Advertisement

ರಸ್ತೆ ಬದಿಯ ತಿಂಡಿ ತಟ್ಟೆ ನಾಯಿಗಳೇ ಸ್ವಚ್ಛಗೊಳಿಸುತ್ತವೆ…!

09:31 PM Mar 10, 2020 | Lakshmi GovindaRaj |

ಕುಣಿಗಲ್‌: ಪಟ್ಟಣದ ಫ‌ುಟ್ಬಾತ್‌, ಹೋಟೆಲ್‌, ಡಾಬಾಗಳಲ್ಲಿನ ಅಸುರಕ್ಷಿತ ಆಹಾರ ತಯಾರಿಕೆ, ಆಶುದ್ಧತೆ, ಗ್ರಾಹಕನ ಆರೋಗ್ಯಕ್ಕೆ ಎಷ್ಟು ಸುರಕ್ಷಿತ?. ರಸ್ತೆ, ಚರಂಡಿ ಮೇಲೆ, ಸಾರ್ವಜನಿಕರು ತಿರುಗಾಡುವ ಮಣ್ಣಿನ ರಸ್ತೆ ಪಕ್ಕ ಸೇರಿ ಇತ್ತೀಚಿಗೆ ಪಟ್ಟಣ ಹಾಗೂ ಹೊರ ವಲಯದಲ್ಲಿ ನಾಯಿ ಕೊಡೆಗಳಂತೆ ತಲೆ ಎತ್ತಿರುವ, ತುಳ್ಳುಗಾಡಿ, ತಿಂಡಿ ತಿನಿಸು, ಸಸ್ಯಹಾರಿ, ಮಾಂಸಹಾರಿ ಕ್ಯಾಂಟೀನ್‌,

Advertisement

ಪೆಟ್ಟಿ ಅಂಗಡಿಗಳಲ್ಲಿ ಯಾರ ಭಯವಿಲ್ಲದೆ ರಾಜಾರೋಷವಾಗಿ ಊಟ, ತಿಂಡಿ, ತಿನಿಸು, ಪಾನೀಪುರಿ, ಮಸಾಲೆ, ಗೋಬಿ ಮಂಚೂರಿ ಮಾರಾಟ ಮಾಡಲಾಗುತ್ತಿದೆ. ಅಲ್ಲದೆ ಕೆಲ ಡಾಬಾ ಹಾಗೂ ಹೋಟೆಲ್‌ಗ‌ಳಲ್ಲಿ ಸ್ವಚ್ಛತೆ ಇಲ್ಲ, ಆಹಾರ ಗುಣಮಟ್ಟ ಸಂಪೂರ್ಣ ಕಳೆದುಕೊಂಡಿದೆ. ಡಾಬಾಗಳಲ್ಲಿ ಜನರು ತಿಂದ ತಿಂಡಿಯ ತಟ್ಟೆಗಳನ್ನು ನಾಯಿಗಳೇ ಸ್ವಚ್ಛಗೊಳಿಸುತ್ತಿವೆ.

ಮಾಗಿ ಚಳಿಗಾಲ ಮುಗಿದು ಬಿರು ಬೇಸಿಗೆ ಪ್ರಾರಂಭವಾಗಿದೆ. ವಾತಾವರಣದಲ್ಲಿ ಸೆಕೆ ಆರಂಭವಾಗಿದೆ. ಬೇಸಿಗೆ ಎಂದರೆ ಅದು ಸಾಂಕ್ರಾಮಿಕ ರೋಗ ಹರಡುವ ಸಮಯ. ತಾಲೂಕು ಕೇಂದ್ರ ಕುಣಿಗಲ್‌ನಲ್ಲಿ ತಳ್ಳುವಗಾಡಿಯ ಕ್ಯಾಂಟೀನ್‌, ಫಾಸ್ಟ್‌ಫ‌ುಡ್‌ ಸೆಂಟರ್‌, ಅಶುಚಿತ್ವದಿಂದ ಕೂಡಿದ ಹೋಟೆಲ್‌ಗ‌ಳಿಂದ ಸಾಂಕ್ರಾಮಿಕ ರೋಗದ ಭೀತಿ ಕಾಡುತ್ತಿದೆ.

ನಾಯಿಗಳ ಹಾವಳಿ: ಪಟ್ಟಣದ ಹಲವು ಕಡೆ ರಸ್ತೆ ಬದಿ ಮಾಂಸ, ಚಿಕನ್‌ ಮಾರಾಟದ ಅಂಗಡಿಗಳಿದ್ದು ಸುರಕ್ಷಿತ ರೀತಿಯಲ್ಲಿ ಮಾಂಸ ಮಾರಾಟ ಮಾಡುತ್ತಿಲ್ಲ. ಈ ಮಾಂಸದ ಅಂಗಡಿಗಳು ಕತ್ತರಿಸಿದ ಮಾಂಸ ಚೂರು, ಮೂಳೆಗಳಿಗಾಗಿ ಬೀದಿ ನಾಯಿಗಳ ಹಿಂಡು ಬರುತ್ತವೆ. ಇದರ ರುಚಿ ಅತ್ತಿದ ಬೀದಿ ನಾಯಿಗಳು ಮಕ್ಕಳನ್ನೇ ಅಟ್ಟಿಸಿಕೊಂಡು ಕಚ್ಚಿ ಗಾ.ಯಗೊಳಿಸಿರುವ ನಿದರ್ಶನಗಳು ನಡೆದಿವೆ.

