ವಿಜಯಪುರ: ಮಹಾಶಿವರಾತ್ರಿ ಹಬ್ಬದ ದಿನವೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರ ಬಿಡುಗಡೆಯಾಗಿದ್ದು, ಅಭಿಮಾನಿಗಳಲ್ಲಿ ಸಂಭ್ರಮ ದುಪ್ಪಟ್ಟಾಗಿತ್ತು.
ಬೆಳಗ್ಗೆ ಶಿವನಿಗೆ ಹಾಲಿನ ಅಭಿಷೇಕ ಮಾಡಿ ಶಿವರಾತ್ರಿ ಹಬ್ಬ ಮುಗಿಸಿ ವಿಜಯಪುರದ ಗೌರಿಶಂಕರ ಚಿತ್ರಮಂದಿರಕ್ಕೆ ಬಂದ ಡಿ ಬಾಸ್ ಅಭಿಮಾನಿ ಸಮೂಹ ದರ್ಶನ್ ಕಟೌಟ್‌ಗೂ ಹಾಲಿನ ಅಭಿಷೇಕ ಮಾಡಿದರು. ಅಭಿಮಾನಿಗಳ ಫೋಟೋ ಇರುವ ಬ್ಯಾನರ್‌ಗಳು ರಾರಾಜಿಸುತ್ತಿದ್ದವು. ಸಂಭ್ರಮಕ್ಕೆ ಮತ್ತಷ್ಟು ಇಂಬು ನೀಡುವಂತೆ ತಮಟೆ ವಾದ್ಯ, ತಮಟೆ ಸದ್ದಿಗೆ ಅಭಿಮಾನಿಗಳ ಹೆಜ್ಜೆ. ಪಟಾಕಿ ಸಿಡಿತ. ಚಿತ್ರಮಂದಿರದ ಒಳಗೆ ಸಿನಿಮಾದಲ್ಲಿ ದರ್ಶನ್ ಮೊದಲ ಎಂಟ್ರಿಯಾಗಿದ್ದೇ ತಡ, ಡಿ ಬಾಸ್‌ಗೆ ಅಭಿಮಾನಿಗಳು ಜೈಕಾರ, ಸಿಳ್ಳೆ ಹೊಡೆದು ಸಂಭ್ರಮಿಸಿದರು.
ನಾಲ್ಕೂ ಶೋ ಭರ್ತಿ: ಗೌರಿ ಶಂಕರ ಚಿತ್ರ ಮಂದಿರದ ಮಾಲೀಕ ಎಂ.ಸತೀಶ್ ಕುಮಾರ್ ಮಾತನಾಡಿ, ಆನ್‌ಲೈನ್ ಬುಕ್ಕಿಂಗ್ ಮೂಲಕ ಮಾತ್ರವೇ ಟಿಕೆಟ್ ನೀಡುತ್ತಿದ್ದು, ಮೊದಲ ದಿನ ನಾಲ್ಕು ಶೋಗಳು ಭರ್ತಿಯಾಗಿವೆ. ಸಿನಿಮಾದ ಮೊದಲರ್ಧ ಭಾಗ ಸೆಂಟಿಮೆಂಟ್ ಎರಡನೇ ಭಾಗ ಆಕ್ಷನ್‌ನಿಂದ ಕೂಡಿದ್ದು, ಒಂದು ವರ್ಷ ಕಾದ ನಂತರ ದರ್ಶನ್ ಅಭಿಮಾನಿಗಳಿಗೆ ಒಳ್ಳೆಯ ಮನರಂಜನೆ ಸಿಕ್ಕಿದೆ. ಸಿನಿಮಾ ಚೆನ್ನಾಗಿದೆ ಎಂದು ತಿಳಿಸಿದರು.
ದರ್ಶನ್ ಅಭಿಮಾನಿ ಕಿರಣ್ ಮಾತ ನಾಡಿ, ರಾಬರ್ಟ್ ಸಿನಿಮಾ 2020ರಲ್ಲಿ ಬಿಡುಗಡೆಯ ನಿರೀಕ್ಷೆ ಇದ್ದು, ಲಾಕ್‌ಡೌನ್ ಕಾರಣ ತಡವಾಗಿ ಬಿಡುಗಡೆಯಾಗಿದೆ. ಸಿನಿಮಾ ಆರಂಭದಿಂದ ಅಂತ್ಯದವರೆಗೂ ಎಲ್ಲೂ ಬೇಸರವೆನಿಸುವುದಿಲ್ಲ. ಅಭಿಮಾ ನಿಗಳ ನಿರೀಕ್ಷೆಗೆ ತಕ್ಕಂತ ಸಿನಿಮಾ ಎಂದರು.
ಡಿ ಬಾಸ್ ಅಭಿಮಾನಿ ನವೀನ್ ಮಾತನಾಡಿ, ದುಃಖ, ನಗು, ಅಳು ಸಮಿಶ್ರಿತ ಸಿನಿಮಾ ಅಭಿಮಾನಿಗಳನ್ನು ರಂಜಿಸುವಲ್ಲಿ ಯಶಸ್ಸು ಕಂಡಿದೆ. ಚಿತ್ರ 100 ದಿನ ಸಂಭ್ರಮ ಆಚರಿಸುವಲ್ಲಿ ಸಂದೇಹವೇ ಇಲ್ಲ ಎಂದರು.