ರೂಮ್ (Room)
ಭಾಷೆ: English
ಅವಧಿ: 120 ನಿಮಿಷ
ಆತನೊಬ್ಬನಿದ್ದಾನೆ. ಅವಳನ್ನು ಅಪಹರಿಸಿ ತಂದು, ತನ್ನ ಮನೆಯ ಹಿಂಬದಿಯ ಶೆಡ್ಡಿನಲ್ಲಿ ಕೂಡಿ ಹಾಕಿ ದಿನವೂ ಲೈಂಗಿಕವಾಗಿ ಬಳಸಿಕೊಳ್ಳುವಷ್ಟು ಕ್ರೂರಿ ಆತ. ಆ ಮನೆಗೆ ಕಿಟಕಿಗಳಿಲ್ಲ. ಅಲ್ಲಿರುವುದು ಬದುಕಲು ಬೇಕಿರುವ ಕನಿಷ್ಠ ಸೌಕರ್ಯಗಳಷ್ಟೇ. ಅಲ್ಲಿರುವ ಜಾಗದಲ್ಲೇ ದಿನನಿತ್ಯ ಕಾರ್ಯಗಳು, ಸ್ನಾನ, ಅಡುಗೆ ಎಲ್ಲವೂ ಆಗಬೇಕು. ಚಾವಣಿಯಿಂದ ಒಳಕ್ಕೆ ಬೀಳುವ ಬೆಳಕು, ಅವಳಿಗೂ ಒಂದು ಬಗೆಯ ಆಶಾಕಿರಣವೇ! ಆ ರೂಮಿಗೊಂದು ಎಲೆಕ್ಟ್ರಾನಿಕ್
ಲಾಕ್ ಇದೆ. ಅಲ್ಲಿ ಸೀಕ್ರೆಟ್ ಕೋಡ್ ಒತ್ತಿದರಷ್ಟೇ ಬಾಗಿಲು ತೆರೆಯುತ್ತದೆ. ಅದು ಅವನಿಗೆ ಮಾತ್ರ ಗೊತ್ತಿದೆ. ಒಳಗಿನಿಂದ ಎಷ್ಟೇ ಕೂಗಿದರೂ, ಹೊರಗಿನವರಿಗೆ ಏನೂ ಕೇಳಿಸುವುದಿಲ್ಲ. ಆತ ರಾತ್ರಿ ಬರುತ್ತಾನೆ, ಆಹಾರಕ್ಕೆ ಒಂದಷ್ಟು ಸಾಮಾನು ಕೊಟ್ಟು, ತನ್ನ ಕೆಲಸ ಮುಗಿಸಿಕೊಂಡು ಹೊರಟು ಬಿಡುತ್ತಾನೆ.
ಆಕೆ ಅಲ್ಲಿ, ಏನೂ ಮಾಡಲಾಗದ ಅಸಹಾಯಕಿ. ಹೀಗೆಯೇ ಬರೋಬ್ಬರಿ ಏಳು ವರ್ಷಗಳು ಕಳೆದುಹೋದಾಗ, ಆಕೆ ಖನ್ನತೆಗೆ ಒಳಗಾಗುತ್ತಾಳೆ. ಅಲ್ಲೇ ಅವಳಿಗೊಂದು ಗಂಡು ಮಗುವಾಗಿದೆ. ಆಕೆಗೆ ಆ ಮಗುವಷ್ಟೇ ಪ್ರಪಂಚ. ಇದೀಗ ಆ ಮಗು ನಾಲ್ಕು ವರ್ಷ ತುಂಬಿ ಐದಕ್ಕೆ ಕಾಲಿಡುತ್ತಿದೆ. ಆತ ಬರುವ ಹೊತ್ತಿಗೆ ಆ ಮಗುವನ್ನು ಹೇಗಾದರೂ ಮಾಡಿ ವಾರ್ಡ್‌ರೋಬ್‌ನೊಳಗೆ ಮಲಗಿಸಿಬಿಡುವುದು, ಅದೇ ನೆಪ ಹೇಳಿ ಆ ಮಗುವನ್ನು ಮುಟ್ಟದಂತೆ ನೋಡಿಕೊಳ್ಳುವುದು ಅವಳ ಪ್ರತಿದಿನದ ಸವಾಲು. ಆಕೆ ದಿನ ದಿನವೂ ಹೊರಹೋಗುವ ಅವಕಾಶಕ್ಕಾಗಿ ಕಾಯುತ್ತಿದ್ದಾಳೆ. ಮಗುವಿಗೆ ಐದು ವರ್ಷವಾದಾಗ, ಹೊರ ಪ್ರಪಂಚದ ವಾಸ್ತವವನ್ನು