Advertisement

ರೋಹಿತ್‌ ದ್ವಿಶತಕ; ಭಾರತಕ್ಕೆ ಬೃಹತ್‌ ಗೆಲುವು: ಲಂಕೆಗೆ ತಿರುಗೇಟು

01:38 PM Dec 14, 2017 | Team Udayavani |

ಮೊಹಾಲಿ: ನಾಯಕ ರೋಹಿತ್‌ ಶರ್ಮ ಅವರ ಸ್ಫೋಟಕ ದ್ವಿಶತಕದಿಂದಾಗಿ ಭಾರತ ತಂಡವು ಬುಧವಾರ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 141 ರನ್ನುಗಳಿಂದ ಭರ್ಜರಿಯಾಗಿ ಸೋಲಿಸಿ ಮೊದಲ ಪಂದ್ಯದ ಸೋಲಿಗೆ ಭರ್ಜರಿಯಾಗಿ ತಿರುಗೇಟು ನೀಡಿದೆ. ಈ ಗೆಲುವಿನಿಂದ ಭಾರತ ಮೂರು ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ.

Advertisement

ರೋಹಿತ್‌ ಅವರ ಅಜೇಯ 208 ರನ್‌ ನೆರವಿನಿಂದ ಭಾರತವು ನಾಲ್ಕು ವಿಕೆಟಿಗೆ 392 ರನ್ನುಗಳ ಬೃಹತ್‌ ಮೊತ್ತ ಪೇರಿಸಿತು. ಈ ಮೊತ್ತ ನೋಡಿ ಆಘಾತಕ್ಕೆ ಒಳಗಾದ ಶ್ರೀಲಂಕಾ ತಂಡವು ಭಾರತೀಯ ಬೌಲರ್‌ಗಳ ನಿಖರ ದಾಳಿಯನ್ನು ಎದುರಿಸಲಾಗದೆ 8 ವಿಕೆಟಿಗೆ 251 ರನ್‌ ಗಳಿಸಲಷ್ಟೇ ಶಕ್ತವಾಗಿ ಶರಣಾಯಿತು. ಮಾಜಿ ನಾಯಕ ಏಂಜೆಲೊ ಮ್ಯಾಥ್ಯೂಸ್‌ ಅಜೇಯ 111 ರನ್‌ ಬಾರಿಸಿದರೂ ತಂಡಕ್ಕೆ ಗೆಲುವು ದೊರಕಿಸಿಕೊಡಲು ಸಾಧ್ಯವಾಗಲಿಲ್ಲ.

ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶಿಸುವ ಮೂಲಕ ರೋಹಿತ್‌ ಈ ಪಂದ್ಯವನ್ನು ಸ್ಮರಣೀಯಗೊಳಿಸಿದರು. ಮೂರನೇ ದ್ವಿಶತಕ ಬಾರಿಸುವ ಮೂಲಕ ತಮ್ಮ ಮೂರನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮವನ್ನು ಹೆಚ್ಚಿಸಿದರು. ಶಿಖರ್‌ ಧವನ್‌ ಮತ್ತು ಶ್ರೇಯಸ್‌ ಅಯ್ಯರ್‌ ಜತೆಗೂಡಿ ಅಮೋಘ ಜತೆಯಾಟದಲ್ಲಿ ಪಾಲ್ಗೊಂಡ ರೋಹಿತ್‌ ನಾಯಕನ ಆಟವಾಡಿ ತಂಡಕ್ಕೆ ಅರ್ಹ ಗೆಲುವು ದೊರಕಿಸಿಕೊಟ್ಟರಲ್ಲದೇ ಮೊದಲ ಪಂದ್ಯದ ಸೋಲಿನ ಕಹಿಯನ್ನು ಮರೆಯುವಂತೆ ಮಾಡಿದರು.  ರೋಹಿತ್‌ ಅವರ ಸಾಹಸದಿಂದ ಈ ಮೈದಾನಲ್ಲಿ ಭಾರತ ತನ್ನ ಗರಿಷ್ಠ ಮೊತ್ತ ಪೇರಿಸಿತು. ಆಗಲೇ ಭಾರತ ಗೆಲುವು ಬಹುತೇಕ ಖಚಿತವಾಗಿತ್ತು. ಪೂರ್ಣ ಸರಣಿಯಲ್ಲಿ ಮೊದಲ ಬಾರಿ ತಂಡದ ನೇತೃತ್ವ ವಹಿಸಿದ್ದ ರೋಹಿತ್‌ ಏಕಾಂಗಿಯಾಗಿ ಹೋರಾಡಿ ಭಾರತದ ಭರ್ಜರಿ ಗೆಲುವಿನ ರೂವಾರಿಯಾಗಿ ಕಾಣಿಸಿಕೊಂಡರು. 

