Advertisement

ಕ್ಷುಲ್ಲಕ ಕಾರಣಕ್ಕೆ ರಸ್ತೆ ಕಾಮಗಾರಿ ನನೆಗುದಿಗೆ

06:26 PM Aug 19, 2021 | Team Udayavani |

ಲಿಂಗಸುಗೂರು: ಕುಂಟು ನೆಪ ಇಟ್ಟುಕೊಂಡು ಗುತ್ತಿಗೆದಾರರೊಬ್ಬರು ಕೆಲಸ ಸ್ಥಗಿತಗೊಳಿಸಿದ್ದರಿಂದ ತಾಲೂಕಿನ ಸುಕ್ಷೇತ್ರ ಅಮರೇಶ್ವರಕ್ಕೆ ಸಂಪರ್ಕ ಕಲ್ಪಿಸುವ
ರಸ್ತೆ ಕಾಮಗಾರಿ ನನೆಗುದಿಗೆ ಬಿದ್ದಿದೆ. ಸುಕ್ಷೇತ್ರ ಅಮರೇಶ್ವರ ಜಿಲ್ಲೆಯಲ್ಲೇ ದೊಡ್ಡ ಪುಣ್ಯ ಕ್ಷೇತ್ರವಾಗಿದೆ. ಜಿಲ್ಲೆಯ ದೊಡ್ಡ ಜಾತ್ರೆಗಳಲ್ಲಿ ಅಮರೇಶ್ವರ ಜಾತ್ರೆಯೂ ಒಂದಾಗಿದೆ. ಪುರಾಣ ಐತಿಹ್ಯ ಹೊಂದಿರುವ ಕ್ಷೇತ್ರಕ್ಕೆ ಭಕ್ತರ ಸಮೂಹವೇ ಇದೆ. ಪ್ರತಿ ವರ್ಷ ಹೋಳಿ ಹುಣ್ಣಿಮೆ ದಿನದಂದು ನಡೆಯುವ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಳ್ಳುತ್ತಾರೆ.

Advertisement

ದ್ವಿಪಥ ರಸ್ತೆಗೆ 8 ಕೋಟಿ ರೂ.: ರಾಷ್ಟ್ರೀಯ ಹೆದ್ದಾರಿ 150ಎ ದಿಂದ ಅಮರೇಶ್ವರ ಸುಕ್ಷೇತ್ರಕ್ಕೆ ದ್ವಿಪಥ ರಸ್ತೆ ಅಭಿವೃದ್ಧಿಗೆ ಎರಡು ಪ್ಯಾಕೇಜ್‌ನಡಿ 8 ಕೋಟಿ ರೂ. ಬಿಡುಗಡೆಯಾಗಿದ್ದು, ಅದನ್ನು ಲೋಕೋಪಯೋಗಿ ಇಲಾಖೆ ಮುಖಾಂತರ ಟೆಂಡರ್‌ ಕರೆದು 2020, ಫೆ.15ರಂದು ಕಾಮಗಾರಿ ಆರಂಭಿಸಲಾಗಿತ್ತು. ಅದರಂತೆ ದೇವರಭೂಪುರ ಸರ್ಕಾರಿ ಪ್ರಾಥಮಿಕ ಶಾಲೆಯಿಂದ ಸುಕ್ಷೇತ್ರದ ದೊಡ್ಡ ಕಲ್ಯಾಣ ಮಂಟಪ ವರೆಗೆ 12 ಮೀಟರ್‌ ಅಗಲದ ದ್ವಿಪಥ ರಸ್ತೆ ಕಾಮಗಾರಿ
ಶೇ.80 ಪೂರ್ಣಗೊಂಡಿದೆ. ಸುಕ್ಷೇತ್ರದ ತೋಟಗಾರಿಕೆ ಫಾರ್ಮ್ನ ಮುಂದಿನ ರಸ್ತೆ ಬದಿಯಲ್ಲಿ ಪುಟ್‌ಪಾತ್‌ ಗೆ ಕಾಬೋಲ್‌ ಟೈಲ್ಸ್‌ ಅಳವಡಿಸಲಾಗಿದೆ. ದೇವಸ್ಥಾನದ ಬಳಿ ರಸ್ತೆಯ ಮಧ್ಯ ಭಾಗದಲ್ಲಿ ವಿದ್ಯುತ್‌ ಕಂಬ ಅಳವಡಿಸುವುದು ಬಾಕಿ ಇದೆ.

ಎರಡನೇ ಪ್ಯಾಕೇಜ್‌ಗೆ ಗ್ರಹಣ: ಮೊದಲನೇ ಪ್ಯಾಕೇಜ್‌ ಕಾಮಗಾರಿಗೆ ಶೇ.90 ಮುಗಿದಿದೆ. ಎರಡನೇ ಪ್ಯಾಕೇಜ್‌ನ ಟೆಂಡರ್‌ ಪಡೆದು ಗುತ್ತಿಗೆದಾರರು ಐದಾರು ತಿಂಗಳು ನಂತರ ಕಾಮಗಾರಿ ಆರಂಭ ಮಾಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ 150ಎಯಿಂದ ದೇವರಭೂಪುರ ಗ್ರಾಪಂ ಕಚೇರಿವರೆಗೆ 4 ಕಿ.ಮೀ. ರಸ್ತೆ ಅಭಿವೃದ್ಧಿ ಮಾಡಬೇಕಾಗಿದೆ. ಆದರೆ, ಮೆಟ್‌ಲಿಂಗ್‌ ಮಾಡಲು ರಸ್ತೆಯ ಒಂದು ಬದಿ ನೆಲ ಅಗೆದಿದ್ದಾರೆ. 12 ಮೀಟರ್‌ ರಸ್ತೆ ಅಗಲೀಕರಣದಿಂದ ರೈತರು ತಮ್ಮ
ಜಮೀನು ರಸ್ತೆಗೆ ಹೋಗುತ್ತೆ. ನಮಗೆ ಪರಿಹಾರ ನೀಡಿದ ನಂತರ ಕಾಮಗಾರಿ ಆರಂಭಿಸುವಂತೆ ಪಟ್ಟು ಹಿಡಿದಿದ್ದಾರೆ. ಇದನ್ನೇ ನೆಪವಾಗಿಸಿಕೊಂಡ ಗುತ್ತಿಗೆದಾರ ಕಾಮಗಾರಿ ಸ್ಥಗಿತಗೊಳಿಸಿದ್ದಾರೆ.