ಅದಕ್ಕೆ ಅರ್ಥ ಮಾಡಿಸಲು ಹೆಣಗಾಡುತ್ತಾಳೆ. ಕಡೇ ಪಕ್ಷ, ಆ ಮಗುವನ್ನಾದರೂ ಹೊರಗಿನ ಪ್ರಪಂಚಕ್ಕೆ ಕಳುಹಿಸಿ, ಅದರ ಬಾಳನ್ನು ಈ ನರಕದಿಂದ ಪಾರು ಮಾಡುವುದು, ಅವಳ ಉದ್ದೇಶ. ಅದರಂತೆ, ಒಮ್ಮೆ ಆ ಮಗುವಿಗೆ ವಿಪರೀತ ಜ್ವರ ಬರುವಂತೆ ಮಾಡುತ್ತಾಳೆ. ಆಸ್ಪತ್ರೆಗೆ ಹೋದಾಗ ಜೋರಾಗಿ
ಕೂಗಿಕೊಂಡು, ಸುತ್ತಲಿನವರ ಗಮನ ಸೆಳೆದು ತಪ್ಪಿಸಿಕೋ ಎಂದು ಆ ಮಗುವಿಗೆ ಹೇಳಿಕೊಡುತ್ತಾಳೆ. ಆದರೆ, ಆತ ಮಗುವಿನ ಅನಾರೋಗ್ಯ ನೋಡಿಯೂ, ಮುಖ ಸಿಂಡರಿಸಿ ಹೋಗುವುದರೊಂದಿಗೆ, ಆ ಉಪಾಯ ಹಳ್ಳ ಹಿಡಿಯುತ್ತದೆ.
ಮರುದಿನವೇ ಮತ್ತೆ ಆ ಮಗು ಚಿಕಿತ್ಸೆ ಸಿಗದ ಕಾರಣ ಕೊನೆಯುಸಿರೆಳೆಯಿತೆಂದು ನಟಿಸಿ, ಅದಕ್ಕೂ ನಟಿಸಲು ಹೇಳಿ, ಅದರ ಶವಸಂಸ್ಕಾರ ಮಾಡಿ ಬಾ ಎನ್ನುವಂತೆ ಅನ್ನುತ್ತಾಳೆ. ಆ ರಾತ್ರಿ, ಮಗುವಿಗೆ ಧೈರ್ಯ ಹೇಳಿ, ಕಡೆಯದಾಗೊಮ್ಮೆ ಅದಕ್ಕೆ ಮುತ್ತನಿಟ್ಟು, ಧೈರ್ಯತುಂಬಿ ಕಾರ್ಪೆಟ್ಟೊಂದಕ್ಕೆ ಸುತ್ತಿದ್ದಾಳೆ. ಆಗಲೇ, ಆತ ಒಳಬರುತ್ತಾನೆ!
Related Articles
ಕಥೆ ಎಷ್ಟು ರೋಚಕವೆನಿಸುತ್ತದೆಯಲ್ಲವೇ? ಹೌದು. ಇದು 2015ರಲ್ಲಿ ಬಿಡುಗಡೆಯಾದ ರೂಮ್ ಚಿತ್ರದ ಸನ್ನಿವೇಶ. ಪ್ರತಿ ದೃಶ್ಯದಲ್ಲೂ ತಾಯಿ-ಮಗುವಿನ
ಪಾತ್ರಧಾರಿಗಳು ಮನೋಜ್ಞವಾಗಿ ನಟಿಸಿದ್ದಾರೆ. Brie Larson ಈ ಚಿತ್ರದ ಅಭಿನಯಕ್ಕೆ ಅತ್ಯುತ್ತಮ ನಟಿ ಆಸ್ಕರ್ ಗರಿಯನ್ನು ಮುಡಿಗೇರಿಸಿಕೊಂಡಿದ್ದಾರೆ
ಎಂದರೆ, ಈ ಚಿತ್ರದ ಅವರ ಪಾತ್ರದ ತೂಕವನ್ನು ಗಮನಿಸಲೇಬೇಕು. Emma Donoghue ರವರ ಅದೇ ಹೆಸರಿನ ಕಾದಂಬರಿಯ ಕಥಾವಸ್ತುವನ್ನೇ ಇಲ್ಲಿ
ಸಿನಿಮಾಗೆ ರೂಪಾಂತರಿಸಲಾಗಿದೆ. ಸಾಧ್ಯವಾದರೆ ಒಮ್ಮೆ ನೋಡಿ.
ಸಂತೋಷ್ ಕುಮಾರ್ ಎಲ್ಎಂ.