16ನೇ ಶತಕ: ರೋಹಿತ್‌ ಅವರ ಭರ್ಜರಿ ಬ್ಯಾಟಿಂಗ್‌ ವೇಳೆ ಹಲವು ದಾಖಲೆಗಳು ನಿರ್ಮಾಣವಾದವು. ತನ್ನ 16ನೇ ಶತಕ ಪೂರ್ತಿಗೊಳಿಸಿದ ರೋಹಿತ್‌ ಆಬಳಿಕ ಸ್ಫೋಟಕವಾಗಿ ಆಡಿ ದ್ವಿಶತಕ ಸಿಡಿಸಿದರು. ಅವರು ಈ ಹಿಂದೆ ಶ್ರೀಲಂಕಾ ವಿರುದ್ಧವೇ ದ್ವಿಶತಕ ಬಾರಿಸಿದ್ದರು. ಇದಕ್ಕಿಂತ ಮೊದಲು ಆಸ್ಟ್ರೇಲಿಯ ವಿರುದ್ಧ ತನ್ನ ಮೊದಲ ದ್ವಿಶತಕ ಬಾರಿಸಿದ್ದರು.

ಎದುರಾಳಿ ದಾಳಿಯನ್ನು ನಿರ್ದಯವಾಗಿ ದಂಡಿಸಿದ ರೋಹಿತ್‌ ಡಜನ್‌ ಸಿಕ್ಸರ್‌ ಮತ್ತು 13 ಬೌಂಡರಿ ಸಿಡಿಸಿ ರಂಜಿಸಿದರು. ಶಿಖರ್‌ ಧವನ್‌ ಜತೆ ಇನ್ನಿಂಗ್ಸ್‌ ಆರಂಭಿಸಿದ ರೋಹಿತ್‌ ಪಂದ್ಯದಲ್ಲಿ ಹಿಡಿತ ಸಾಧಿಸಲು ಸಾಕಷ್ಟು ಸಮಯ  ತೆಗೆದುಕೊಂಡರು. ಮೊದಲ ಪವರ್‌ಪ್ಲೆಯಲ್ಲಿ ಅವರಿಬ್ಬರು ಕೇವಲ 33 ರನ್‌ ಗಳಿಸಿದ್ದರು. ಆಬಳಿಕ ಬಿರುಸಿನ ಆಟಕ್ಕೆ ಇಳಿದರು. ಮೊದಲ 20 ಓವರ್‌ ಮುಗಿದಾಗ ಭಾರತ ವಿಕೆಟ್‌ ನಷ್ಟವಿಲ್ಲದೇ 108 ರನ್‌ ಗಳಿಸಿತ್ತು. ಧವನ್‌ ಜತೆ ಮೊದಲ ವಿಕೆಟಿಗೆ 115 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡು ಉತ್ತಮ ಅಡಿಪಾಯ ಹಾಕಿಕೊಟ್ಟರು. ಅವರಿಬ್ಬರು ಇಷ್ಟರವರೆಗೆ 12ನೇ ಬಾರಿ ಶತಕದ ಜತೆಯಾಟ ನಡೆಸಿದ್ದಾರೆ. 

Advertisement

ಆಕರ್ಷಕ ಶೈಲಿಯ ಬಲಗೈ ಆಟಗಾರರಾಗಿರುವ ರೋಹಿತ್‌ ಈ ವರ್ಷ ಆರನೇ ಬಾರಿ ಶತಕ ಬಾರಿಸಿ ಸಂಭ್ರಮಿಸಿದರು. ನಾಯಕರಾಗಿ ಮೊದಲ ಶತಕ ಸಿಡಿಸಿದ ಸಾಧನೆ ಮಾಡಿದರು. ಧವನ್‌ ಔಟಾದ ಬಳಿಕ ತನ್ನ ಎರಡನೇ ಏಕದಿನ ಆಡುತ್ತಿರುವ ಶ್ರೇಯಸ್‌ ಅಯ್ಯರ್‌ ಜತೆಗೂಡಿದ ರೋಹಿತ್‌ ಭಾರತದ ಮೊತ್ತವನ್ನು ತೀವ್ರಗತಿಯಲ್ಲಿ ಏರಿಸತೊಡಗಿದರು. ದ್ವಿತೀಯ ವಿಕೆಟಿಗೆ ಅವರಿಬ್ಬರು 213 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡು ಭಾರತದ ಬೃಹತ್‌ ಮೊತ್ತಕ್ಕೆ ಕೊಡುಗೆ ಸಲ್ಲಿಸಿದರು. ನಾಯಕನಿಗೆ ಸಮರ್ಥ ರೀತಿಯಲ್ಲಿ ಬೆಂಬಲ ನೀಡಿದ ಶ್ರೇಯಸ್‌ 70 ಎಸೆತಗಳಿಂದ 88 ರನ್‌ ಹೊಡೆದರು. 9 ಬೌಂಡರಿ ಮತ್ತು 2 ಸಿಕ್ಸರ್‌ ಬಾರಿಸಿದರು. 

