ಜೈಪುರ: ಸತತ 2 ಪಂದ್ಯಗಳನ್ನು ಗೆದ್ದಿರುವ ಕೋಲ್ಕತಾ ನೈಟ್‌ರೈಡರ್ ಸದ್ಯ ಈ ಐಪಿಎಲ್‌ನಲ್ಲಿ ಅತ್ಯಂತ ಖುಷಿಯಲ್ಲಿರುವ ತಂಡಗಳಲ್ಲೊಂದು. ಬುಧವಾರ ರಾತ್ರಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಅವರದೇ ಅಂಗಳದಲ್ಲಿ ಮಣಿಸುವ ಮೂಲಕ ಕೆಕೆಆರ್ ಈಗ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದೆ. ತಂಡವೀಗ ಸರಿಯಾದ ದಿಕ್ಕಿನತ್ತ ಸಾಗುತ್ತಿದೆ ಎಂಬುದಾಗಿ ನಾಯಕ ದಿನೇಶ್ ಕಾರ್ತಿಕ್ ಹೇಳಿದ್ದಾರೆ.
“ನಾವೀಗ ಸತತವಾಗಿ 2 ಪಂದ್ಯಗಳನ್ನು ಜಯಿಸಿದ್ದೇವೆ. ಇದೊಂದು ಒಳ್ಳೆಯ ಬೆಳವಣಿಗೆ. ನಾವು ನಿಧಾನವಾಗಿ ಲಯ ಕಂಡುಕೊಳ್ಳುತ್ತಿದ್ದೇವೆ. ಸರಿಯಾದ ದಿಕ್ಕಿನತ್ತ ಸಾಗತೊಡಗಿದ್ದೇವೆ…’ ಎಂದು ದಿನೇಶ್ ಕಾರ್ತಿಕ್ ಹೇಳಿದರು.
ರಾಜಸ್ಥಾನ್ ವಿರುದ್ಧ ಇಲ್ಲಿನ “ಸವಾಯ್ ಮಾನ್‌ಸಿಂಗ್ ಸ್ಟೇಡಿಯಂ’ನಲ್ಲಿ ನಡೆದ ಬುಧವಾರ ರಾತ್ರಿಯ ಮುಖಾಮುಖೀಯಲ್ಲಿ ಕೆಕೆಆರ್ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಮೊದಲು ಬ್ಯಾಟ್ ಮಾಡಿದ ರಹಾನೆ ಪಡೆ 8 ವಿಕೆಟಿಗೆ 160 ರನ್ ಬಾರಿಸಿದರೆ, ಕೆಕೆಆರ್ 18.5 ಓವರ್‌ಗಳಲ್ಲಿ 3 ವಿಕೆಟಿಗೆ 163 ರನ್ ಪೇರಿಸಿ ಗೆದ್ದು ಬಂದಿತು.ಆರಂಭಕಾರ ಕ್ರಿಸ್ ಲಿನ್ ಶೂನ್ಯಕ್ಕೆ ಔಟಾದರೂ ಸುನೀಲ್ ನಾರಾಯಣ್ 35, ರಾಬಿನ್ ಉತ್ತಪ್ಪ 48, ನಿತೀಶ್ ರಾಣಾ ಅಜೇಯ 35 ಮತ್ತು ದಿನೇಶ್ ಕಾರ್ತಿಕ್ ಅಜೇಯ 42 ರನ್ ಮಾಡಿ ತಂಡಕ್ಕೆ ಸುಲಭ ಜಯ ಒದಗಿಸಿದರು. ಬೌಲಿಂಗಿನಲ್ಲೂ ಮಿಂಚಿ 2 ವಿಕೆಟ್ ಕಿತ್ತ ರಾಣಾ ಪಂದ್ಯಶ್ರೇಷ್ಠರಾಗಿ ಮೂಡಿಬಂದರು. ಇದು ರಾಣಾಗೆ ಒಲಿದ ಸತತ 2ನೇ ಪಂದ್ಯಶ್ರೇಷ್ಠ ಗೌರವವಾಗಿದೆ.