ಪಾದಚಾರಿಗಳ ಸಂಕಟ: ಅನೇಕ ಬೀದಿ ಬದಿಯ ವ್ಯಾಪಾರಿಗಳು ತಳ್ಳುವ ಗಾಡಿಗಳು ರಸ್ತೆಯನ್ನೇ ಅತಿಕ್ರಮಿಸಿಕೊಂಡಿವೆ. ನಗರದ ದೊಡ್ಡ ಅಂಗಡಿ ಬೀದಿಯಲ್ಲಿ ಅತಿಕ್ರಮಣ ಹೆಚ್ಚಾಗಿದೆ. ಇದರಿಂದಾಗಿ ಪಾದಚಾರಿಗಳಿಗೆ, ಸವಾರರಿಗೆ ತೊಂದರೆಯಾಗಿದೆ. ಕಳೆದ ತಿಂಗಳಲ್ಲಿ ಪೊಲೀಸರು, ಪುರಸಭೆ ಅಧಿಕಾರಿಗಳು ಎತ್ತಂಗಡಿ ಮಾಡಿಸಿದ್ದರು. ಆದರೆ, ಮತ್ತೆ ರಸ್ತೆ ಅತಿಕ್ರಮಣ ಎಂದಿನಂತೆ ನಡೆಯುತ್ತಿದೆ.

Advertisement

ಆರೋಗ್ಯ ಇಲಾಖೆ ನಿರ್ಲಕ್ಷ್ಯ: ತಾಲೂಕು ಆರೋಗ್ಯ ಕೇಂದ್ರ ಕಚೇರಿ ಸಮೀಪದಲ್ಲೇ ಇಷ್ಟೇ ಅವ್ಯವಸ್ಥೆಯಿಂದ ಕೂಡಿದರೂ ಆರೋಗ್ಯ ಇಲಾಖೆ ಈವರೆಗೂ ಯಾರಿಗೂ ನೋಟಿಸ್‌ ನೀಡದೇ ಕ್ರಮ ಕೈಗೊಳ್ಳದಿರುವುದು ಕಾಣುತ್ತಿದೆ. ಜನರ ಆರೋಗ್ಯ ಹಾಗೂ ಪ್ರಾಣ ಹಾನಿಯಾದರೆ ಇದರ ಹೊಣೆ ಯಾರು ಹೊರುತ್ತಾರೆ?. ಘಟನೆ ಆಗುವ ಮುನ್ನ ಸಂಬಂಧ ಪಟ್ಟ ಇಲಾಖೆಗಳು ಎಚ್ಚರ ವಹಿಸಬೇಕಾಗಿದೆ.

ಅಪಾಯಕಾರಿ ಅಜಿನೋಮೋಟೋ ವಸ್ತು ಬಳಕೆ: ತಿಂಡಿ, ತಿನಿಸು ತಯಾರಿಕೆಗೆ ಉತ್ತಮ ಪದಾರ್ಥಗಳ ಬಳಕೆ ಗುಣಮಟ್ಟದ ಎಣ್ಣೆ, ಗ್ರಾಹಕರಿಗೆ ಕುಡಿಯಲು ಶುದ್ಧನೀರು ಒದಗಿಸುವ ಗೋಜಿಗೆ ಹೋಗುತ್ತಿಲ್ಲ, ಅನೇಕ ನೈಟ್‌ ಕ್ಯಾಟೀನ್‌ಗಳು( ಹೆಸರಿಗೆ ನೈಟ್‌ ಕ್ಯಾಂಟೀನ್‌ಗಳು ಆದರೆ ಇವುಗಳು ಮಧ್ಯಾಹ್ನವೇ ಕಾರ್ಯಾರಂಭ ಮಾಡುತ್ತವೆ) ಗ್ರಾಹಕರಿಗೆ ಗುಣಮಟ್ಟದ ದಿನಸಿ, ಎಣ್ಣೆ ಬಳಸದೇ ರುಚಿಗೆ ಅಜಿನೋಮೋಟೋ ಎಂಬ ರುಚಿಕಾರಕ ವಸ್ತುಗಳನ್ನು ಹಾಕುತ್ತವೆ. ಆದರೆ ಇದು ಆರೋಗ್ಯಕ್ಕೆ ಅಪಾಯಕರ. ಗೋಬಿ ಮಂಚೂರಿ ತಯಾರಿಕೆಯಲ್ಲಿ ಅದಕ್ಕೆ ರುಚಿ ನೀಡುವುದೇ ಅಜಿನೋಮೋಟೋ. ಇದನ್ನು ಕೆಲವು ಫಾಸ್ಟ್‌ ಫ‌ುಡ್‌ ಸೆಂಟರ್‌ಗಳು ಪಲಾವ್‌ಗಳಿಗೂ ಹಾಕುತ್ತಿವೆ.