ಅಗ್ರ ಮೂವರು ಆಟಗಾರರ ಸೂಪರ್‌ ಆಟದಿಂದಾಗಿ ಭಾರತ ಬೃಹತ್‌ ಮೊತ್ತ ಪೇರಿಸುವಂತಾಯಿತು. ಇದು ಈ ಮೈದಾನದಲ್ಲಿ ದಾಖಲಾದ ಗರಿಷ್ಠ ಮೊತ್ತ (4 ವಿಕೆಟಿಗೆ 392) ಆಗಿದೆ. 2011ರಲ್ಲಿ ಹಾಲೆಂಡ್‌ ವಿರುದ್ಧ ದಕ್ಷಿಣ ಆಫ್ರಿಕಾ 5 ವಿಕೆಟಿಗೆ 351 ರನ್‌ ಪೇರಿಸಿದ್ದು ಈ ಹಿಂದಿನ ಗರಿಷ್ಠ ಮೊತ್ತವಾಗಿತ್ತು.

ಶ್ರೇಯಸ್‌ ಔಟಾದ ಬಳಿಕ ಬಂದ ನಾಯಕ ಧೋನಿ ಮತ್ತು ಹಾರ್ದಿಕ್‌ ಬಿರುಸಿನ ಆಟವಾಡಲು ವಿಫ‌ಲರಾದರು. ಧೋನಿ 7 ರನ್ನಿಗೆ ಎಲ್‌ಬಿಗೆ ಬಲಿಯಾದರೆ ಹಾರ್ದಿಕ್‌ 8 ರನ್‌ ಗಳಿಸಿ ಇನ್ನಿಂಗ್ಸ್‌ನ ಅಂತಿಮ ಎಸೆತದಲ್ಲಿ ಔಟಾದರು. ಇನ್ನಿಂಗ್ಸ್‌ ಪೂರ್ತಿ ಆಡಿದ ರೋಹಿತ್‌ 208 ರನ್‌ ಗಳಿಸಿ ಅಜೇಯರಾಗಿ ಉಳಿದರು. 

ರೋಹಿತ್‌ ಮೊದಲ 50 ರನ್‌ ಗಳಿಸಲು 65 ಎಸೆತ ತೆಗೆದುಕೊಂಡರೆ ಮುಂದಿನ 50 ರನ್ನಿಗೆ 50 ಎಸೆತ ತೆಗೆದುಕೊಂಡರು. ಶತಕದ ಬಳಿಕ ಶರವೇಗದಲ್ಲಿ ರನ್‌ಪೇರಿಸಿದ ಅವರು ದ್ವಿಶತಕ ಬಾರಿಸಲು ಕೇವಲ 36 ಎಸೆತ ತೆಗೆದುಕೊಂಡರು. ಹೀಗಾಗಿ ಭಾರತ ಅಂತಿಮ 10 ಓವರ್‌ಗಳಲ್ಲಿ 147 ರನ್‌ ಪೇರಿಸಲು ಸಾಧ್ಯವಾಯಿತು.

ಕಠಿನ ಗುರಿ: ಗೆಲ್ಲಲು ಕಠಿನ ಗುರಿ ಪಡೆದ ಶ್ರೀಲಂಕಾ ತಂಡವು ಆರಂಭದಲ್ಲಿಯೇ ಎಡವಿತು. ಮಾಜಿ ನಾಯಕ ಮ್ಯಾಥ್ಯೂಸ್‌ ಮತ್ತು ಗುಣರತ್ನೆ ಅವರನ್ನು ಹೊರತುಪಡಿಸಿ ಉಳಿದ ಯಾವುದೇ ಆಟಗಾರ ಉತ್ತಮ ಆಟವಾಡಲು ವಿಫ‌ಲರಾದರು. ಹೀಗಾಗಿ ಶ್ರೀಲಂಕಾ 8 ವಿಕೆಟಿಗೆ 251 ರನ್‌ ಪೇರಿಸಲಷ್ಟೇ ಶಕ್ತವಾಯಿತು. ಏಕಾಂಗಿಯಾಗಿ ಹೋರಾಡಿದ ಮ್ಯಾಥ್ಯೂಸ್‌ 111 ರನ್‌ ಗಳಿಸಿ ಅಜೇಯರಾಗಿ ಉಳಿದರು. 132 ಎಸೆತ ಎದುರಿಸಿದ ಅವರು 9 ಬೌಂಡರಿ ಮತ್ತು 3 ಸಿಕ್ಸರ್‌ ಬಾರಿಸಿದ್ದರು. ಮುರಿಯದ 9ನೇ ವಿಕೆಟಿಗೆ ಸುರಂಗ ಲಕ್ಮಲ್‌ ಜತೆಗೆ 44 ರನ್‌ ಪೇರಿಸಿ ತಂಡ ಆಲೌಟ್‌ ಆಗುವುದನ್ನು ತಪ್ಪಿಸಿದರು. ಯಜುವೇಂದ್ರ ಚಾಹಲ್‌ 60 ರನ್ನಿಗೆ 3 ವಿಕೆಟ್‌ ಉರುಳಿಸಿದರು.

