ಸಂತೆಮರಹಳ್ಳಿ: ಯಳಂದೂರು ತಾಲೂಕಿನ ಗುಂಬಳ್ಳಿ ಗ್ರಾಮದಿಂದ ಯರಗಂಬಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಗಂಗವಾಡಿ, ದಾಸನಹುಂಡಿ, ಬೆಲ್ಲವತ್ತ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತಿದೆ. ಡೆಕ್‌ನಿರ್ಮಾಣಕ್ಕಾಗಿ ರಸ್ತೆ ಅಗೆದಿದ್ದು, ಕಾಮಗಾರಿ ವಿಳಂಬವಾಗಿರುವ ಕಾರಣ ಗ್ರಾಮಸ್ಥರ ಸಂಚಾರಕ್ಕೆ ತೊಡಕಾಗಿದೆ. ಇದರಿಂದಾದಗಿ ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಒತ್ತಾಯಿಸಿದ್ದಾರೆ.
ಲೊಕೋಪಯೋಗಿ ಇಲಾಖೆಯಿಂದ ಕಾಮಗಾರಿ ನಡೆಯುತ್ತಿದೆ. ಕೆಲಸ ಆರಂಭಗೊಂಡು 5 ತಿಂಗಳು ಕಳೆದಿವೆ. ಆದರೆ ಇನ್ನೂ ಕೂಡ ಇದು ಪೂರ್ಣಗೊಂಡಿಲ್ಲ. ರಸ್ತೆ ಮೇಲೆ ಮೆಟ್ಲಿಂಗ್ ಮಾಡಲು ಕಲ್ಲುಮಣ್ಣು ಸುರಿಯಲಾಗಿದೆ. ಇದು ಮೇಲೆಕ್ಕೆದ್ದಿದ್ದು ವಾಹನ ಸಂಚಾರ ದುಸ್ತರವಾಗಿದೆ. ಯರಗಂಬಳ್ಳಿ ಗ್ರಾಮದ ಸರ್ಕಲ್‌ನಲ್ಲಿ ಹಳ್ಳಬಿದ್ದಿದ್ದು, ಗ್ರಾಮದ ಒಳಗೆ ಇನ್ನೂ ಕಾಮಗಾರಿ ಆರಂಭಗೊಳ್ಳದ ಕಾರಣ ಮಳೆ ನೀರು ಇಲ್ಲೇ ನಿಲ್ಲುವುದರಿಂದ ವಾಹನ ಸವಾರರು ಚಲಿಸಲು ಪರಿತಪ್ಪಿಸುವ ಸ್ಥಿತಿ ನಿರ್ಮಾಣವಾಗಿದೆ.
ಡೆಕ್ ನಿರ್ಮಾಣಕ್ಕೆ ರಸ್ತೆ ಅಗೆದಿರುವುದೇ ಸಂಚಾರಕ್ಕೆ ಅಡಚಣೆ: ಗುಂಬಳ್ಳಿ ಗ್ರಾಮದಿಂದ ಯರಗಂಬಳ್ಳಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ 2.2 ಕಿ.ಮೀ. ಉದ್ದದ ರಸ್ತೆ ನಿರ್ಮಾಣಕ್ಕಾಗಿ 1.5 ಕೋಟಿ ರೂ. ಹಣ ಬಿಡುಗಡೆಯಾಗಿದೆ. ಯರಗಂಬಳ್ಳಿ ಗ್ರಾಮದಿಂದ ಗಂಗವಾಡಿ, ದಾಸನಹುಂಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಮಧ್ಯದಲ್ಲಿ ಸೇರಿದಂತೆ ಮೂರು ಸ್ಥಳದಲ್ಲಿ ಡೆಕ್ ನಿರ್ಮಾಣಕ್ಕೆ ಹಳ್ಳ ತೋಡಲಾಗಿದೆ. ಆದರೆ ಇದಕ್ಕೆ ಬದಲಿ ಮಾರ್ಗ ಮಾಡಿಲ್ಲ. ಹೀಗಾಗಿ ಇಲ್ಲಿಂದ ವಾಹನ ಸಂಚಾರ ಕಷ್ಟ ಸಾಧ್ಯವಾಗಿದೆ. ಪರ್ಯಾಯವಾಗಿ ಬಿಳಿಗಿರಿರಂಗನಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಬಲ ಬದಿಯಲ್ಲಿರುವ ಕಬಿನಿ ನಾಲೆಯ ಕಾಲುವೆ ರಸ್ತೆಯಲ್ಲೇ ವಾಹನ ಸಂಚರಿಸುವ ಅನಿವಾರ್ಯವಾಗಿದೆ ಎಂದು ಗ್ರಾಮಸ್ಥರ ಅಳಲಾಗಿದೆ.
