ಚಿಂಚೋಳಿ: ತಾಲೂಕಿನ ಹುಲಸಗೂಡ- ಸಿರಸನಬುಗಡಿ ತಾಂಡಾ-ಮಂಡಗೋಳ ತಾಂಡಾ-ಚಂದನಕೇರಾ ಮಧ್ಯೆ ನಡೆಯುತ್ತಿರುವ ರಸ್ತೆ ಸುಧಾರಣೆ ಡಾಂಬರೀಕರಣ ಅಭಿವೃದ್ಧಿ ಕಾಮಗಾರಿಗೆ ತಡೆಯೊಡ್ಡಲು ತಾಲೂಕು ವಲಯ ಅರಣ್ಯ ಇಲಾಖೆಯವರು ರಸ್ತೆ ಮಧ್ಯೆ ತೆಗ್ಗು ತೋಡಿಸಿದ್ದರಿಂದ ವಾಹನಗಳ ಓಡಾಟಕ್ಕೆ ತೊಂದರೆ ಉಂಟಾಗಿದೆ.
ಹುಲಸಗೂಡ-ಚಂದನಕೇರಾ ಗ್ರಾಮಕ್ಕೆ ರಸ್ತೆ ಸಂಪರ್ಕ ಕಲ್ಪಿಸುವುದಕ್ಕಾಗಿ 2015-16ನೇ ಸಾಲಿನಲ್ಲಿ ಪ್ರಧಾನಮಂತ್ರಿ ಗ್ರಾಮೀಣ ಸಡಕ್ ಯೋಜನೆ ಅಡಿಯಲ್ಲಿ ಒಟ್ಟು 13 ಕಿ.ಮೀ. ರಸ್ತೆ ಸುಧಾರಣೆ ಮತ್ತು ಡಾಂಬರೀಕರಣಕ್ಕಾಗಿ ಒಂಭತ್ತು ಕೋಟಿ ರೂ. ನೀಡಲಾಗಿತ್ತು. ಈಗಾಗಲೇ ಹುಲಸಗೂಡ-ಮಂಡಗೋಳ ತಾಂಡಾದವರೆಗೆ ಒಟ್ಟು 6 ಕಿ.ಮೀ. ರಸ್ತೆ ಸಂಪರ್ಕ ಮತ್ತು ಡಾಂಬರೀಕರಣ ಕಾಮಗಾರಿ ಪೂರ್ಣ ವಾಗಿದೆ. ಆದರೆ ಮಂಡಗೋಳ- ಸಿರಸನಬುಗಡಿ ತಾಂಡಾ ಮಧ್ಯೆ ಇರುವ 2.5ಕಿಮಿ ರಸ್ತೆ ಸುಧಾರಣೆ ಡಾಂಬರೀಕರಣ ಕಾಮಗಾರಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಬ್ರೇಕ್ ಹಾಕಿದ್ದಾರೆ.
ಮಂಡಗೋಳ ಮತ್ತು ಸಿರಸನ ಬುಗಡಿ ತಾಂಡಾ ಮಧ್ಯೆ ರಸ್ತೆ ಸುಧಾರಣೆಗೆ ಗುತ್ತಿಗೆದಾರನು ಅರಣ್ಯ ಇಲಾಖೆಗೆ 10 ಲಕ್ಷ ರೂ. ತುಂಬಿ ಅನುಮತಿ ಪಡೆದುಕೊಳ್ಳಲಾಗಿದೆ. ಆದರೆ ಸ್ಟೇಜ್ ಎರಡು ಅಪ್ರೂಲ್ ಆಗಿರುವುದರಿಂದ ಗುತ್ತಿಗೆದಾರನು ನೋಂದಣಿ ಮಾಡಿ ಕೊಳ್ಳದೇ ಇರುವುದರಿಂದ ರಸ್ತೆ ಕಾಮಗಾರಿಗೆ ಅಡಚಣೆ ಉಂಟಾಗಿದೆ. ಕಾಮಗಾರಿ ಪ್ರಾರಂಭಿಸಲು ಜಿಲ್ಲಾ ಅರಣ್ಯಾಧಿಕಾರಿ, ಶಾಸಕರು, ಸಂಸದರು ವಲಯ ಅರಣ್ಯಾಧಿಕಾರಿಗಳಿಗೆ ತಿಳಿಸಿದರೂ ರಸ್ತೆಗೆ ಹಾಕುವ ಮುರುಮ ಮತ್ತು ಕಂಕರ ಹೊತ್ತು ತರುವ ಟಿಪ್ಪರ್, ಲಾರಿಗಳನ್ನು ತಾಲೂಕು ವಲಯ ಅರಣ್ಯಾಧಿಕಾರಿಗಳು ಜಪ್ತಿ ಮಾಡಿದ್ದಾರೆ. ಅಲ್ಲದೇ ರಸ್ತೆ ಸುಧಾರಣೆ ನಡೆಯದಂತೆ ರಸ್ತೆ ಮಧ್ಯೆ ತೆಗ್ಗು ತೋಡಿಸಿದ್ದಾರೆ ಎಂದು ಮುಖಂಡ ಚಂದನಕೇರಾ ಹಣಮಂತ ಪೂಜಾರಿ ಆಪಾದಿಸಿದ್ದಾರೆ.