ಮಡದಿ ರಿತಿಕಾಗೆ ರೋಹಿತ್‌ ಭರ್ಜರಿ ಉಡುಗೊರೆ
ಭಾರತ-ಶ್ರೀಲಂಕಾ ನಡುವಣ ಎರಡನೇ ಏಕದಿನ ಪಂದ್ಯದಲ್ಲಿ ಐತಿಹಾಸಿಕ ಮೂರನೇ ದ್ವಿಶತಕ ಬಾರಿಸಿದ ನಾಯಕ ರೋಹಿತ್‌ ಶರ್ಮ ಅವರು ಮಡದಿ ರಿತಿಕಾ ಅವರಿಗೆ ತಮ್ಮ ಮೂರನೇ ವೈವಾಹಿಕ ಮಹೋತ್ಸವಕ್ಕೆ ಭರ್ಜರಿ ಗಿಫ್ಟ್ ನೀಡಿದ್ದಾರೆ.
 
ಪೆವಿಲಿಯನ್‌ನಲ್ಲಿ ಪಂದ್ಯ ವೀಕ್ಷಿಸುತ್ತಿದ್ದ  ರಿತಿಕಾ, ರೋಹಿತ್‌ ಮೂರನೇ ದ್ವಿಶತಕ ಪೂರ್ಣಗೊಳಿಸುತ್ತಲೇ ಪತಿಯ ಸಾಧನೆ ನೋಡಿ ಭಾವೋದ್ವೇಗಕ್ಕೆ ಒಳಗಾಗಿ ಸಂಭ್ರಮ ವ್ಯಕ್ತಪಡಿಸಿದರು. ಇದೇ ವೇಳೆ ಮೈದಾನದಲ್ಲಿ  ರೋಹಿತ್‌ ಕೂಡ ಉಂಗುರ ಬೆರಳಿಗೆ ಮುತ್ತಿಕ್ಕಿ ಪತ್ನಿಯೆಡೆಗೆ ನೋಡುತ್ತ ತಮ್ಮ ವೈವಾಹಿಕ ಜೀವನದ ವರ್ಷಾಚರಣೆಗೆ ಇದೇ ಪ್ರೀತಿಯ ಗಿಫ್ಟ್  ಎಂದು ಸೂಚಿಸಿದರು.

ವಾಷಿಂಗ್ಟನ್‌ ಸುಂದರ್‌ ಏಕದಿನಕ್ಕೆ ಪಾದಾರ್ಪಣೆ
ಶ್ರೀಲಂಕಾ ವಿರುದ್ಧ ಬುಧವಾರ ನಡೆದ ದ್ವಿತೀಯ ಪಂದ್ಯದ ಮೂಲಕ ವಾಷಿಂಗ್ಟನ್‌ ಸುಂದರ್‌ ಏಕದಿನ ಕ್ರಿಕೆಟಿಗೆ ಪಾದಾರ್ಪಣೆಗೈದರು. ಗಾಯಗೊಂಡ ಕೇದಾರ್‌ ಜಾಧವ್‌ ಬದಲಿಗೆ ಸುಂದರ್‌ ತಂಡಕ್ಕೆ ಆಯ್ಕೆಯಾದರು.

18ರ ಹರೆಯದ ಸುಂದರ್‌ ಭಾರತ ಪರ ಏಕದಿನ ಕ್ರಿಕೆಟಿಗೆ ಪಾದಾರ್ಪಣೆಗೈದ ಏಳನೇ ಅತೀ ಕಿರಿಯ ಕ್ರಿಕೆಟಿಗರಾಗಿದ್ದಾರೆ. ಕಳೆದ ಐಪಿಎಲ್‌ನಲ್ಲಿ ನೀಡಿದ ಅಮೋಘ ನಿರ್ವಹಣೆಯ ಆಧಾರದಲ್ಲಿ ಸುಂದರ್‌ ತಂಡಕ್ಕೆ ಆಯ್ಕೆಯಾಗಿದ್ದರು. 
ಆರಂಭದಲ್ಲಿ ಸುಂದರ್‌ ಅವರನ್ನು ಭಾರತೀಯ ಟ್ವೆಂಟಿ20 ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಆದರೆ ಕೊನೆ ಹಂತದಲ್ಲಿ ಗಾಯಗೊಂಡ ಕೇದಾರ್‌ ಜಾಧವ್‌ ಬದಲಿಗೆ ಸುಂದರ್‌ ಏಕದಿನಕ್ಕೆ ಆಯ್ಕೆಯಾಗಿದ್ದರು. ಇದೀಗ ಕುಲದೀಪ್‌ ಯಾದವ್‌ ಜಾಗಕ್ಕೆ ಸುಂದರ್‌ ಅವರನ್ನು ಆಟವಾಡುವ ಬಳಗಕ್ಕೆ ಸೇರಿಸಿಕೊಳ್ಳಲಾಗಿದೆ. 

