Advertisement

ನೀರಿನ ಪೈಪ್‌ಲೈನ್‌ ಪರಿಧಿಯಲ್ಲಿ ರಸ್ತೆ ಕಾಮಗಾರಿಯೇ ಸವಾಲು!

08:43 PM Feb 17, 2022 | Team Udayavani |

ಪಂಪ್‌ವೆಲ್‌: ಪಡೀಲ್‌ನಿಂದ ಪಂಪ್‌ವೆಲ್‌-ಕಂಕನಾಡಿವರೆಗೆ ರಸ್ತೆ ವಿಸ್ತರಣೆ ಹಾಗೂ ಕಾಂಕ್ರೀಟ್‌ ಕಾಮಗಾರಿಗೆ ಸಿದ್ಧತೆ ನಡೆಯುತ್ತಿದ್ದರೆ, ಈ ರಸ್ತೆಯ ಅಡಿ ಭಾಗದಲ್ಲಿರುವ ಮಂಗಳೂರಿಗೆ ನೀರು ಒದಗಿಸುವ ಬಹು ಮಹತ್ವದ ಕುಡಿಯುವ ನೀರಿನ ಪೈಪ್‌ಲೈನ್‌ನ ಸವಾಲು ಎದುರಾಗಿದೆ!

Advertisement

ತುಂಬೆ ಡ್ಯಾಂನಿಂದ ಬೆಂದೂರ್‌ ಪಂಪ್‌ಹೌಸ್‌ಗೆ ಕುಡಿಯುವ ನೀರಿನ ಸಂಪರ್ಕಕ್ಕಾಗಿ ನೀರಿನ ಪೈಪ್‌ಲೈನ್‌ ಹಲವು ವರ್ಷಗಳ ಹಿಂದೆ ಅಳವಡಿಸಲಾಗಿದೆ. ಅದರಲ್ಲಿಯೂ ಪಡೀಲ್‌ನಿಂದ ಪಂಪ್‌ವೆಲ್‌ ಹಾಗೂ ಅಲ್ಲಿಂದ ಕಂಕನಾಡಿವರೆಗೆ ಮುಖ್ಯ ರಸ್ತೆಯ ಕೆಳಭಾಗದಲ್ಲಿಯೇ ಪೈಪ್‌ಲೈನ್‌ ಇದೆ. ಹೀಗಾಗಿ ಕಾಮಗಾರಿ ನಡೆಸುವ ಸಂದರ್ಭ ಬಹು ಎಚ್ಚರಿಕೆ ವಹಿಸಬೇಕಾದ ಅನಿವಾರ್ಯ ಎದುರಾಗಿದೆ.

ಮಂಗಳೂರಿನ ಸುಮಾರು ಶೇ.30ರಷ್ಟು ಪ್ರದೇಶಗಳಿಗೆ ಬೆಂದೂರ್‌ ಪಂಪ್‌ಹೌಸ್‌ನಿಂದ ನೀರು ಸರಬರಾಜು ಆಗುತ್ತದೆ. ಹೀಗಾಗಿ ಇಲ್ಲಿಗೆ ತುಂಬೆಯಿಂದ ಸಂಪರ್ಕಿಸುವ ಮುಖ್ಯ ಪೈಪ್‌ಲೈನ್‌ಗೆ ಯಾವುದೇ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕಾದ ಸವಾಲು ಎದುರಾಗಿದೆ. ಹಾಲಿ ರಸ್ತೆಯ ಸುಮಾರು 5 ಅಡಿ ಆಳದಲ್ಲಿ ನೀರಿನ ಪೈಪ್‌ಲೈನ್‌ ಇದೆ ಎಂದು ಪಾಲಿಕೆ ಮೂಲಗಳು ತಿಳಿಸಿದೆಯಾದರೂ ತುಂಬೆಯಿಂದ ಬಹುಭಾಗದವರೆಗೆ ರಸ್ತೆಯ ಮೇಲ್ಮಟ್ಟದಲ್ಲಿಯೇ ಪೈಪ್‌ಲೈನ್‌ ಇದೆ. ಜತೆಗೆ ಕೆಲವು ಕಾರಣದಿಂದ ಇಲ್ಲಿನ ಪೈಪ್‌ಲೈನ್‌ಗೆ ಆಗೊಮ್ಮೆ ಈಗೊಮ್ಮೆ ಹಾನಿಯಾಗಿ ನೀರು ಸರಬರಾಜು ಕೂಡ ವ್ಯತ್ಯಯವಾಗಿತ್ತು.

ಡ್ಯಾಮೇಜ್‌ ಆದರೆ ಕಾಂಕ್ರೀಟ್‌ ಕಟ್‌! :