ಹಿಂದುಳಿದ ಪ್ರದೇಶಕ್ಕೆ ಜನರ ಬೇಡಿಕೆಯಂತೆ ಶಾಸಕರು, ಸಂಸದರು ರಸ್ತೆ ಸಂಪರ್ಕಕ್ಕಾಗಿ ಪ್ರಯತ್ನಪಟ್ಟಿದ್ದಾರೆ. ಆದರೆ ಚಂದನಕೇರಾ-ಸಿರಸನಬುಗಡಿ ತಾಂಡಾ, ಮಂಡಗೊಳ ತಾಂಡಾ ಹುಲಸಗೂಡ ತಾಂಡಾದಿಂದ ಚಿಂಚೋಳಿ-ಕಲಬುರಗಿ ರಾಜ್ಯ ಹೆದ್ದಾರಿಗೆ ರಸ್ತೆ ಸಂಪರ್ಕ ಕಲ್ಪಿಸುವ ಬಹುದಿನಗಳ ಜನರ ಬೇಡಿಕೆ ಈಡೇರದಂತಾಗಿದೆ. ವಲಯ ಅರಣ್ಯಇಲಾಖೆ ಮತ್ತು ಗುತ್ತಿಗೆದಾರರ ಮಧ್ಯದ ಶೀಲತ ಸಮರದಿಂದಾಗಿ ಜನರಿಗೆ ರಸ್ತೆ ಸಂಪರ್ಕ ಭಾಗ್ಯ ಇಲ್ಲದಂತಾಗಿದೆ.
ಪ್ರಕ್ರಿಯೆ ಜಾರಿಯಲ್ಲಿ: ಪ್ರಧಾನಮಂತ್ರಿ ಗ್ರಾಮೀಣ ಸಡಕ್ ಯೋಜನೆ ಅಡಿಯಲ್ಲಿ ರಸ್ತೆ ಅಭಿವೃದ್ಧಿ ಕೆಲಸ ಮಾಡಲು ಅರಣ್ಯ ಇಲಾಖೆ ಸ್ಟೇಜ್ ಎರಡು ಅಪ್ರೂಲ್ ನೀಡಿದೆ. ಆದರೆ ಲಾಕ್‌ಡೌನ್ ಇರುವುದರಿಂದ ಅನುಮತಿಗೆ ಸ್ವಲ್ಪಮಟ್ಟಿಗೆ ವಿಳಂಬ ಆಗಿದೆ. ಸರ್ಕಾರದಿಂದ ಅನುಮತಿ ಪಡೆಯುವುದಕ್ಕಾಗಿ ನಡೆಯುತ್ತಿರುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಇಲಾಖೆ ಇಂಜಿನಿಯರ್ ತಿಳಿಸಿದ್ದಾರೆ.
ಮಂಡಗೊಳ-ಸಿರಸನಬುಗಡಿ ತಾಂಡಾಕ್ಕೆ ರಸ್ತೆ ಸಂಪರ್ಕ ಕಾಮಗಾರಿ ನಡೆಸಲು ಅರಣ್ಯಇಲಾಖೆ ನೀಡಿದ ಪರವಾನಗಿ ಹೊರತುಪಡಿಸಿ ಇನ್ನು 300 ಮೀಟರ್ ರಸ್ತೆಯನ್ನು ಮೀಸಲು ಅರಣ್ಯಪ್ರದೇಶದಲ್ಲಿ ಅರಣ್ಯ ಕಾಯ್ದೆ ಉಲ್ಲಂಘಿಸಿ, ಕಾನೂನು ವಿರುದ್ಧವಾಗಿ ಕೆಲಸ ನಡೆಯುತ್ತಿದೆ. ಆದ್ದರಿಂದ ಕಾಮಗಾರಿಗೆ ತಡೆಯೊಡ್ಡಿ ವಾಹನಗಳನ್ನು ಜಪ್ತಿ ಮಾಡಿ, ಪ್ರಕರಣ ದಾಖಲಿಸಲಾಗಿದೆ. ಇನ್ನುಳಿದ ಕಾಮಗಾರಿಗೆ ಸರಕಾರ ಅನುಮತಿ ನೀಡುವವರೆಗೆ ಯಾವುದೇ ಕೆಲಸ ನಡೆಸಲು ಅನುಮತಿ ನೀಡುವುದಿಲ್ಲ.-
ಮಹಮ್ಮದ್ ಮುನೀರ್ ಅಹೆಮದ್, ವಲಯ ಅರಣ್ಯಾಧಿಕಾರಿ
-ಶಾಮರಾವ್ ಚಿಂಚೋಳಿ