ಪೂರ್ಣ 10 ಓವರ್‌ ದಾಳಿ ನಡೆಸಲು ಸಿದ್ಧವಾಗಿ ದ್ದೇನೆ. ಯಾವುದೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ನಡೆ ಸಲು ಸೂಚಿಸಿದರೂ ಉತ್ತಮ ಆಟ ಪ್ರದರ್ಶಿಸಲು ಪ್ರಯತ್ನಿಸುವೆ ಎಂದು ಸುಂದರ್‌ ಹೇಳಿದ್ದಾರೆ. 

ಸ್ಕೋರುಪಟ್ಟಿ
ಭಾರತ
ರೋಹಿತ್‌ ಶರ್ಮ    ಔಟಾಗದೆ    208
ಶಿಖರ್‌ ಧವನ್‌    ಸಿ ತಿರಿಮನ್ನೆ ಬಿ ಪತಿರಣ    68
ಶ್ರೇಯಸ್‌ ಅಯ್ಯರ್‌    ಸಿ ಬದಲಿಗ ಬಿ ಪೆರೆರ    88
ಎಂಎಸ್‌ ಧೋನಿ    ಎಲ್‌ಬಿಡಬ್ಲ್ಯು ಬಿ ಪೆರೆರ    7
ಹಾರ್ದಿಕ್‌ ಪಾಂಡ್ಯ    ಸಿ ತಿರಿಮನ್ನೆ ಬಿ ಪೆರೆರ    8
ಇತರ:        13
ಒಟ್ಟು  (4 ವಿಕೆಟಿಗೆ)        392
ವಿಕೆಟ್‌ ಪತನ: 1-115, 2-328, 3-354, 4-392
ಬೌಲಿಂಗ್‌:
ಏಂಜೆಲೊ ಮ್ಯಾಥ್ಯೂಸ್‌        4-1-9-0
ಸುರಂಗ ಲಕ್ಮಲ್‌        8-0-71-0
ತಿಸರ ಪೆರೆರ        8-0-80-3
ನುವಾನ್‌ ಪ್ರದೀಪ್‌        10-0-106-0
ಅಖೀಲ ಧನಂಜಯ        10-0-51-0
ಸಚಿತ ಪತಿರಣ        9-0-63-1
ಅಸೇಲ ಗುಣರತ್ನೆ        1-0-10-0
ಶ್ರೀಲಂಕಾ
ದನುಷ್ಕ ಗುಣತಿಲಕ    ಸಿ ಧೋನಿ ಬಿ ಬುಮ್ರಾ    16
ಉಪುಲ್‌ ತರಂಗ    ಸಿ ಕಾರ್ತಿಕ್‌ ಬಿ ಪಾಂಡ್ಯ    7
ಲಹಿರು ತಿರಿಮನ್ನೆ    ಬಿ ವಾಷಿಂಗ್ಟನ್‌ ಸುಂದರ್‌    21
ಏಂಜೆಲೊ ಮ್ಯಾಥ್ಯೂಸ್‌    ಔಟಾಗದೆ    111
ನಿರೋಷನ್‌ ಡಿಕ್ವೆಲ್ಲ    ಸಿ ಸುಂದರ್‌ ಬಿ ಚಾಹಲ್‌    22
ಅಸೇಲ ಗುಣರತ್ನೆ    ಸ್ಟಂಪ್ಡ್ ಧೋನಿ ಬಿ ಚಾಹಲ್‌    34
ತಿಸರ ಪೆರೆರ    ಸಿ ಧೋನಿ ಬಿ ಚಾಹಲ್‌    5
ಸಚಿತ ಪತಿರಣ    ಸಿ ಧವನ್‌ ಬಿ ಕುಮಾರ್‌    2
ಅಖೀಲ ಧನಂಜಯ    ಸಿ ಶರ್ಮ ಬಿ ಬುಮ್ರಾ    11
ಸುರಂಗ ಲಕ್ಮಲ್‌    ಔಟಾಗದೆ    11
ಇತರ:        11
ಒಟ್ಟು  (8 ವಿಕೆಟಿಗೆ 50 ಓವರ್‌ಗಳಲ್ಲಿ)    251
ವಿಕೆಟ್‌ ಪತನ: 1-15, 2-30, 3-62, 4-115, 5-159, 6-166, 7-180, 8-207
ಬೌಲಿಂಗ್‌:
ಭುವನೇಶ್ವರ್‌ ಕುಮಾರ್‌        9-0-40-1
ಹಾರ್ದಿಕ್‌ ಪಾಂಡ್ಯ        10-0-39-1
ಜಸ್‌ಪ್ರೀತ್‌ ಬುಮ್ರಾ        10-0-43-2
ವಾಷಿಂಗ್ಟನ್‌ ಸುಂದರ್‌        10-0-65-1
ಯಜುವೇಂದ್ರ ಚಾಹಲ್‌        10-0-60-3
ಶ್ರೇಯಸ್‌ ಅಯ್ಯರ್‌        1-0-2-0
ಪಂದ್ಯಶ್ರೇಷ್ಠ: ರೋಹಿತ್‌ ಶರ್ಮ

