Advertisement
ಬಜಪೆ ಹಳೆ ವಿಮಾನ ನಿಲ್ದಾಣ ಪ್ರದೇಶ ಈಗ ಕೇವಲ ಗತವೈಭವವನ್ನು ನೆನಪಿಸಲು ಮಾತ್ರ ಎಂಬಂತಾಗಿದೆ. ಕಾರಣ ಸೂಕ್ತ ನಿರ್ವಹಣೆಯಿಲ್ಲದೆ ಈ ಪ್ರದೇಶ ಸೊರಗುತ್ತಿದೆ. ರಾಷ್ಟ್ರಪತಿಗಳು, ರಾಜ್ಯಪಾಲರು, ಪ್ರಧಾನಮಂತ್ರಿ, ಮುಖ್ಯಮಂತ್ರಿಗಳು, ಕೇಂದ್ರ ಹಾಗೂ ರಾಜ್ಯ ಸಚಿವರು, ವಿದೇಶಿಯರು ದಿನನಿತ್ಯವೆಂಬಂತೆ ಬಂದುಹೋಗುತ್ತಿದ್ದ ಇಲ್ಲಿ ಈಗ ಏನೂ ಇಲ್ಲ. ರಸ್ತೆ ದುರಸ್ತಿ ಕಾಣದೆ ಹಲವು ವರ್ಷಗಳೇ ಕಳೆದಿವೆ.
ಹಳೆ ವಿಮಾನ ನಿಲ್ದಾಣದ ರಸ್ತೆಯ ಆಗಮನ, ನಿರ್ಗಮನ ರಸ್ತೆಯಲ್ಲಿ ಈಗ ದೊಡ್ಡದೊಡ್ಡ ಹೊಂಡಗಳು ಕಾಣಿಸಿಕೊಂಡಿವೆ. ಕೆಂಜಾರಿನಲ್ಲಿ ಹೊಸ ವಿಮಾನ ನಿಲ್ದಾಣ ಆರಂಭಗೊಂಡ ಬಳಿಕ ಇಲ್ಲಿನ ರಸ್ತೆಯನ್ನು ಸಂಪೂರ್ಣ ನಿಲರ್ಕ್ಷಿಸಲಾಗಿದೆ. ಯಾವುದೇ ಡಾಮರೀಕರಣವಾಗಲಿ, ತೇಪೆ ಕಾರ್ಯವಾಗಲಿ ನಡೆದಿಲ್ಲ. ಇದರಿಂದಾಗಿ ರಸ್ತೆಯಲ್ಲಿ ದೊಡ್ಡದೊಡ್ಡ ಹೊಂಡಗಳು ಬಿದ್ದಿವೆ. ಮಳೆ ಬಂದಾಗ ಇದರಲ್ಲಿ ನೀರು ನಿಂತು ಹೊಂಡಗಳ ಬಗ್ಗೆ ಅರಿವಿಲ್ಲದೆ ಬರುವ ವಾಹನಗಳು ಅಪಘಾತಕ್ಕೀಡಾದ ಘಟನೆಗಳು ಸಂಭವಿಸಿವೆ. ಯಾವ ಇಲಾಖೆಗೆ ?
ಹಳೆ ವಿಮಾನ ನಿಲ್ದಾಣದ ಆಗಮನ ಹಾಗೂ ನಿರ್ಗಮನ ರಸ್ತೆಯು ಸುಮಾರು 600 ಮೀಟರ್ ಯಾವ ಇಲಾಖೆಗೆ ಸೇರಿದೆ ಎನ್ನುವುದನ್ನು ಯಾರೂ ಹೇಳುತ್ತಿಲ್ಲ. ಇದರಿಂದ ಇಲ್ಲಿ ರಸ್ತೆ ಕಾಮಗಾರಿ ನಡೆದೇ ಇಲ್ಲ. ಇಲ್ಲಿನ ಆಗಮನ ರಸ್ತೆಯಿಂದ ಬಜಪೆಯ ರಸ್ತೆಗೆ ತೇಪೆ ಕಾರ್ಯ ಕೆಲಕಾಲದ ಹಿಂದೆ ನಡೆದಿತ್ತು. ನಿರ್ಗಮನ ರಸ್ತೆಯಿಂದ ಉಣಿಲೆಗೆ ಹೋಗುವ ರಸ್ತೆಯ ತೇಪೆ ಕಾರ್ಯಗಳು ನಡೆದಿದೆ. ಆದರೆ ವಿಮಾನ ನಿಲ್ದಾಣ ರಸ್ತೆ ಕಾಮಗಾರಿಯನ್ನು ಮಾತ್ರ ಯಾರೂ ನಡೆಸಿಯೇ ಇಲ್ಲ.
