Advertisement

ರಸ್ತೆಗಳ ವಿಸ್ತರಣೆಗೂ ಸಮಗ್ರ ಸಾರಿಗೆಯಲ್ಲಿ ಅವಕಾಶ

12:35 AM Dec 12, 2019 | Lakshmi GovindaRaj |

ಬೆಂಗಳೂರು: ನಗರದ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಗೆ ಸಮೂಹ ಸಾರಿಗೆ ವ್ಯವಸ್ಥೆ ಸಾಮರ್ಥ್ಯ ಹೆಚ್ಚಿಸುವುದರ ಜತೆಗೆ ಹಲವು ರಸ್ತೆಗಳ ವಿಸ್ತರಣೆ, ಫ್ಲೈಓವರ್‌ಗಳ ಅಭಿವೃದ್ಧಿಗೂ ಸಮಗ್ರ ಸಂಚಾರ ಯೋಜನೆಯಲ್ಲಿ ಶಿಫಾರಸು ಮಾಡಲಾಗಿದೆ.

Advertisement

ಒಟ್ಟಾರೆ 2.30 ಲಕ್ಷ ಕೋಟಿ ರೂ. ವೆಚ್ಚದಲ್ಲಿ ಮೂರು ಹಂತಗಳಲ್ಲಿ ವಿವಿಧ ಯೋಜನೆ ಕೈಗೆತ್ತಿಕೊಳ್ಳಲು ಕರಡಿನಲ್ಲಿ ಸೂಚಿಸಿದ್ದು, ಅದರಲ್ಲಿ ಬೆಂಗಳೂರಿನ ಹೊರ ಭಾಗದಲ್ಲಿ ಒಟ್ಟು 92 ಕಿ.ಮೀ. ಎಲಿವೇಟೆಡ್‌ ಕಾರಿಡಾರ್‌ ಆಗಿ ಅಬಿವೃದ್ಧಿ ಪಡಿಸಲು, ನೈಸ್‌ ರೋಡ್‌ಗೆ ಸಂಪರ್ಕ ಕಲ್ಪಿಸುವಂತೆ 78 ಕಿ.ಮೀ. ಉದ್ದ ಮತ್ತು 80 ಅಡಿ ಅಗಲದ ಪೆರಿಫೆರಲ್‌ ರಿಂಗ್‌ ರೋಡ್‌ ಸೇರಿದಂತೆ ಒಟ್ಟಾರೆ 170 ಕಿ.ಮೀ. ಉದ್ದದ ರಸ್ತೆ ಅಭಿವೃದ್ಧಿ ಪಡಿಸಬೇಕಿದೆ ಎಂದು ಶಿಫಾರಸು ಮಾಡಲಾಗಿದೆ.

ಇದಲ್ಲದೆ, 8ಹೊಸ ಕಾರಿಡಾರ್‌ ಅಭಿವೃದ್ಧಿ ಯೋಜನೆ, 50 ಜಂಕ್ಷನ್‌ ಅಭಿವೃದ್ಧಿ, 154 ಸ್ಕೈ ವಾಕ್‌ಗಳು, ಹೆಬ್ಟಾಳ, ಟಿನ್‌ ಫ್ಯಾಕ್ಟರಿ ಮತ್ತು ಬೆನ್ನಿಗಾನಹಳ್ಳಿ ಸಂಚಾರಿ ಸಮಸ್ಯೆ ನಿಭಾಯಿಸಲು ಎರಡು ಹೆಚ್ಚುವರಿ ಫ್ಲೈ ಓವರ್‌, ಟಿಡಿಆರ್‌ (ಟ್ರಾನ್‌ಸ್‌ಫರೇಬಲ್‌ ಡೆವಲಪ್‍ಮೆಂಟ್‌ ರೈಟ್ಸ್‌ ) ಹಕ್ಕು ನೀಡಿ 192 ಕಿ.ಮೀ. ಮುಖ್ಯ ರಸ್ತೆ ಅಗಲೀಕರಣ ಮತ್ತು ಹಾಲಿ ಚಾಲ್ತಿಯಲ್ಲಿರುವ ಪಾರ್ಕಿಂಗ್‌ ಸ್ಥಳಗಳ ಜತೆಗೆ 50 ಹೆಚ್ಚುವರಿ ಪಾರ್ಕಿಂಗ್‌ ಸ್ಥಳಗಳು ಮತ್ತು ಹೊಸ ಪಾರ್ಕಿಂಗ್‌ ನೀತಿಯನ್ನು ರಚಿಸುವುದು ಸೇರಿದಂತೆ ಎಂಟು ಮಹತ್ವದ ಅಂಶಗಳನ್ನು ಉಲ್ಲೇಖೀಸಲಾಗಿದೆ.