ಎಂತಹ ಸ್ಫೋಟಕ ಬ್ಯಾಟ್ಸ್‌ಮನ್‌!

ಎಂತಹ ಸ್ಫೋಟಕ ಬ್ಯಾಟ್ಸ್‌ ಮನ್‌! ನಂಬಲಸಾಧ್ಯ. 3ನೇ ದ್ವಿಶತಕಕ್ಕೆ ಅಭಿನಂದನೆಗಳು. ವಿಶ್ವಕ್ರಿಕೆಟ್‌ನಲ್ಲಿ ದಾಖಲಾದ 7 ದ್ವಿಶತಕಗಳಲ್ಲಿ ನಿಮ್ಮದೇ ಮೂರು. ನಿಮಗೊಂದು ಸಲಾಂ.
-ವಿವಿಎಸ್‌ ಲಕ್ಷ್ಮಣ್‌, 

ಮಾಜಿ ಕ್ರಿಕೆಟಿಗ ದ್ವಿಶತಕವನ್ನೇ ಬಾರಿಸುವುದಕ್ಕೆ ಹುಟ್ಟಿದ ಕ್ರಿಕೆಟಿಗ. ಸುಂದರ, ಮನೋಹರ. ವಿಶ್ವದರ್ಜೆಯ ಬ್ಯಾಟ್ಸ್‌ಮನ್‌.
-ಯುವರಾಜ್‌ ಸಿಂಗ್‌, 
ಸಹ ಕ್ರಿಕೆಟಿಗ

ವಾಹ್‌ ರೋಹಿತ್‌ ವಾಹ್‌. ದ್ವಿಶತಕದ ವೇಳೆ 2ನೇ ನೂರು ಬಾರಿಸುವುದಕ್ಕೆ ಬಳಸಿದ್ದು ಕೇವಲ 36 ಎಸೆತ. ನಿಮ್ಮ ಬಗ್ಗೆ ಹೆಮ್ಮೆಯೆನಿಸುತ್ತಿದೆ.
-ವೀರೇಂದ್ರ ಸೆಹವಾಗ್‌, ಮಾಜಿ ಕ್ರಿಕೆಟಿಗ

ಒಂದಲ್ಲ, ಎರಡಲ್ಲ ಮೂರು ದ್ವಿಶತಕ. ಈ ಇನ್ನಿಂಗ್ಸ್‌ನಲ್ಲಿ ನೀವು ಬ್ಯಾಟಿಂಗ್‌ ಅಂದರೆ ನೀರು ಕುಡಿದಂತೆ ಎಂಬ ಭಾವ ಮೂಡಿಸಿ ದ್ದೀರಿ. ಬಹಳ ಖುಷಿಯಾಯಿತು. ಇಂತಹದ್ದು ನಿರಂತರವಾಗಿ ಬರುತ್ತಲೇ ಇರಲಿ.
-ಸುರೇಶ್‌ ರೈನಾ, 
ಸಹ ಕ್ರಿಕೆಟಿಗ

ಎಕ್ಸ್‌ಟ್ರಾ ಇನ್ನಿಂಗ್ಸ್‌
ಏಕದಿನ ಕ್ರಿಕೆಟ್‌ನಲ್ಲಿ ರೋಹಿತ್‌ ಶರ್ಮ ಮೂರು ದ್ವಿಶತಕ ಬಾರಿಸಿದ್ದಾರೆ. ಉಳಿದ ನಾಲ್ವರು ಆಟಗಾರರು (ಸಚಿನ್‌ ತೆಂಡುಲ್ಕರ್‌, ವೀರೇಂದ್ರ ಸೆಹವಾಗ್‌, ಕ್ರಿಸ್‌ ಗೇಲ್‌ ಮತ್ತು ಮಾರ್ಟಿನ್‌ ಗಪ್ಟಿಲ್‌) ತಲಾ ಒಂದು ದ್ವಿಶತಕ ಬಾರಿಸಿದ್ದಾರೆ. ರೋಹಿತ್‌ ದ್ವಿಶತಕ ಬಾರಿಸಿದ ಎರಡನೇ ನಾಯಕರಾಗಿದ್ದಾರೆ. ಸೆಹವಾಗ್‌ ಮೊದಲಿಗ. 

