Advertisement
ಅದೇನೇ ಇದ್ದರೂ ಪ್ರತಿಷ್ಠಿತ ವಿಂಬಲ್ಡನ್ ಟೆನಿಸ್ ಪಂದ್ಯಾವಳಿ ಮಾತ್ರ ತನ್ನ ಚಾರ್ಮ್ ಬಿಟ್ಟುಕೊಡದು. ಈ ಬಾರಿಯ ನೆಚ್ಚಿನ ಆಟ ಗಾರರು ಯಾರು, ಪ್ರಶಸ್ತಿ ಯಾರಿಗೆ ಒಲಿದೀತು ಎಂಬ ಕುರಿತು ಈಗಾಗಲೇ ಚರ್ಚೆ ಮೊದಲ್ಗೊಂಡಿದೆ. ಪುರುಷರ ಸಿಂಗಲ್ಸ್‌ನಲ್ಲಿ ರೋಜರ್ ಫೆಡರರ್ 9ನೇ ಸಲ ಪ್ರಶಸ್ತಿ ಎತ್ತಬಲ್ಲರೇ ಎಂಬುದು ಚರ್ಚೆಯ ಮುಖ್ಯ ಸಂಗತಿ.
ಆಗಸ್ಟ್ ತಿಂಗಳಲ್ಲಿ 37ರ ಹರೆಯಕ್ಕೆ ಕಾಲಿಡಲಿರುವ ಸ್ವಿಸ್ ತಾರೆ ರೋಜರ್ ಫೆಡರರ್ ಹಾಲಿ ವಿಂಬಲ್ಡನ್ ಚಾಂಪಿಯನ್. 2017ರಲ್ಲಿ ಕ್ರೊವೇಶಿಯದ ಮರಿನ್ ಸಿಲಿಕ್ ಅವರನ್ನು ಸೋಲಿಸಿ 8ನೇ ಸಲ ಪ್ರಶಸ್ತಿ ಜಯಿಸಿದ್ದರು. ವರ್ಷಾರಂಭದ ಆಸ್ಟ್ರೇಲಿಯನ್ ಓಪನ್ ಜಯದೊಂದಿಗೆ ತಮ್ಮ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಗಳ ಸಂಖ್ಯೆಯನ್ನು 20ಕ್ಕೆ ಏರಿಸಿಕೊಂಡಿದ್ದರು. ಆದರೆ ಫ್ರೆಂಚ್ ಓಪನ್‌ನಲ್ಲಿ ಆಡಿರಲಿಲ್ಲ. ಆವೆಯಂಗಳದ ನೆಚ್ಚಿನ ಆಟಗಾರ ರಫೆಲ್ ನಡಾಲ್ 11ನೇ ಸಲ ಪ್ಯಾರಿಸ್ ಕಿರೀಟದೊಂದಿಗೆ ಮೆರೆದಿದ್ದರು. ಆದರೆ ಹುಲ್ಲಿನಂಗಳದಲ್ಲಿ ನಡಾಲ್ ಹೆಚ್ಚು ಅಪಾಯಕಾರಿಯಲ್ಲ. ಹೀಗಾಗಿ ಇಲ್ಲಿ ಫೆಡರರ್ ಅವರಿಗೆ ಅವಕಾಶ ಹೆಚ್ಚು. ಜರ್ಮನಿಯ ಗ್ರಾಸ್ ಕೋರ್ಟ್ ಟೂರ್ನಿ ಯಾದ “ಸ್ಟಟ್‌ಗಾರ್ಟ್’ ಪಂದ್ಯಾವಳಿಯಲ್ಲಿ ಪ್ರಶಸ್ತಿ ಜಯಿಸಿದ ಫೆಡರರ್, ಬಳಿಕ ಹಾಲೆ ಟೂರ್ನಿಯ ಫೈನಲಿಗೂ ಲಗ್ಗೆ ಇರಿಸಿದ್ದರು. ಆದರಿಲ್ಲಿ ಬೋರ್ನ ಕೊರಿಕ್‌ಗೆ ಸೋತು ಆಘಾತಕ್ಕೊಳಗಾಗಿದ್ದರು. “ಫೆಡರರ್ ವಿಂಬಲ್ಡನ್ ಪಂದ್ಯಾವಳಿಯ ನೆಚ್ಚಿನ ಆಟಗಾರ. ಅವರು ಕಳೆದ ವರ್ಷದಂತೆ ಆಡಿದರೆ ಸಾಕು, ಪ್ರಶಸ್ತಿ ಉಳಿಸಿಕೊಳ್ಳಬಲ್ಲರು. ನಿಜ, ಅವರು ಈ ವರ್ಷ ಕೆಲವು 3-ಸೆಟ್ ಪಂದ್ಯಗಳಲ್ಲಿ ಸೋತಿದ್ದಾರೆ. ಆದರೆ ವಿಂಬಲ್ಡನ್ ಎಂಬುದು ಸಂಪೂರ್ಣ ಭಿನ್ನ ಪಂದ್ಯಾವಳಿ’ ಎಂದು ಮಾಜಿ ನಂ.1 ಟೆನಿಸಿಗ ಮ್ಯಾಟ್ಸ್ ವಿಲಾಂಡರ್ ಹೇಳಿದ್ದಾರೆ. ಸರ್ಬಿಯಾದ ದುಸಾನ್ ಲಾಜೋವಿಕ್ ವಿರುದ್ಧ ಫೆಡರರ್ ಮೊದಲ ಸುತ್ತಿನ ಪಂದ್ಯ ಆಡಲಿದ್ದಾರೆ.