“ನಾನು ನೆಟ್ಸ್‌ನಲ್ಲಿ ಸತತವಾಗಿ ಬೌಲಿಂಗ್ ಅಭ್ಯಾಸವನ್ನೂ ನಡೆಸುತ್ತಿರುತ್ತೇನೆ. ನಮ್ಮ ಪಾಲಿಗೆ ಈ ಎರಡೂ ಪಂದ್ಯಗಳು ಅತ್ಯಂತ ಮಹತ್ವದ್ದಾಗಿದ್ದವು. ನಾನಂತೂ ತುಂಬು ಆತ್ಮವಿಶ್ವಾಸದಲ್ಲಿದ್ದೆ. ಅದೃಷ್ಟವಶಾತ್ ಎರಡರಲ್ಲೂ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರನಾದೆ. ನನ್ನ ಪಾಲಿಗೆ ಇದೊಂದು ದೊಡ್ಡ ಅಡಿಪಾಯ…’ ಎಂಬುದಾಗಿ ನಿತೀಶ್ ರಾಣಾ ಹೇಳಿದರು.
ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧ ಎ. 16ರ ಪಂದ್ಯದಲ್ಲಿ ಕೆಕೆಆರ್ ಸಾಧಿಸಿದ 71 ರನ್ ಗೆಲುವಿನಲ್ಲೂ ನಿತೀಶ್ ರಾಣಾ ಪಾತ್ರ ನಿರ್ಣಾಯಕವಾಗಿತ್ತು. 35 ಎಸೆತಗಳಿಂದ 59 ರನ್ (5 ಬೌಂಡರಿ, 4 ಸಿಕ್ಸರ್) ಬಾರಿಸಿ ಪಂದ್ಯಶ್ರೇಷ್ಠರಾಗಿ ಮೂಡಿಬಂದಿದ್ದರು.
ಸ್ಪಿನ್ನರ್‌ಗಳಿಗೆ 14 ಓವರ್!
ಈ ಪಂದ್ಯದಲ್ಲಿ ಕೆಕೆಆರ್ ಸ್ಪಿನ್ ದಾಳಿಗೆ ಹೆಚ್ಚಿನ ಒತ್ತು ನೀಡಿದ್ದು ವಿಶೇಷ. ಸ್ಪಿನ್ನರ್‌ಗಳಿಗೆ ಒಟ್ಟು 14 ಓವರ್‌ಗಳ ಅವಕಾಶ ಕಲ್ಪಿಸಿ ರಾಜಸ್ಥಾನವನ್ನು ನಿಯಂತ್ರಿಸಿತು. ಈ ಕುರಿತು ಪ್ರತಿಕ್ರಿಯಿಸಿದ ದಿನೇಶ್ ಕಾರ್ತಿಕ್, “ರಿಸ್ಟ್ ಸ್ಪಿನ್ನರ್‌ಗಳನ್ನು ಎದುರಿಸುವುದು ಸುಲಭವಲ್ಲ. ಹೀಗಾಗಿ ಇವರನ್ನು ಆರಂಭದಿಂದಲೇ ದಾಳಿಗಿಳಿಸಲಾಯಿತು. ಸುನೀಲ್ ನಾರಾಯಣ್ ದುಬಾರಿಯಾದರೂ ಪೀಯೂಷ್ ಚಾವ್ಲಾ ಮತ್ತು ಕುಲದೀಪ್ ಯಾದವ್ ಉತ್ತಮ ನಿಯಂತ್ರಣ ಸಾಧಿಸಿದರು…’ ಎಂದರು.
15-20 ರನ್ ಕೊರತೆ: ರಹಾನೆ
ಒಟ್ಟಾರೆ ಹೇಳುವುದಾದರೆ ನಾವು 15ರಿಂದ 20 ರನ್ನುಗಳ ಕೊರತೆ ಅನುಭವಿಸಿದೆವು ಎಂಬುದು ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಅಜಿಂಕ್ಯ ರಹಾನೆ ಹೇಳಿಕೆ.
“ಮೊದಲ ಪಂದ್ಯದ ವೇಳೆ ಜೈಪುರ ಟ್ರ್ಯಾಕ್‌ನಲ್ಲಿ ಉತ್ತಮ ಮಟ್ಟದ ಬೌನ್ಸ್ ಇತ್ತು. ಆದರೆ ಇಂದು ಪಿಚ್ ನಿಧಾನ ಗತಿಯಿಂದ ಕೂಡಿತ್ತು. ಚೆಂಡು ಬಹಳ ಕೆಳ ಮಟ್ಟದಿಂದ ಬರುತ್ತಿತ್ತು. ಇದು ದೂರಲ್ಲ. ನಮ್ಮ ಆರಂಭ ಉತ್ತಮವಾಗಿಯೇ ಇತ್ತು. ಕೊನೆಯಲ್ಲಿ 15-20 ರನ್ನುಗಳ ಕೊರತೆ ಎದುರಾಯಿತು…’ ಎಂದು ರಹಾನೆ ಹೇಳಿದರು.