ಹೈದರಾಬಾದ್: ಹೈದರಾಬಾದ್ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ವಿವಿಯ ಕೈಗೊಂಡ ಕ್ರಮದಿಂದ ಆತ್ಮಹತ್ಯೆಗೆ ಶರಣಾಗಿಲ್ಲ, ವೈಯಕ್ತಿಕ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನಿವೃತ್ತ ಜಸ್ಟೀಸ್ ಎಕೆ ರೂಪಾನ್ವಾಲ್ ಆಯೋಗದ ವರದಿ ತಿಳಿಸಿದೆ.
ಕಳೆದ ವರ್ಷ ಇಡೀ ದೇಶಾದ್ಯಂತ ತಲ್ಲಣ ಸೃಷ್ಟಿಸಿದ್ದ ರೋಹಿತ್ ವೇಮುಲಾ ಅವರ ಆತ್ಮಹತ್ಯೆ ಪ್ರಕರಣದ ಬಗ್ಗೆ ತನಿಖೆ ನಡೆಸಲು ಮಾನವಸಂಪನ್ಮೂಲ ಸಚಿವಾಲಯ ಜಸ್ಟೀಸ್ ರೂಪಾನ್ವಾಲ್ ಆಯೋಗವನ್ನು ರಚಿಸಿತ್ತು.
ರೋಹಿತ್ ವೇಮುಲಾ ಅವರನ್ನು ಹಾಸ್ಟೆಲ್ ನಿಂದ ಹೊರ ಹಾಕಿದ್ದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿಲ್ಲ. ಆತ ಹಲವಾರು ಕಾರಣಗಳಿಂದ ಅಸಮಾಧಾನದಿಂದ ಇದ್ದಿದ್ದ. ರೋಹಿತ್ ವೇಮುಲಾ ಸ್ವಂತ ಸಮಸ್ಯೆಗಳಿಗೆ ಸಿಲುಕಿ ಹಾಕಿಕೊಂಡಿದ್ದ ಎಂಬುದು ಆತನ ಸೂಯಿಸೈಡ್ ನೋಟ್ ನಲ್ಲಿ ದಾಖಲಿಸಿದ್ದ ಅಂಶಗಳಿಂದ ತಿಳಿದು ಬಂದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಆತ ತುಂಬಾ ನೊಂದಿದ್ದ. ಅಷ್ಟೇ ಅಲ್ಲ ಈ ಕಾರಣದಿಂದಾಗಿ ವೇಮುಲಾ ಮಾನಸಿಕ ಒತ್ತಡಕ್ಕೊಳಗಾಗಿದ್ದ. ಬಾಲ್ಯದಿಂದಲೂ ತಾನು ಏಕಾಂಗಿಯಾಗಿದ್ದಿರುವುದಾಗಿ ಬರೆದುಕೊಂಡಿದ್ದ. ತಾನೊಬ್ಬ ಮೆಚ್ಚುಗೆ ಇಲ್ಲದ ವ್ಯಕ್ತಿಯಾಗಿದ್ದೆ. ಇದು ಆತನ ಒತ್ತಡವನ್ನು ಸೂಚಿಸುತ್ತದೆ. ತನ್ನ ಆತ್ಮಹತ್ಯೆಗೆ ಯಾರನ್ನೂ ದೂಷಿಸಿಲ್ಲ ಎಂದು ವರದಿ ವಿವರಿಸಿದೆ.
ಆತನ ಆತ್ಮಹತ್ಯೆಯ ನಂತರ ವೇಮುಲಾ ಕುಟುಂಬದ ಸದಸ್ಯರು, ರಾಜಕೀಯದ ಜತೆ ನಂಟು ಹೊಂದಿರುವ ಗೆಳೆಯರು ವಿವಾದ ಹುಟ್ಟು ಹಾಕಿದ್ದರು, ಜಾತಿಯ ತಾರತಮ್ಯದಿಂದ ಬಲಿಪಶು ಮಾಡಲಾಗಿದೆ ಎಂದು ಪ್ರತಿಭಟನೆ ನಡೆಸಿರುವುದಾಗಿ ವರದಿ ಹೇಳಿದೆ.