ನೀರಿನ ಪೈಪ್‌ಲೈನ್‌ ರಸ್ತೆಯ ಅಡಿಯಲ್ಲಿ ಇರುವ ನೆಪದಿಂದ ಪಂಪ್‌ವೆಲ್‌-ಕಂಕನಾಡಿ ರಸ್ತೆ ಕೂಡ ಕಾಂಕ್ರೀಟ್‌ಗೆ ಬದಲಾಗಿರಲಿಲ್ಲ. ಒಂದು ವೇಳೆ ಕಾಂಕ್ರೀಟ್‌ ಆದ ಬಳಿಕ ಪೈಪ್‌ಲೈನ್‌ನಲ್ಲಿ ಸಮಸ್ಯೆ ಆದರೆ ಕಾಂಕ್ರೀಟ್‌ ಕಟ್‌ ಮಾಡಬೇಕಾದ ಪರಿಸ್ಥಿತಿ ಎದುರಾಗುವ ಅಪಾಯವಿತ್ತು. ಈ ಮಧ್ಯೆ ಇದೀಗ ಹೊಸ ಯೋಜನೆಯಂತೆ ಪಡೀಲ್‌ನಿಂದಲೇ ಕಂಕನಾಡಿವರೆಗೆ ಕಾಂಕ್ರೀಟ್‌ ನಡೆಸುವುದರಿಂದ ಪೈಪ್‌ಲೈನ್‌ಗೆ ಹಾನಿಯಾದರೆ ಏನು ಕ್ರಮ ಎಂಬ ಬಗ್ಗೆ ಸ್ಪಷ್ಟ ತೀರ್ಮಾನ ಆಗಿಲ್ಲ!

Advertisement

ಹೊಸ ರಸ್ತೆಯ ಬದಿಯಲ್ಲಿ  ಹೊಸ ಪೈಪ್‌ಲೈನ್‌! :

ಪಡೀಲ್‌-ಪಂಪ್‌ವೆಲ್‌-ಕಂಕನಾಡಿ ವ್ಯಾಪ್ತಿಯ ಕಾಂಕ್ರೀಟ್‌ ಕೆಲಸ ನಡೆಸುವ ವೇಳೆ ರಸ್ತೆ ಹಾಗೂ ಫುಟ್‌ಪಾತ್‌ ಮಧ್ಯೆ ಯುಟಿಲಿಟಿ ಡಕ್ಟ್ಗಾಗಿ ಸ್ಥಳ ಮೀಸಲಿಡಲಾಗುತ್ತದೆ. ಇಲ್ಲಿ ಹೊಸ ನೀರಿನ ಪೈಪ್‌ಲೈನ್‌ ಮಾಡಲು ಅನುಕೂಲವಾಗುವಂತೆ ಅವಕಾಶ ಕಲ್ಪಿಸಲಾಗುತ್ತದೆ. ಅಗತ್ಯವಿದ್ದರೆ ಹೊಸ ಪೈಪ್‌ಲೈನ್‌ ಅನ್ನು ಈ ಭಾಗದಲ್ಲಿಯೇ ಮಾಡಲಾಗುತ್ತದೆ. ಜತೆಗೆ ಹಾಲಿ ರಸ್ತೆಯ ಕಾಮಗಾರಿ ನಡೆಸುವ ವೇಳೆ ನೀರಿನ ಪೈಪ್‌ಲೈನ್‌ಗೆ ಯಾವುದೇ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತದೆ. 4 ಲೇನ್‌ನ ಕಾಂಕ್ರೀಟ್‌ ವೇ, ರಸ್ತೆಯ ಇಕ್ಕೆಲಗಳಲ್ಲಿ 3 ಮೀ. ಅಗಲದ ಇಂಟರ್‌ಲಾಕ್‌, ಮಳೆ ನೀರು ಹರಿದು ಹೋಗಲು ಚರಂಡಿ, ಯುಟಿಲಿಟಿ ಡಕ್ಟ್, ಪಾದಚಾರಿ ಮಾರ್ಗ, ರಸ್ತೆಯ ಮಧ್ಯದಲ್ಲಿ ಮೀಡಿಯನ್‌ (ವಿಭಜಕ) ಮತ್ತು ಅದರಲ್ಲಿ ದಾರಿದೀಪ ಕಂಬಗಳ ಅಳವಡಿಕೆ ಮಾಡಲಾಗುವುದು ಎಂದು ಮೇಯರ್‌ ಪ್ರೇಮಾನಂದ ಶೆಟ್ಟಿ “ಉದಯವಾಣಿ-ಸುದಿನ’ಕ್ಕೆ ತಿಳಿಸಿದ್ದಾರೆ.

ಮುನ್ನೆಚ್ಚರಿಕೆಗೆ ಆದ್ಯತೆ :

ಪಡೀಲ್‌ನಿಂದ ಪಂಪ್‌ವೆಲ್‌ ರಸ್ತೆ ಅಭಿವೃದ್ಧಿ ಸಂದರ್ಭ ಕುಡಿಯುವ ನೀರಿನ ಪೈಪ್‌ಲೈನ್‌ಗೆ ಯಾವುದೇ ರೀತಿಯ ಸಮಸ್ಯೆ ಆಗದಂತೆ ಹೆಚ್ಚು ಮುನ್ನೆಚ್ಚರಿಕೆ ವಹಿಸಲಾಗುತ್ತದೆ. ಜತೆಗೆ ಇದರ ಕಾಮಗಾರಿ ಸಂದರ್ಭ ಹಾಲಿ ರಸ್ತೆಯನ್ನು ಹೆಚ್ಚು ಅಗೆಯುವುದಿಲ್ಲ. ಜತೆಗೆ ಹೊಸ ಪೈಪ್‌ಲೈನ್‌ ಅಳವಡಿಸಲು ಹೆಚ್ಚುವರಿ ಸ್ಥಳವನ್ನು ಪ್ರತ್ಯೇಕವಾಗಿ ವ್ಯವಸ್ಥೆ ಮಾಡಲಾಗುವುದು.ಅರುಣ್‌ಪ್ರಭ, ಜನರಲ್‌ ಮ್ಯಾನೇಜರ್‌,  ಸ್ಮಾರ್ಟ್‌ಸಿಟಿ-ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next