ರೋಹಿತ್‌ ಐದು ಬಾರಿ 150 ಪ್ಲಸ್‌ ರನ್‌ ಗಳಿಸಿದ್ದು ತೆಂಡುಲ್ಕರ್‌ ಮತ್ತು ಡೇವಿಡ್‌ ವಾರ್ನರ್‌ ಸಾಧನೆಯನ್ನು ಸಮಗಟ್ಟಿದ್ದಾರೆ. 

ರೋಹಿತ್‌ ಎರಡನೇ ಶತಕವನ್ನು ಪೂರ್ತಿಗೊಳಿಸಲು ಕೇವಲ 36 ಎಸೆತ ತೆಗೆದುಕೊಂಡಿದ್ದಾರೆ. ಮೊದಲ ಶತಕ 115 ಎಸೆತಗಳಿಂದ ಬಂದಿತ್ತು. 116ರಿಂದ 208 ರನ್‌ ತಲುಪಲು ಅವರು ಕೇವಲ 27 ಎಸೆತ ತೆಗೆದುಕೊಂಡಿದ್ದರು. ಈ ನಡುವೆ ಅವರು 11 ಸಿಕ್ಸರ್‌ ಮತ್ತು 3 ಬೌಂಡರಿ ಬಾರಿಸಿದ್ದರು.

ಏಕದಿನ ಪಂದ್ಯದಲ್ಲಿ ಶತಕ ಪೂರ್ತಿಗೊಳಿಸಿದ ಬಳಿಕ ರೋಹಿತ್‌ ಅವರ ಸ್ಟ್ರೈಕ್‌ರೇಟ್‌ 199.39 ಹೀಗಿತ್ತು. ಶತಕ ದಾಖಲಿಸಿದ ವೇಳೆ ಅವರು 86.95 ಸ್ಟ್ರೈಕ್‌ರೇಟ್‌ ಹೊಂದಿದ್ದರೆ ಆಬಳಿಕ ಅದು 284.21ಕ್ಕೇರಿತ್ತು. ರೋಹಿತ್‌ ಅವರ ಈ ಹಿಂದಿನ ದ್ವಿಶತಕದ ವೇಳೆ ಮೊದಲ ಶತಕ ದಾಖಲಿಸಿದ ಬಳಿಕ 200 ಪ್ಲಸ್‌ ಸ್ಟ್ರೈಕ್‌ರೇಟ್‌ ಇತ್ತು. 

ಏಕದಿನ ಕ್ರಿಕೆಟ್‌ನಲ್ಲಿ ರೋಹಿತ್‌ ಅವರಿಗಿಂತ ಹೆಚ್ಚಿನ ಶತಕವನ್ನು ಭಾರತ ಪರ ಮೂವರು ಹೊಡೆದಿದ್ದಾರೆ. ರೋಹಿತ್‌ 16ನೇ ಶತಕ ಸಿಡಿಸಿ ಸೆಹವಾಗ್‌ ಅವರ 15 ಶತಕ ಸಾಧನೆಯನ್ನು ಹಿಂದಿಕ್ಕಿದ್ದಾರೆ. ತೆಂಡುಲ್ಕರ್‌ (49), ಕೊಹ್ಲಿ (32) ಮತ್ತು ಸೌರವ್‌ ಗಂಗೂಲಿ (22) ಅವರು ರೋಹಿತ್‌ಗಿಂತ ಹೆಚ್ಚಿನ ಶತಕ ಹೊಡೆದಿದ್ದಾರೆ.

ರೋಹಿತ್‌ ಈ ವರ್ಷ ಏಕದಿನ ಕ್ರಿಕೆಟ್‌ನಲ್ಲಿ ಆರು ಅಥವಾ ಅದಕ್ಕಿಂತ ಹೆಚ್ಚಿನ ಶತಕ ಸಿಡಿಸಿದ್ದಾರೆ. ಇದಕ್ಕಿಂತ ಮೊದಲು ಗಂಗೂಲಿ 2000ದಲ್ಲಿ ಆರು ಶತಕ ಬಾರಿಸಿದ್ದರೆ 1996ರಲ್ಲಿ ತೆಂಡುಲ್ಕರ್‌ ಆರು ಮತ್ತು 1998ರಲ್ಲಿ 9 ಶತಕ ಸಿಡಿಸಿದ್ದರು.

