‌ನಷ್ಟು ಮಾತ್ರ ಕೊಡಿ. ನಿಮಗೆ ಜೀವಾಮೃತ ಮಾಡಿಕೊಳ್ಳುವ ಅಭ್ಯಾಸ ಇದ್ದರೆ ಇಪ್ಪತ್ತು ದಿನಕ್ಕೊಮ್ಮೆ ಜೀವಾಮೃತ ಸಿಂಪಡಿಸಿ ಮತ್ತು ಬುಡಕ್ಕೆ ಹಾಕಿ.
Related Articles
ನಾಟಿ ಮಾಡಿದ ಎರಡು ತಿಂಗಳಿಗೆ ಹೂವು ಬಿಡಲು ಆರಂಭವಾಗುತ್ತದೆ. ನಿರಂತರವಾಗಿ ಜೀವಾಮೃತ ಕೊಡದೇ ಇದ್ದರೆ ಪ್ರತಿ ಎರಡು ತಿಂಗಳಿಗೊಮ್ಮೆ ಬುಡ ಸಡಿಲ ಮಾಡಿ ಎರಡು ಬೊಗಸೆ ಎರೆಹುಳು ಗೊಬ್ಬರ ಕೊಡಲೇಬೇಕು. ಒಂದು ಎಕರೆಯಲ್ಲಿಯೇ ಮೂರ್ನಾಲ್ಕು ಭಾಗ ಮಾಡಿಕೊಂಡು ಹೂ ಕೀಳಿ ಹಾಗೂ ಆವಾಗಾವಾಗ ಗಿಡಗಳನ್ನು ಸವರಿ. ಕನಿಷ್ಟ ಆರು ತಿಂಗಳಿಗೊಮ್ಮೆ ಗಿಡಗಳನ್ನು ಸವರಲೇಬೇಕು. ಪ್ರತಿದಿನ ಎಕರೆಗೆ ಅಂದಾಜು 40-80 ಕೆ.ಜಿ ಹೂಗಳನ್ನು ಪಡೆಯಬಹುದು. ಒಂದು ಕೆ.ಜಿ ಗೆ ಸುಮಾರು 30- 90 ರೂ. ಸಿಗುವುದು. ಎಲ್ಲ ಖರ್ಚು ಕಳೆದು ತಿಂಗಳಿಗೆ 20-30 ಸಾವಿರ ಆದಾಯ ಗಳಿಸಬಹುದು, ಕೆಲವೊಮ್ಮೆ ಹೆಚ್ಚು ಕಮ್ಮಿಯೂ ಆಗಬಹುದು. ಒಮ್ಮೆ ನಾಟಿ ಮಾಡಿ ಸರಿಯಾಗಿ ಪೋಷಣೆ ಮಾಡಿದರೆ ಹಲವಾರು ವರ್ಷಗಳ ಕಾಲ ಗುಲಾಬಿ ಆದಾಯ ತರುತ್ತಲೇ ಇರುತ್ತದೆ.
Advertisement
ರೋಗ ರುಜಿನಗುಲಾಬಿ ಗಿಡಗಳಿಗೆ ಗೆದ್ದಲು, ಮೊಗ್ಗು ಕೊರೆಯುವ ಹುಳು, ಹೂ ತಿನ್ನುವ ದುಂಬಿ, ಥ್ರಿಪ್ಸ್, ಹೇನು, ಜೇಡರ ನುಸಿಗಳಂತಹ ಕೀಟಗಳು ಕಾಟ ಕೊಡುತ್ತವೆ. ಇವುಗಳ ನಿಯಂತ್ರಣಕ್ಕೆ ಪ್ರತಿ ಲೀಟರ್ ನೀರಿಗೆ 0.5 ಎಮ್.ಎಲ್ ಫಾಸ್ಪಾಮಿಡಾನ್ ಸಿಂಪಡಿಸಿ. ನುಸಿಗಳ ಹತೋಟಿಗೆ ಪ್ರತಿ ಲೀಟರ್ ನೀರಿಗೆ 2.5 ಎಮ್.ಎಲ್ ಡೈಕೋಫಾಲ್ ಸ್ಪ್ರೇ ಮಾಡಿ. ಇನ್ನು ರೋಗದ ಬಗ್ಗೆ ಹೇಳಬೇಕೆಂದರೆ, ಇದಕ್ಕೆ ಬೂದಿರೋಗ, ಎಲೆಚುಕ್ಕೆ ರೋಗ, ಟೊಂಗೆ ಒಣಗೋ ರೋಗ ಬರುತ್ತವೆ. ಇವುಗಳ ಹತೋಟಿಗಾಗಿ-
ಬೂದಿ ರೋಗ : ಒಂದು ಲೀಟರ್ ನೀರಿಗೆ ಒಂದು ಗ್ರಾಂ. ಕಾರ್ಬನ್ ಡೈಜೆಮ್ ಟೊಂಗೆ
ಒಣಗೋ ರೋಗ : ಟೊಂಗೆ ಸವರಿದ ಮೇಲೆ ಶೇ. 5ರಷ್ಟು ಬೋರ್ಡೊ ಮುಲಾಮು ಹಚ್ಚಿರಿ ಕಪ್ಪು ಎಲೆಚುಕ್ಕೆ ರೋಗ: ಪ್ರತಿ ಲೀಟರ್ ನೀರಿಗೆ 0.5 ಗ್ರಾಂ ಕೆ. ಸೈಕ್ಲಿನ್ ಹಾಕಿ ಸಿಂಪಡಿಸಿ.
ಇಲ್ಲಿ ನೀಡಿರುವುದು ಕೇವಲ ಪ್ರಾಥಮಿಕ ಮಾಹಿತಿಯನ್ನು, ನೀವು ಸಸಿ ತರಲು ಹೋದಾಗ ಅಥವಾ ಬೇರೆ ಗುಲಾಬಿ ಬೆಳೆಗಾರರನ್ನು ಭೇಟಿಯಾದಾಗ ಹೆಚ್ಚಿನ ಮಾಹಿತಿ ಸಿಗುತ್ತದೆ. — ಎಸ್.ಕೆ ಪಾಟೀಲ್