ಗೌರಿಬಿದನೂರು: ಕಾಮಗಾರಿ ಪೂರ್ಣಗೊಳ್ಳದಿದ್ದರೂ ಸರ್ಕಾರದಿಂದ ಅನುಮತಿ ಪಡೆದು ಸುಂಕ ವಸೂಲಿ ಮಾಡುತ್ತಿದ್ದ ತಾಲೂಕಿನ ಗಡಿ ಭಾಗದ ತಿಪ್ಪಗಾನಹಳ್ಳಿ ಕೆರೆಯ ಬಳಿ ಇರುವ ಟೋಲ್ ಗೇಟ್ (ಸುಂಕ ವಸೂಲಾತಿ ಕೇಂದ್ರ)ನಲ್ಲಿ ಹಣ ವಸೂಲಿ ಮಾಡದಂತೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದು, ಇದೇ ತಿಂಗಳ ಡಿ.9ರಿಂದ ಟೋಲ್ ವಸೂಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಈ ಮಾರ್ಗವಾಗಿ ಸಂಚರಿಸುವ ಎಲ್ಲಾ ವಾಹನಗಳಿಗೆ ಸುಂಕವಿಲ್ಲದೆ ತೆರಳಬಹುದಾಗಿದ್ದು, ವಾಹನ ಸವಾರರು ನಿಟ್ಟುಸಿರು ಬಿಟ್ಟಿದ್ದಾರೆ.
ವರ್ಷದಿಂದ ಸುಂಕ ವಸೂಲಾತಿ: ಅಂತಾರಾಜ್ಯ ಹೆದ್ದಾರಿ ರಸ್ತೆ ಕುಡುಮಲಕುಂಟೆಯಿಂದ ಯಲಹಂಕವರೆಗೆ ಕೆಆರ್‌ಡಿಎಲ್ ನೇತೃತ್ವದಲ್ಲಿ ಆರ್‌ಸಿಸಿಎಲ್ ಕಂಪನಿಯು ನಿರ್ಮಾಣ ಮಾಡಿರುವ 74 ಕಿ.ಮೀ. ಉದ್ದದ ರಸ್ತೆ ಕಾಮಗಾರಿ ಇನ್ನೂ ನಿರ್ಮಾಣ ಹಂತದಲ್ಲಿದ್ದರೂ 2018ರ ಸೆ.22ರಂದು ಏಕಾಏಕಿ ಸರ್ಕಾರದಿಂದ ಆದೇಶ ತಂದು ರಾಜಾನುಕುಂಟೆಯ ಸುರಧೇನುಪುರದ ಬಳಿ ಇರುವ ಟೋಲ್ ಹಾಗೂ ತಾಲೂಕಿನ ಗಡಿಭಾಗವಾದ ತಿಪ್ಪಗಾನಹಳ್ಳಿಯ ಬಳಿ ಸೇರಿ ಒಟ್ಟು ಎರಡು ಟೋಲ್ ಗೇಟ್‌ಗಳನ್ನು ತೆರೆದು ಸುಂಕ ವಸೂಲಾತಿ ಮಾಡಲಾಗುತ್ತಿತ್ತು. ವೆಂಕಟೇಶ್‌ರಿಂದ ದಾವೆ: ದೊಡ್ಡಬಳ್ಳಾಪುರದ ವಕೀಲ ಜಿ.ವೆಂಕಟೇಶ್ ಅವರು ರಸ್ತೆ ಕಾಮಗಾರಿ ಪೂರ್ಣಗೊಳ್ಳದೆಯೇ ಸುಂಕ ವಸೂಲಾತಿ ಮಾಡಲಾಗುತ್ತಿದೆ ಎಂದು ನ್ಯಾಯಾಲಯದಲ್ಲಿ ಇತ್ತೀಚೆಗೆ ದಾವೆ ಹೂಡಿದ್ದರು.