ಗಮನ ಹರಿಸದ ಅಧಿಕಾರಿಗಳು: ಅನೇಕ ವರ್ಷಗಳ ಬಳಿಕ ಅಮರೇಶ್ವರ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗಿದೆ. ಆದರೆ, ಇದನ್ನು ಗ್ರಾಮಸ್ಥರ, ರೈತರ ಸಹಕಾರ ಪಡೆದು ರಸ್ತೆ ಕಾಮಗಾರಿ ಮುಗಿಸಬೇಕಾದ ಲೋಕೋಪಯೋಗಿ ಅಧಿಕಾರಿಗಳು, ನಿರ್ಲಕ್ಷ್ಯ ವಹಿಸಿದ್ದರಿಂದ ರಸ್ತೆ ಕಾಮಗಾರಿ ನನೆಗುದಿಗೆ ಬಿದ್ದಿದೆ. ಸುಸ್ಥಿತಿಯಲ್ಲಿದ್ದ ರಸ್ತೆ ಅಗೆದಿದ್ದರಿಂದ ಶ್ರಾವಣ ಮಾಸದ  ಪ್ರಯುಕ್ತ ಸುಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬರುವ ಭಕ್ತಾದಿಗಳು ಧೂಳಿನಲ್ಲಿ ಸಂಚರಿಸುವಂತಾಗಿದೆ. ಇನ್ನಾದರೂ ಪಿಡಬ್ಲ್ಯೂಡಿ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಇತ್ತ ಗಮನ ಹರಿಸುತ್ತಾರಾ? ಕಾದು ನೋಡಬೇಕು.

100 ಮೀಟರ್‌ ರಸ್ತೆಯಲ್ಲಿ ಮಾತ್ರ ರೈತ ತಕರಾರು ಇದೆ. ಇನ್ನುಳಿದ ಕಡೆಗಳಲ್ಲಿ ರಸ್ತೆ ಕಾಮಗಾರಿ ಆರಂಭಿಸಬೇಕಾಗಿತ್ತು. ಆದರೆ, ಇದನ್ನೆ ನೆಪವಾಗಿಸಿಕೊಂಡು ಗುತ್ತಿಗೆದಾರರು ಕಾಮಗಾರಿ ಆರಂಭ ಮಾಡುತ್ತಿಲ್ಲ. ಈಗಾಗಲೇ ಗುತ್ತಿಗೆದಾರರಿಗೆ ಎರಡು ಭಾರಿ ನೋಟಿಸ್‌ ಜಾರಿ ಮಾಡಲಾಗಿದೆ. ಬಳ್ಳಾರಿಯಲ್ಲಿ ಈಚೆಗೆ ನಡೆದ ಇಲಾಖೆ ಸಭೆಯಲ್ಲಿ ಮೇಲಧಿ ಕಾರಿಗಳ ಗಮನಕ್ಕೆ ತರಲಾಗಿದೆ. ಕೆಲಸ ಆರಂಭ ಮಾಡಿದರೆ ರೈತರ ಮನವೂಲಿಸುವ ಕೆಲಸ ಮಾಡುತ್ತೇವೆ.
*ಜಗದೇವ ಮೂತಿ, ಎಇಇ ಪಿಡಬ್ಲೂಡಿ, ಲಿಂಗಸುಗೂರು

Advertisement

ರೈತರು ರಸ್ತೆ ಕಾಮಗಾರಿಗೆ ಅಡ್ಡಿ ಪಡಿಸುತ್ತಿದ್ದು, ಪರಿಹಾರ ಕೇಳುತ್ತಿದ್ದಾರೆ. ಆದ ಕಾರಣ ಕಾಮಗಾರಿ ನಿಲ್ಲಿಸಲಾಗಿದೆ. ಶ್ರಾವಣ ಮಾಸ ಮುಗಿದ ನಂತರ ಸಂಸದರ ಜೊತೆ ಚರ್ಚಿಸಿ ಸಮಸ್ಯೆ ಬಗೆಹರಿಸಿಕೊಂಡು ಕಾಮಗಾರಿ ಶುರು ಮಾಡುತ್ತೇವೆ.
ಅಬ್ರಾರ್‌ ಹುಸೇನ್‌, ಗುತ್ತಿಗೆದಾರ

*ಶಿವರಾಜ ಕೆಂಭಾವಿ

Advertisement

Udayavani is now on Telegram. Click here to join our channel and stay updated with the latest news.

Next