Advertisement

ವಿಂಡೀಸ್‌ ದಾಳಿಗೆ ರೂಟ್‌-ವೋಕ್ಸ್‌ ಸಡ್ಡು: ಸರಣಿ ಗೆದ್ದ ಇಂಗ್ಲೆಂಡ್‌

05:56 PM Mar 07, 2017 | Team Udayavani |

ನಾರ್ತ್‌ ಸೌಂಡ್‌ (ಆಂಟಿಗಾ): ದ್ವಿತೀಯ ಏಕದಿನದಲ್ಲೂ ಗೆಲ್ಲುವ ಅವಕಾಶವನ್ನು ಕೈಚೆಲ್ಲಿದ ವೆಸ್ಟ್‌ ಇಂಡೀಸ್‌ ಏಕದಿನ ಸರಣಿಯಲ್ಲಿ ಪ್ರವಾಸಿ ಇಂಗ್ಲೆಂಡಿಗೆ ಶರಣಾಗಿದೆ. 

Advertisement

ರವಿವಾರ ಇಲ್ಲಿನ “ಸರ್‌ ವಿವಿಯನ್‌ ರಿಚರ್ಡ್ಸ್‌ ಸ್ಟೇಡಿಯಂ’ನಲ್ಲಿ ನಡೆದ ಸಣ್ಣ ಮೊತ್ತದ ಕದನದಲ್ಲಿ ಇಂಗ್ಲೆಂಡ್‌ 4 ವಿಕೆಟ್‌ ಅಂತರದ ಜಯ ಸಾಧಿಸಿತು. ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ವಿಂಡೀಸ್‌ 47.5 ಓವರ್‌ಗಳಲ್ಲಿ 225 ರನ್ನುಗಳ ಸಾಮಾನ್ಯ ಮೊತ್ತಕ್ಕೆ ಆಲೌಟಾದರೆ, ಇಂಗ್ಲೆಂಡ್‌ 48.2 ಓವರ್‌ಗಳಲ್ಲಿ 6 ವಿಕೆಟಿಗೆ 226 ರನ್‌ ಬಾರಿಸಿ ಸರಣಿ ವಶಪಡಿಸಿಕೊಂಡಿತು. 3ನೇ ಹಾಗೂ ಅಂತಿಮ ಪಂದ್ಯ ಗುರುವಾರ ಬ್ರಿಜ್‌ಟೌನ್‌ನಲ್ಲಿ ನಡೆಯಲಿದೆ.

ಚೇಸಿಂಗ್‌ ವೇಳೆ ಆರಂಭಕಾರ ಸ್ಯಾಮ್‌ ಬಿಲ್ಲಿಂಗ್ಸ್‌ (0) ಅವರನ್ನು ಇಂಗ್ಲೆಂಡ್‌ 2ನೇ ಎಸೆತದಲ್ಲೇ ಕಳೆದುಕೊಂಡಿತು. ದ್ವಿತೀಯ ವಿಕೆಟಿಗೆ ಜತೆಗೂಡಿದ ಜಾಸನ್‌ ರಾಯ್‌ ಮತ್ತು ಜೋ ರೂಟ್‌ ಮೊತ್ತವನ್ನು 87ಕ್ಕೆ ತಂದು ನಿಲ್ಲಿಸಿದರು. ಆಗ ಇಂಗ್ಲೆಂಡ್‌ ಜಯದ ಬಗ್ಗೆ ಅನುಮಾನವಿರಲಿಲ್ಲ. ಆದರೆ ಸರಿಯಾಗಿ ಅರ್ಧ ಹಾದಿ ಕ್ರಮಿಸುವಷ್ಟರಲ್ಲಿ, 25 ಓವರ್‌ ಮುಕ್ತಾಯಕ್ಕೆ, ಇಂಗ್ಲೆಂಡ್‌ 124ಕ್ಕೆ 6 ವಿಕೆಟ್‌ ಕಳೆದುಕೊಂಡು ತೀವ್ರ ಸಂಕಟಕ್ಕೆ ಸಿಲುಕಿತು. ಮಾರ್ಗನ್‌ (7), ಸ್ಟೋಕ್ಸ್‌ (1), ಬಟ್ಲರ್‌ (0), ಅಲಿ (3) ಬಂದಂತೆಯೇ ವಾಪಸಾದರು. ವಿಂಡೀಸಿನ ಸರಣಿ ಸಮಬಲದ ಕನಸಿಗೆ ಹೊಸ ಜೀವ ಬಂತು.