Related Articles
ಬಜಪೆಯಿಂದ ಮುರನಗರಕ್ಕೆ ಹಳೆ ವಿಮಾನ ನಿಲ್ದಾಣವಾಗಿ ಉಣಿಲೆ, ಅದ್ಯಪಾಡಿಗೆ ಹೋಗುವ ರಸ್ತೆ ಗ್ರಾಮೀಣ ಪ್ರದೇಶವನ್ನು ಸಂಪರ್ಕಿಸುವ ರಸ್ತೆಯಾಗಿದೆ. ಇದು ಈ ಭಾಗದ ಕೃಷಿಕರು, ಶಾಲೆ, ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು, ನಿತ್ಯ ಕಚೇರಿ, ಕೂಲಿ ಕೆಲಸಕ್ಕೆ ತೆರಳುವ ಕಾರ್ಮಿಕರಿಗೆ ಹೋಗಿ ಬರಲು ಇರುವಂಥ ಮುಖ್ಯ ರಸ್ತೆಯಾಗಿದೆ. ಈಗ ಈ ರಸ್ತೆ ದುರಸ್ತಿಯಾಗದೆ ನಿತ್ಯ ಪ್ರಯಾಣಿಸುವ ಪ್ರಯಾಣಿಕರು ಇಲ್ಲಿ ಪರದಾಡಿಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
Advertisement
ಈ ರಸ್ತೆ ಯಾರದ್ದು ?ತಾಲೂಕು ಪಂಚಾಯತ್‌ನ ಕಳೆದ 6 ಸಾಮಾನ್ಯ ಸಭೆಯಲ್ಲಿ ಈ ರಸ್ತೆ ಯಾವ ಇಲಾಖೆಗೆ ಸೇರಿದೆ ಎಂಬ ಬಗ್ಗೆ ಕೇಳಿದ್ದೆ. ಗ್ರಾಮ ಪಂಚಾಯತ್, ಜಿಲ್ಲಾ ಪಂಚಾಯತ್, ಲೋಕೋಪಯೋಗಿ ಇಲಾಖೆ, ನಮ್ಮ ಗ್ರಾಮ ನಮ್ಮ ರಸ್ತೆ, ವಿಮಾನ ನಿಲ್ದಾಣ ಪ್ರಾಧಿಕಾರ ಸಹಿತ ಎಲ್ಲರೂ ಈ ರಸ್ತೆ ನಮ್ಮದಲ್ಲ ಎನ್ನುತ್ತಿದ್ದಾರೆ. ಹಾಗಾದರೆ ಈ ರಸ್ತೆ ಯಾರಿಗೆ ಸೇರಿದ್ದು? ಗುಂಡಿ ಬಿದ್ದಿರುವ ರಸ್ತೆ ದುರಸ್ತಿ ಕಾಮಗಾರಿ ಯಾರು ನಡೆಸಬೇಕು ಎನ್ನುವುದು ಇಲ್ಲಿ ಯಕ್ಷ ಪ್ರಶ್ನೆಯಾಗಿದೆ. ದ್ವಿಚಕ್ರ ವಾಹನದಲ್ಲಿ ಸಂಚರಿಸುವ ಹಲವು ಮಂದಿ ಈಗಾಗಲೇ ಹೊಂಡಗುಂಡಿಗಳನ್ನು ತಪ್ಪಿಸಲು ಹೋಗಿ ಬಿದ್ದು ಗಾಯಗೊಂಡಿದ್ದಾರೆ. ಹೀಗಾಗಿ ಕೂಡಲೇ ಈ ಭಾಗದ ಜನರ ಸಮಸ್ಯೆ ಅರಿತು ಈ ರಸ್ತೆ ಕಾಮಗಾರಿ ನಡೆಯಲೇಬೇಕಿದೆ.
– ವಿಶ್ವನಾಥ ಶೆಟ್ಟಿ,
ಸದಸ್ಯ, ತಾಲೂಕು ಪಂಚಾಯತ್ ಕ್ಷೇತ್ರ ಕೊಳಂಬೆ ಸುಬ್ರಾಯ ನಾಯಕ್ ಎಕ್ಕಾರು