ಅಡಿಲೇಡ್: ಐಸಿಸಿ ಟಿ20 ವಿಶ್ವಕಪ್ 2022ರಲ್ಲಿ ಭಾರತ ತಂಡದ ಪ್ರದರ್ಶನ ಉನ್ನತ ಮಟ್ಟದಲ್ಲಿದೆ. ಸೂಪರ್ 12 ಹಂತದ ಗ್ರೂಪ್ 2ರಲ್ಲಿ ಅಗ್ರಸ್ಥಾನ ಪಡೆದಿರುವ ರೋಹಿತ್ ಶರ್ಮಾ ಬಳಗವು ಸೆಮಿ ಫೈನಲ್ ತಲುಪಿದೆ.
ನ.10ರಂದು ಅಡಿಲೇಡ್ ಅಂಗಳದಲ್ಲಿ ನಡೆಯಲಿರುವ ಸೆಮಿ ಫೈನಲ್ ಪಂದ್ಯದಲ್ಲಿ ಭಾರತ ತಂಡವು ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಕಳೆದ ರವಿವಾರ ಮೆಲ್ಬರ್ನ್ ನಲ್ಲಿ ಜಿಂಬಾಬ್ವೆ ವಿರುದ್ಧ ತಂಡವು ಅಡಿಲೇಡ್ ಗೆ ಪ್ರಯಾಣಿಸಿದೆ.
ಆಸ್ಟ್ರೇಲಿಯಾ ಖಂಡದಾದ್ಯಂತ ನಡೆಯುತ್ತಿರುವ ಟಿ20 ವಿಶ್ವಕಪ್ ನಲ್ಲಿ ಒಂದೊಂದು ಸ್ಥಳಗಳಿಗೆ ಪ್ರಯಾಣಿಸುವುದೇ ತಂಡಗಳಿಗೆ ದೊಡ್ಡ ಸಮಸ್ಯೆಯಾಗಿದೆ. ವಿವಿಧ ಸ್ಥಳಗಳ ನಡುವೆ ತೆರಳಲು ತಂಡಗಳು ಐದು ಗಂಟೆಗಳವರೆಗೆ ದೇಶೀಯ ವಿಮಾನಗಳಲ್ಲಿ ಪ್ರಯಾಣಿಸಬೇಕಾಗಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಎಲ್ಲಾ ತಂಡಗಳಿಗೆ ದೇಶೀಯ ವಿಮಾನದಲ್ಲಿ ತಲಾ ನಾಲ್ಕು ಬಿಸಿನೆಸ್ ಕ್ಲಾಸ್ ಸೀಟುಗಳನ್ನು ನಿಗದಿಪಡಿಸುತ್ತದೆ. ಇವುಗಳನ್ನು ಸಾಮಾನ್ಯವಾಗಿ ನಾಯಕ, ಮುಖ್ಯ ಕೋಚ್ ಮತ್ತು ತಂಡದ ಹಿರಿಯ ಸದಸ್ಯರಿಗೆ ಮೀಸಲಿಡಲಾಗುತ್ತದೆ. ಭಾರತದ ತಂಡದಲ್ಲಿ ಈ ಸೀಟುಗಳನ್ನು ಸಾಮಾನ್ಯವಾಗಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಗೆ ಮೀಸಲಿಡಲಾಗಿದೆ.
ಆದರೆ ರೋಹಿತ್, ಕೊಹ್ಲಿ ಮತ್ತು ದ್ರಾವಿಡ್ ಅವರು ಮೆಲ್ಬರ್ನ್ ನಿಂದ ಅಡಿಲೇಡ್ ಗೆ ತೆರಳುವ ವಿಮಾನದಲ್ಲಿ ತಮ್ಮ ಬಿಸಿನೆಸ್ ಕ್ಲಾಸ್ ಸೀಟುಗಳನ್ನು ವೇಗಿಗಳಿಗೆ ಬಿಟ್ಟುಕೊಟ್ಟಿದ್ದಾರೆ ಎಂದು ವರದಿಯಾಗಿದೆ. ಇದರಿಂದಾಗಿ ವೇಗದ ಬೌಲರ್ ಗಳಾದ ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್ ಮತ್ತು ಭುವನೇಶ್ವರ್ ಕುಮಾರ್ ಆರಾಮವಾಗಿ ಪ್ರಯಾಣಿಸಿದ್ದಾರೆ.
“ಟೂರ್ನಮೆಂಟ್ ನಲ್ಲಿ ವೇಗದ ಬೌಲರ್‌ಗಳು ಮೈದಾನದ ದಿನದಲ್ಲಿ ಗರಿಷ್ಠ ಓಡಾಟ ನಡೆಸುವುದರ ಕಾರಣ ಅವರು ತಮ್ಮ ಕಾಲುಗಳನ್ನು ಚಾಚಲಿ ಎಂದು ಬಯಸಿದೆವು” ಎಂದು ಭಾರತೀಯ ತಂಡದ ಸಹಾಯಕ ಸಿಬ್ಬಂದಿಯೊಬ್ಬರು ದಿ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ.
ಟೀಮ್ ಇಂಡಿಯಾ ತಮ್ಮ ಅಭಿಯಾನವನ್ನು ಮುಗಿಸುವ ಹೊತ್ತಿಗೆ, ಈ ಟಿ20 ವಿಶ್ವಕಪ್ ನಲ್ಲಿ ತಂಡವು ಸುಮಾರು 34,000 ಕಿಮೀ ಪ್ರಯಾಣಿಸುತ್ತದೆ.