ರೋಹಿತ್‌ ಅಂತಿಮ 10 ಓವರ್‌ಗಳಲ್ಲಿ ಎದುರಿಸಿದ 37 ಎಸೆತಗಳಲ್ಲಿ 107 ರನ್‌ ಸಿಡಿಸಿರುವುದು 2001ರ ಬಳಿಕ ನಾಲ್ಕನೇ ಮತ್ತು ಅವರ ಎರಡನೇ ಗರಿಷ್ಠ ರನ್‌ ಆಗಿದೆ. ಅವರು 2014ರಲ್ಲಿ ಶ್ರೀಲಂಕಾ ವಿರುದ್ಧ 264 ರನ್‌ ಬಾರಿಸಿದಾಗ ಅಂತಿಮ 10 ಓವರ್‌ಗಳಲ್ಲಿ ಎದುರಿಸಿದ 44 ಎಸೆತಗಳಲ್ಲಿ 110 ರನ್‌ ಗಳಿಸಿದ್ದರು.  2015ರಲ್ಲಿ ವೆಸ್ಟ್‌ಇಂಡೀಸ್‌ ವಿರುದ್ಧ ಎಬಿ ಡಿ’ವಿಲಿಯರ್ ಅಂತಿಮ 36 ಎಸೆತಗಳಲ್ಲಿ 121 ರನ್‌ ಸಿಡಿಸಿರುವುದು ಗರಿಷ್ಠ ರನ್‌ ಆಗಿದೆ. 

ನುವನ್‌ ಪ್ರದೀಪ್‌ 106 ರನ್‌ ಬಿಟ್ಟುಕೊಟ್ಟಿರುವುದು ಬೌಲರೊಬ್ಬರ ಜಂಟಿ ಮೂರನೇ ಗರಿಷ್ಠ ರನ್‌ ಆಗಿದೆ. ಪ್ರದೀಪ್‌ ಅವರಿಗಿಂತ ಮಿಕ್‌ ಲೂವಿಸ್‌ (113) ಮತ್ತು ವಹಾಬ್‌ ರಿಯಾಜ್‌ (110) ಹೆಚ್ಚಿನ ರನ್‌ ಬಿಟ್ಟುಕೊಟ್ಟಿದ್ದಾರೆ. ಈ ಪಂದ್ಯದಲ್ಲಿ ರೋಹಿತ್‌ ಅವರು ಪ್ರದೀಪ್‌ ಎಸೆದ 32 ಎಸೆತಗಳಲ್ಲಿ 67 ರನ್‌ ಹೊಡೆದಿದ್ದರು. ಇದು ಬ್ಯಾಟ್ಸ್‌ಮನ್‌ ಓರ್ವ ಹೊಡೆದ ಎರಡನೇ ಗರಿಷ್ಠ ರನ್‌ ಆಗಿದೆ.

ಭಾರತ ಏಕದಿನ ಕ್ರಿಕೆಟ್‌ನಲ್ಲಿ 100 ಬಾರಿ 300 ಪ್ಲಸ್‌ ಮೊತ್ತ ದಾಖಲಿಸಿದೆ. ಈ ಸಾಧನೆ ಮಾಡಿದ ಮೊದಲ ತಂಡವೆನಿಸಿದೆ. 96 ಬಾರಿ ಈ ಸಾಧನೆ ಮಾಡಿದ ಆಸ್ಟ್ರೇಲಿಯ ದ್ವಿತೀಯ ಸ್ಥಾನದಲ್ಲಿದೆ. ಪೂರ್ಣ ಸದಸ್ಯ ತಂಡಗಳಲ್ಲಿ ಭಾರತ ಕೊನೆಯ ತಂಡವಾಗಿ 300 ಪ್ಲಸ್‌ ಹೊಡೆದಿತ್ತು. ಆದರೆ ಇದೀಗ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಭಾರತದ ಅಗ್ರ ಮೂವರು ಆಟಗಾರರು ( ರೋಹಿತ್‌ 208,ಧವನ್‌ 68 ಮತ್ತು ಶ್ರೇಯಸ್‌ ಅಯ್ಯರ್‌ 88) ಈ ಪಂದ್ಯದಲ್ಲಿ 364 ರನ್‌ ಗಳಿಸಿದ್ದು ಮೂರನೇ ಗರಿಷ್ಠ ಮೊತ್ತವಾಗಿದೆ. 1999ರಲ್ಲಿ ಹೈದರಾಬಾದ್‌ನಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ 343 ರನ್‌ ಹೊಡೆದಿರುವುದು ಭಾರತದ ಈ ಹಿಂದಿನ ಗರಿಷ್ಠ ಮೊತ್ತವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next