ನಗರದಲ್ಲಿ ಹೆಚ್ಚುತ್ತಿರುವ ಟ್ರಾಫಿಕ್‌ ಸಮಸ್ಯೆ ನಡುವೆ ಸುಗಮ ಸಂಚಾರಕ್ಕಾಗಿ ರಾಜ್ಯ ಸರ್ಕಾರ 1294 ಚದುರ ಕಿ.ಮೀ ವಿಸ್ತೀರ್ಣದ ಬೆಂಗಳೂರಿನ ಸಂಚಾರ ಸಮಸ್ಯೆಗೆ ಮುಕ್ತಿ ನೀಡಲು ಸರ್ಕಾರ ಉದ್ದೇಶಿಸಿದ್ದು, ಹಲವು ಮಹತ್ವದ ಯೋಜನೆಗಳನ್ನು ಒಳಗೊಂಡ ವರದಿ ಸಿದ್ದಪಡಿಸಿದೆ. ಬಿಎಂಆರ್‌ಸಿಎಲ್‌ ಮೂಲಕ ಸಿದ್ಧಪಡಿಸಲಾಗಿರುವ ವರದಿ ಬಗ್ಗೆ ಪರಿಸರವಾದಿ ಮತ್ತು ಇತರೆ ಸಂಘಟನೆಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.

ರಾಜ್ಯದ ಒಟ್ಟು ಜಿಡಿಪಿಯಲ್ಲಿ ಶೇ.36 ಪಾಲನ್ನು ನೀಡುತ್ತಿರುವ ಬೆಂಗಳೂರಿಗೆ ಮೂಲಭೂತ ಸೌಕರ್ಯಗಳಲ್ಲಿ ಒಂದಾದ ಸಂಚಾರ ವ್ಯವಸ್ಥೆ ಸುಗಮಗೊಳಿಸುವುದು ಸರ್ಕಾರದ ಜವಾಬ್ದಾರಿಯಾಗಿದ್ದು, ಅದರಂತೆ ಈ ವರದಿಯನ್ನು ಸಿದ್ಧಪಡಿಸಲಾಗಿದೆ ಎಂದು ವರದಿ ತಿಳಿಸಿದೆ.

Advertisement

ವೈಜ್ಞಾನಿಕ ವರದಿ ಅತ್ಯಗತ್ಯ: ಬಿಎಂಆರ್‌ಸಿಎಲ್‌ ಖುದ್ದು ತನ್ನ ಎರಡನೇ ಹಂತದ ಮೆಟ್ರೋ ಕಾಮಗಾರಿಯನ್ನು ಮಂದಗತಿಯಲ್ಲಿ ಮಾಡುತ್ತಿದೆ. ತನ್ನ ಕೆಲಸವನ್ನೇ ಸರಿಯಾಗಿ ನಿಭಾಯಿಸಲು ವಿಫಲವಾಗಿರುವ ಬಿಎಂಆರ್‌ಸಿಎಲ್‌ ಸಮಗ್ರ ಸಂಚಾರ ಯೋಜನೆ ಸಿದ್ದಪಡಿಸಿರುವುದು ಖಂಡನೀಯ. ಕೂಡಲೆ ರಾಜ್ಯ ಸರ್ಕಾರ ಬಿಎಂಆರ್‌ಸಿಎಲ್‌ ಸಲ್ಲಿಸಿರುವ ವರದಿಯನ್ನು ಸರ್ಕಾರ ವಜಾಗೊಳಿಸಿ, ನಗರ ಸಂಚಾರ ಪ್ರಾಧಿಕಾರವನ್ನು ರಚನೆ ಮಾಡಿ, ವೈಜ್ಞಾನಿಕವಾಗಿ ವರದಿಯನ್ನು ಸಿದ್ಧಪಡಿಸಬೇಕು ಎಂದು ಸಂಘಟನೆಗಳು ಒತ್ತಾಯಿಸುತ್ತಿವೆ.

ಸಿಎಂಪಿಬಿ (ಕಾಂಪ್ರಹೆನ್ಸಿವ್‌ ಮೊಬಿಲಿಟಿ ಪ್ಲಾನ್‌ ಫಾರ್‌ ಬೆಂಗಳೂರು) ವರದಿಯನ್ನು ಬೆಂಗಳೂರಿನ ಟ್ರಾಫಿಕ್‌ ಮತ್ತು ಮಾಲಿನ್ಯ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಸಿದ್ದಪಡಿಸಲಾಗಿದೆ. ಮೆಟ್ರೋ, ಬಿಎಂಟಿಸಿ, ಸಬ್‌ಅರ್ಬನ್‌ ರೈಲು ಸಂಪರ್ಕದ ಲೈನ್‌ಗಳಿಗೆ ಅನುಕೂಲವಾಗುವಂತೆ ಯೋಜನೆ ಸಿದ್ಧಪಡಿಸಲಾಗಿದ್ದು, 2031ಕ್ಕೆ ಬೆಂಗಳೂರನ್ನು ಸಂಪೂರ್ಣವಾಗಿ ಟ್ರಾಫಿಕ್‌ ಮುಕ್ತ ನಗರವನ್ನಾಗಿಸಲಾಗುವುದು.
-ಅಜಯ್‌ ಸೇಠ್ ವ್ಯವಸ್ಥಾಪಕ ನಿರ್ದೇಶಕ ಬಿಎಂಆರ್‌ಸಿಎಲ್‌

Advertisement

Udayavani is now on Telegram. Click here to join our channel and stay updated with the latest news.

Next