Advertisement

ರಸ್ತೆಗೆ ಮರುನಾಮಕರಣ ಅಲೋಶಿಯಸ್‌ ಶಿಕ್ಷಣ ಸಂಸ್ಥೆಯಿಂದ ಪ್ರತಿಭಟನೆ

03:45 AM Jul 03, 2017 | Team Udayavani |

ಮಹಾನಗರ: “ಸಂತ ಅಲೋಶಿಯಸ್‌ ಕಾಲೇಜು ರಸ್ತೆ’ಯನ್ನು “ಮೂಲ್ಕಿ ಸುಂದರರಾಂ ಶೆಟ್ಟಿ ರಸ್ತೆ’ ಎಂಬುದಾಗಿ ಮರು ನಾಮಕರಣ ಮಾಡಲು ಅನುಮೋದನೆ ನೀಡುವಾಗ ಕಾಲೇಜು ಆಡಳಿತವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ  ಮಹಾ
ನಗರ ಪಾಲಿಕೆಯ ನಿಲುವನ್ನು ಖಂಡಿಸಿ ಸಂತ ಅಲೋಶಿಯಸ್‌ ಕಾಲೇಜು ಶಿಕ್ಷಣ ಸಂಸ್ಥೆಗಳ ಆಡಳಿತ ಮತ್ತು ವಿದ್ಯಾರ್ಥಿಗಳು ಶನಿವಾರ ನಗರದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಿದರು. 

Advertisement

ಕಾಲೇಜಿನ ಆಡಳಿತ ವರ್ಗ, ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳ ಪ್ರತಿಭಟನ ಮೆರವಣಿಗೆಯು ಕಾಲೇಜು ಆವರಣದಿಂದ ಹೊರಟು ಜ್ಯೋತಿ ವೃತ್ತ, ಹಂಪನಕಟ್ಟೆ, ಕ್ಲಾಕ್‌ ಟವರ್‌ ವೃತ್ತವಾಗಿ ಸಾಗಿ ವಾಪಸ್‌ ಕಾಲೇಜಿನ ಆವರಣಕ್ಕೆ ತಲುಪಿ ಸಮಾಪನ ಗೊಂಡಿತು. ಸುಮಾರು 10,000ದಷ್ಟು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಮೆರವಣಿಗೆಯನ್ನು  ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಮನ್‌ ಅಹ್ಮದ್‌ ಉದ್ಘಾಟಿಸಿದರು. ರೆಕ್ಟರ್‌ ಫಾ| ಡೈನೇಶಿಯಸ್‌ ವಾಸ್‌, ಕಾಲೇಜಿನ ಪ್ರಾಂಶುಪಾಲ ಫಾ| ಪ್ರವೀಣ್‌ ಮಾರ್ಟಿಸ್‌, ರಿಜಿಸ್ಟ್ರಾರ್‌ ಪ್ರೊ| ಎ.ಎಂ.ನರಹರಿ, ವಿಧಾನ ಪರಿಷತ್‌ ಮುಖ್ಯ ಸಚೇತಕ ಐವನ್‌ ಡಿ’ಸೋಜಾ, ಕೆಥೋಲಿಕ್‌ ಸಭಾ ಕೇಂದ್ರೀಯ ಸಮಿತಿ ಅಧ್ಯಕ್ಷ  ಅನಿಲ್‌ ಲೋಬೋ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ರೋಯ್‌ ಕ್ಯಾಸ್ಟಲಿನೊ, ಸಿಪಿಐಎಂ ನಗರ ಕಾರ್ಯದರ್ಶಿ ಸುನಿಲ್‌ ಕುಮಾರ್‌ ಬಜಾಲ್‌ ಮುಂತಾದವರು ಉಪಸ್ಥಿತರಿದ್ದರು. 

ಬೇಸರ ತಂದಿದೆ 
ಈ  ಶಿಕ್ಷಣ ಸಂಸ್ಥೆಗೆ 137 ವರ್ಷಗಳ ಇತಿಹಾಸ ಮತ್ತು ಪರಂಪರೆ ಇದ್ದು,  ಕೆ.ಜಿ.ಯಿಂದ ಪಿಎಚ್‌.ಡಿ.ವರೆಗಿನ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿದ್ದಾರೆ.  ಸಂಸ್ಥೆಯ ಹೆಸರಿನಲ್ಲಿದ್ದ ರಸ್ತೆಗೆ ಈಗ ಮರು ನಾಮಕರಣ ಮಾಡಿರುವುದು ನಮಗೆ ಬೇಸರ ತಂದಿದೆ. ನಮಗೆ ನ್ಯಾಯ ಬೇಕು ಎಂದು ಪ್ರಾಂಶುಪಾಲ ಫಾ| ಪ್ರವೀಣ್‌ ಮಾರ್ಟಿಸ್‌ ಹೇಳಿದರು. 

ಈ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿರುವ ತಾನು “ಸಂತ ಅಲೋಶಿಯಸ್‌ ಕಾಲೇಜು ರಸ್ತೆ’ಗೆ ಅದೇ ಹೆಸರನ್ನು ಉಳಿಸಿಕೊಂಡು ಬರಲು ಪ್ರಯತ್ನಿಸುತ್ತೇನೆ; ಈ ವಿಷಯದಲ್ಲಿ ರಾಜಿ ಇಲ್ಲ  ಎಂದು ಐವನ್‌ ಡಿ’ಸೋಜಾ ಹೇಳಿದರು. 
ಇದೊಂದು ರಸ್ತೆಯ ಪ್ರಶ್ನೆಯಲ್ಲ; ಸಂಸ್ಥೆಗೆ ನೀಡುವ ಗೌರವ. ಆದ್ದರಿಂದ ನಾವು ಪ್ರತಿಭಟನೆ ನಡೆಸಬೇಕಾಯಿತು. ನ್ಯಾಯ ಸಿಗುವ ತನಕ ಹೋರಾಟ ನಡೆಸಲಾಗುವುದು ಎಂದು ರೆಕ್ಟರ್‌ ಫಾ| ಡೈನೇಶಿಯಸ್‌ ವಾಸ್‌  ಹೇಳಿದರು. 
ಉಪನ್ಯಾಸಕ ನವೀನ್‌ ಮಸ್ಕರೇನ್ಹಸ್‌ ಕಾರ್ಯಕ್ರಮ ನಿರ್ವಹಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next