ಜಿರಲೆ, ಹಲ್ಲಿ ಬಿದ್ದ ಸಂಪ್‌ ನೀರು ಬಳಕೆ: ನಗರದ ಅನೇಕ ಹೋಟೆಲ್‌, ಕ್ಯಾಂಟೀನ್‌ಗಳಲ್ಲಿ ಶುದ್ಧ ನೀರು ಅಲಭ್ಯ. ನಲ್ಲಿಯಲ್ಲಿ ಬಂದ ನೀರನ್ನೇ ಗ್ರಾಹಕರಿಗೆ ನೀಡಲಾಗುತ್ತದೆ. ನಲ್ಲಿಯಿಂದ ನೀರು ತರುವ ಪ್ಲಾಸ್ಟಿಕ್‌ ಬಿಂದಿಗೆಗಳು ಪಾಚಿ ಕಟ್ಟಿವೆ. ಆ ನೀರನ್ನೇ ಗ್ರಾಹಕರಿಗೆ ನೀಡಲಾಗುತ್ತದೆ. ಕೆಲವು ಹೋಟೆಲ್‌ಗ‌ಳಲ್ಲಿ ಬೋರ್‌ವೆಲ್‌ ಇದ್ದು ನೀರನ್ನು ಸಂಪ್‌ನಲ್ಲಿ ಶೇಖರಿಸಲಾಗಿರುತ್ತದೆ. ಸಂಪನ್ನು ತಿಂಗಳಾನುಗಟ್ಟಲೇ ಸ್ವಚ್ಛಗೊಳಿಸಿರುವುದಿಲ್ಲ, ಅದರಲ್ಲಿ ಜಿರಲೆ, ನೋಣ, ಸೊಳ್ಳೆ, ಹಲ್ಲಿ, ಬಿದ್ದಿರುತ್ತವೆ. ಅದೇ ನೀರನ್ನು ಬಳಸಲಾಗುತ್ತದೆ. ಇನ್ನು ದೊಡ್ಡ ಪಾತ್ರೆಯಲ್ಲಿ ನೀರನ್ನು ತುಂಬಿ ಅದರೊಳಗೆ ತಟ್ಟೆ ಲೋಟ ಮುಳುಗಿಸಿ ಮತ್ತೆ ಬಳಸುವುದೇ ಹೋಟೆಲ್‌, ಡಾಬಾ ಕ್ಯಾಂಟೀನ್‌ಗಳಲ್ಲಿ ಗ್ರಾಹಕ ತಿಂದು- ಕುಡಿದ ತಟ್ಟೆ ಲೋಟ ಸ್ವಚ್ಛಗೊಳಿಸುವ ವಿಧಾನವಾಗಿದೆ.

ಫ‌ುಟ್ಬಾತ್‌ ವ್ಯಾಪಾರಿಗಳು ಪುರಸಭೆಯಿಂದ ಪರವಾನಗಿ ಪಡೆದಿಲ್ಲ. ಬೀದಿ ಬದಿ ತಿಂಡಿ ತಿನಿಸುಗಳ ಮಾರಾಟದಿಂದ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಆರೋಗ್ಯ ಇಲಾಖೆ, ಪುರಸಭೆ ಒಟ್ಟುಗೊಡಿ ವ್ಯಾಪಾರಿಗಳ ಸಭೆ ಕರೆದು ಅರಿವು ಮೂಡಿಸಲಾಗುವುದು.
-ಚಂದ್ರಶೇಖರ್‌, ಪರಿಸರ ಎಂಜಿನಿಯರ್‌

ನಾನು ಹೊರಗಡೆ ಇದ್ದೇನೆ. ರಸ್ತೆ ಬದಿ, ಹೋಟೆಲ್‌, ಡಾಬ ತಿಂಡಿ, ಊಟ ಎಷ್ಟು ಸುರಕ್ಷಿತ ಎಂಬುದರ ಕುರಿತು ಬುಧವಾರ ಪ್ರತಿಕ್ರಿಯೆ ನೀಡುತ್ತೇನೆ.
-ಡಾ.ಜಗದೀಶ್‌, ತಾಲೂಕು ಆರೋಗ್ಯಾಧಿಕಾರಿ

* ಕೆ.ಎನ್‌.ಲೋಕೇಶ್‌

Advertisement

Udayavani is now on Telegram. Click here to join our channel and stay updated with the latest news.

Next