ಕದಲಲಿಲ್ಲ ರೂಟ್‌-ವೋಕ್ಸ್‌ 
ಆದರೆ 7ನೇ ವಿಕೆಟಿಗೆ ಜತೆಗೂಡಿದ ಜೋ ರೂಟ್‌ ಮತ್ತು ಕ್ರಿಸ್‌ ವೋಕ್ಸ್‌ ಕ್ರೀಸಿಗೆ ಅಂಟಿಕೊಂಡು ನಿಲ್ಲುವುದರೊಂದಿಗೆ ಪಂದ್ಯದ ಚಿತ್ರಣ ನಿಧಾನವಾಗಿ ಬದಲಾಗತೊಡಗಿತು. ಈ ಜೋಡಿಯನ್ನು ಬೇರ್ಪಡಿಸಲು ವಿಫ‌ಲವಾದ ಕೆರಿಬಿಯನ್‌ ಕ್ರಿಕೆಟಿಗರು ಕೈ ಕೈ ಹಿಸುಕಿಕೊಂಡರು. ಮತ್ತೆ ತಂಡಕ್ಕೆ ಹಾನಿಯಾಗದಂತೆ ನೋಡಿಕೊಂಡ ರೂಟ್‌-ವೋಕ್ಸ್‌ ಮುರಿಯದ 7ನೇ ವಿಕೆಟಿಗೆ 23.2 ಓವರ್‌ಗಳಲ್ಲಿ 102 ರನ್‌ ಪೇರಿಸಿ ವಿಂಡೀಸ್‌ ಕತೆ ಮುಗಿಸಿದರು!
ಇಂಗ್ಲೆಂಡಿನ ಗೆಲುವಿನ ವೇಳೆ ರೂಟ್‌ 90 ರನ್‌ (127 ಎಸೆತ, 3 ಬೌಂಡರಿ), ವೋಕ್ಸ್‌ 68 ರನ್‌ (83 ಎಸೆತ, 5 ಬೌಂಡರಿ, 2 ಸಿಕ್ಸರ್‌) ಮಾಡಿ ಅಜೇಯರಾಗಿದ್ದರು. ಆರಂಭಕಾರ ಜಾಸನ್‌ ರಾಯ್‌ ಅವರಿಂದ 52 ರನ್‌ ಕೊಡುಗೆ ಸಂದಿತು.

ವೆಸ್ಟ್‌ ಇಂಡೀಸ್‌ ಸರದಿಯ ಏಕೈಕ ಅರ್ಧ ಶತಕ ಜಾಸನ್‌ ಮೊಹಮ್ಮದ್‌ ಅವರಿಂದ ದಾಖಲಾಯಿತು (50 ರನ್‌, 73 ಎಸೆತ, 2 ಬೌಂಡರಿ, 2 ಸಿಕ್ಸರ್‌). ಆರಂಭಕಾರ ಕ್ರೆಗ್‌ ಬ್ರಾತ್‌ವೇಟ್‌ 42 ರನ್‌ ಹೊಡೆದರು.

Advertisement

ಸಂಕ್ಷಿಪ್ತ ಸ್ಕೋರ್‌: ವೆಸ್ಟ್‌ ಇಂಡೀಸ್‌-47.5 ಓವರ್‌ಗಳಲ್ಲಿ 225 (ಮೊಹಮ್ಮದ್‌ 50, ಬ್ರಾತ್‌ವೇಟ್‌ 42, ಕಾರ್ಟರ್‌ 39, ಪ್ಲಂಕೆಟ್‌ 32ಕ್ಕೆ 3, ಫಿನ್‌ 38ಕ್ಕೆ 2). ಇಂಗ್ಲೆಂಡ್‌-48.2 ಓವರ್‌ಗಳಲ್ಲಿ 6 ವಿಕೆಟಿಗೆ 226 (ರೂಟ್‌ ಔಟಾಗದೆ 90, ವೋಕ್ಸ್‌ ಔಟಾಗದೆ 68, ರಾಯ್‌ 52, ನರ್ಸ್‌ 34ಕ್ಕೆ 3, ಬಿಶೂ 43ಕ್ಕೆ 2).

ಪಂದ್ಯಶ್ರೇಷ್ಠ: ಜೋ ರೂಟ್‌.

Advertisement

Udayavani is now on Telegram. Click here to join our channel and stay updated with the latest news.

Next