ಅಪಾಯಕಾರಿ ರಸ್ತೆ: ರಸ್ತೆ ಸಂಪೂರ್ಣವಾಗಿ ಕಚ್ಚಾ ರಸ್ತೆಯಾಗಿದ್ದು, ಡಾಂಬರು ಕಿತ್ತು ಹೋಗಿದೆ. ರಸ್ತೆಯಲ್ಲಿ ಹೆಚ್ಚಾಗಿ ಮಣ್ಣು ಇರುವುದರಿಂದ ಸ್ವಲ್ಪ ಪ್ರಮಾಣದ ಮಳೆಯಾದರೂ ವಾಹನ ಸಂಚಾರ ದುಸ್ತರವಾಗುತ್ತದೆ. ಜತೆಗೆ ಬಸ್ ಸಂಚಾರ ವಿರಳವಾಗಿರವುದರಿಂದ ಆಟೋಗಳೇ ಹೆಚ್ಚಾಗಿ ಓಡಾಡುತ್ತವೆ. ಆದರೆ ಮಳೆಗೆ ಈ ರಸ್ತೆಯಲ್ಲಾ ಕೆಸರುಮಯವಾಗಿದ್ದು, ಗುಂಡಿಗಳು ನಿರ್ಮಾಣವಾಗಿವೆ. ಈಗ ಕಾಲುವೆಯಲ್ಲಿ ನೀರನ್ನು ಬಿಡಲಾಗಿದೆ. ಒಂದು ವೇಳೆ ಪ್ರಯಾಣಿಕರನ್ನು ಕರೆದೊಯ್ಯುವಾಗ ವಾಹನ ಜಾರಿದರೆ, ನೇರವಾಗಿ ಕಾಲುವೆಗೆ ಉರುಳುವ ಸಾಧ್ಯತೆಗಳು ಹೆಚ್ಚಿದ್ದು, ಶೀಘ್ರ ಕಾಮಗಾರಿ ಪೂರ್ಣಗೊಳಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕು ಎಂದು ಗ್ರಾಮಸ್ಥರ ಒತ್ತಾಯವಾಗಿದೆ.
ಇಲಾಖೆ, ಗುತ್ತಿಗೆದಾರ ನಿರ್ಲಕ್ಷ್ಯ: ಡೆಕ್ ನಿರ್ಮಾಣಕ್ಕೆ ಹಳ್ಳ ತೆಗೆದ ಮೇಲೆ ವಾಹನ ಸಂಚಾರಕ್ಕೆ ಪರ್ಯಾಯ ರಸ್ತೆ ಮಾಡಬೇಕಾದ ಇಲಾಖೆ ಈ ಬಗ್ಗೆ ನಿರ್ಲಕ್ಷ್ಯ ವಹಿಸಿದೆ. ಯಾವುದೇ ಸೂಚನಾ ಫಲಕಗಳನ್ನು ಅಳವಡಿಸಿಲ್ಲ. ಕಾಮಗಾರಿ ವಿಳಂಬವಾಗಿದೆ. ಈಚೆಗೆ ಮಳೆ ಹೆಚ್ಚಾಗಿ ಬಿದ್ದಿದೆ. ಈ ಭಾಗದಲ್ಲಿ ಹಾಕಲಾಗಿರುವ ಮಣ್ಣು ಕೆಸರಾಗಿದ್ದು ಜಾರುತ್ತದೆ. ದ್ವಿಚಕ್ರ ವಾಹನ ಸವಾರರು ಮಾತ್ರ ಇಲ್ಲಿಂದ ಸಂಚರಿಸಲು ಅವಕಾಶವಿದೆ.
ಆದರೂ ಪ್ರಾಣವನ್ನು ಪಣಕ್ಕಿಟ್ಟು ಸಂಚರಿಸುವ ಅನಿವಾರ್ಯವಿದೆ. ರಾತ್ರಿ ವೇಳೆ ಸಂಚಾರ ಇಲ್ಲಿ ಕಷ್ಟ ಸಾಧ್ಯ. ಇಲಾಖೆ ಎಂಜಿನಿಯರ್ ಹಾಗೂ ಗುತ್ತಿಗೆದಾರರು ನೇರವಾಗಿ ಕಾರಣವಾಗಿದ್ದಾರೆ. ಹಳೆ ರಸ್ತೆಯ ಕಲ್ಲನ್ನೇ ರಸ್ತೆಗೆ ಹಾಕಿ ರೋಲರ್‌ನಿಂದ ರೋಲ್ ಮಾಡಲಾಗಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡುವುದಿಲ್ಲ. ಈಗಲಾದರೂ ಸಂಬಂಧಪಟ್ಟವರು ಕ್ರಮ ವಹಿಸಲಿ ಎಂದು ಗ್ರಾಮಸ್ಥರಾದ ನಾರಾಯಣ, ಕಿರಣ, ಕಾಂತ ಸೇರಿದಂತೆ ಅನೇಕರ ಆಗ್ರಹವಾಗಿದೆ.
ಸ್ಥಳಕ್ಕೆ ಭೇಟಿ ನೀಡಿ ಕ್ರಮ: ಗುಂಬಳ್ಳಿ ಗ್ರಾಮದಿಂದ ಯರಗಂಬಳ್ಳಿ ಗ್ರಾಮದ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ. ಈ ರಸ್ತೆಗೆ ಅಡ್ಡಲಾಗಿ ಡೆಕ್ ನಿರ್ಮಾಣ ಮಾಡಿ ಹಾಗೆ ಬಿಟ್ಟಿರುವ ವಿಷಯ ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕ್ರಮ ವಹಿಸುವುದಾಗಿ ಲೋಕೋಪಯೋಗಿ ಇಲಾಖೆಯ ಜೆಇ ರಾಜು ಮಾಹಿತಿ ನೀಡಿದರು.
* ಫೈರೋಜ್ ಖಾನ್