ಮಧ್ಯಂತರ ಆದೇಶ: ರಸ್ತೆ ಕಾಮಗಾರಿ ಕುರಿತು ಸಂಸ್ಥೆಯವರು ನ್ಯಾಯಾಲಯಕ್ಕೆ ಸೂಕ್ತ ವಿವರ ನೀಡದ ಹಿನ್ನೆಲೆಯಲ್ಲಿ ಯಲಹಂಕ-ಆಂಧ್ರದ ಗಡಿಯ ರಾಜ್ಯ ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ಮಾಡದಂತೆ ಯಲಹಂಕ ಎ.ಪಿ. ಬಾರ್ಡರ್ ಟೋಲ್ ಹೈವೇಸ್ ಪ್ರೈವೇಟ್ ಲಿಮಿಟೆಟ್‌ಗೆ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ. ರಾಜ್ಯ ಹೆದ್ದಾರಿ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳದಿದ್ದರೂ ಮಾರಸಂದ್ರ ಮತ್ತು ತಿಪ್ಪಗಾನಹಳ್ಳಿ ಸಮೀಪದ ಟೋಲ್ ಕೇಂದ್ರದಲ್ಲಿ ಅಕ್ರಮವಾಗಿ ಟೋಲ್ ಸಂಗ್ರಹಿಸಲಾಗುತ್ತಿದೆ ಎಂದು ಜಿ.ವೆಂಕಟೇಶ್ ಆರೋಪಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹಿರಿಯ ನ್ಯಾಯಮೂರ್ತಿ ರವಿ ಮಳೀಮಠ ಮತ್ತು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ.
ಅರ್ಜಿದಾರರ ಪರ ವಕೀಲ ವೆಂಕಟೇಶ್ ಪಿ.ದಳವಾಯಿ, ಕಾಮಗಾರಿಯು ಶೇ.75 ರಷ್ಟು ಪೂರ್ಣಗೊಂಡಿಲ್ಲ. ಸರ್ಕಾರ ತಮಗೆ ಬೇಕಾದವರನ್ನು ನೇಮಿಸಿಕೊಂಡು ಶೇ.75 ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂಬುದಾಗಿ ತಪ್ಪು ಮಾಹಿತಿ ನೀಡುತ್ತಿದೆ ಎಂದು ಕೋರ್ಟ್ ಗಮನಕ್ಕೆ ತಂದರು. ಸರ್ಕಾರದ ಪ್ರಮಾಣ ಪತ್ರವೂ ಸೂಕ್ತ ವಿವರ ನೀಡದ ಹಿನ್ನೆಲೆಯಲ್ಲಿ ಮುಂದಿನ ಆದೇಶದವರೆಗೂ ಟೋಲ್ ಸಂಗ್ರಹ ಮಾಡಬಾರದು ಎಂದು ಕೋರ್ಟ್ ಆದೇಶ ನೀಡಿದೆ.
ಏರಿಕೆಯಾಗಿದ್ದ ಪ್ರಯಾಣ ದರ: ರಾಜ್ಯ ಹೆದ್ದಾರಿಯಲ್ಲಿ ಎರಡು ಕಡೆ ಟೋಲ್ ಸಂಗ್ರಹ ಆರಂಭವಾದ ಕಾರಣ ಕೆ.ಎಸ್.ಆರ್.ಟಿ.ಸಿ. ಗೌರಿಬಿದನೂರು ಘಟಕದ ವ್ಯವಸ್ಥಾಪಕರು ಮೇಲಾಧಿಕಾರಿಗಳ ಆದೇಶದ ಮೇರೆಗೆ ಗೌರಿಬಿದನೂರಿನಿಂದ ಬೆಂಗಳೂರಿಗೆ ಈ ಹಿಂದೆ ಇದ್ದ 72 ಪ್ರಯಾಣ ದರವನ್ನು 76ಕ್ಕೆ ಏರಿಸಿದ್ದರು. ಆದರೆ ಇದೀಗ ಟೋಲ್ ವಸೂಲಾತಿ ಸುಂಕವು ಸ್ಥಗಿತಗೊಂಡಿರುವ ಪರಿಣಾಮವಾಗಿ ಪ್ರಯಾಣ ದರವನ್ನು ಕಡಿಮೆ ಮಾಡುತ್ತೀರಾ ಎಂದು ಘಟಕ ವ್ಯವಸ್ಥಾಪಕಿ ವನಜಾ ಲೇಖಾ ನಾಯಕ್ ಅವರನ್ನು ಕೇಳಿದರೆ, ಈ ಬಗ್ಗೆ ನಮಗೆ ಸ್ಪಷ್ಟ ಮಾಹಿತಿ ಇಲ್ಲ. ಇಲಾಖೆಯ ಮೇಲಾಧಿಕಾರಿಗಳು ಆದೇಶ ನೀಡಿದಲ್ಲಿ ಪ್ರಯಾಣ ದರ ಕಡಿಮೆ ಮಾಡಲಾಗುವುದು. ಅಲ್ಲಿಯವರೆಗೂ ಪ್ರಸ್ತುತ ಇರುವ ದರವೇ ಚಾಲ್ತಿಯಲ್ಲಿರುತ್ತದೆ ಎಂದು ತಿಳಿಸಿದ್ದಾರೆ.