ಮಂಗಳೂರು : ಭಾರೀ ಮಳೆಯಿಂದ ಹಾನಿಗೊಳಗಾಗಿರುವ ಲೋಕೋಪಯೋಗಿ ಇಲಾಖೆ ರಸ್ತೆಗಳ ದುರಸ್ತಿಗೆ ದಕ್ಷಿಣ ಕನ್ನಡಕ್ಕೆ 12 ಕೋ.ರೂ. ಹಾಗೂ ಉಡುಪಿ ಜಿಲ್ಲೆಗೆ 7.5 ಕೋ.ರೂ. ಬಿಡುಗಡೆ ಮಾಡಲಾಗಿದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ತಿಳಿಸಿದ್ದಾರೆ.
ಸರ್ಕಿಟ್ ಹೌಸ್‌ನಲ್ಲಿ ಮಾತನಾಡಿದ ಅವರು, ಮಂಗಳೂರಿನಲ್ಲಿ ಈಗಾಗಲೇ ಲೋಕೋ ಪಯೋಗಿ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆದುಕೊಂಡಿದ್ದೇನೆ. ಹಾನಿಗೊಳಗಾದ ರಸ್ತೆಗಳ ತುರ್ತು ದುರಸ್ತಿಗೆ ಈಗಾಗಲೇ ಅನುದಾನ ಬಿಡುಗಡೆ ಮಾಡಲಾಗಿದೆ. ಮಳೆ ನಿಂತ ತತ್‌ಕ್ಷಣ ರಸ್ತೆ ದುರಸ್ತಿ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಈ ಬಾರಿ ರಾಜ್ಯದಲ್ಲಿ ವಾಡಿಕೆ ಮಳೆಗಿಂತ ಮೂರುಪಟ್ಟು ಅಧಿಕ ಮಳೆ ಸುರಿದಿದೆ. ಭಾರೀ ಮಳೆಯಿಂದ ರಸ್ತೆ ತೀರ ಹದಗೆಟ್ಟಿದೆ. ರಾಜ್ಯ ಸರಕಾರ ಈಗಾಗಲೇ ಲೋಕೋಪಯೋಗಿ ಇಲಾಖೆ ರಸ್ತೆಗಳ ತುರ್ತು ದುರಸ್ತಿಗೆ 200 ಕೋಟಿ ರೂ. ಹಾಗೂ ಗ್ರಾಮೀಣ ರಸ್ತೆಗಳ ದುರಸ್ತಿಗೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಇಲಾಖೆಗೆ 300 ಕೋ.ರೂ. ಈಗಾಗಲೇ ಬಿಡುಗಡೆ ಮಾಡಿದೆ ಎಂದರು.
ಈಗ ಹಾನಿಗೊಳಗಾಗಿರುವ ರಸ್ತೆಗಳ ಗುಂಡಿ ಮುಚ್ಚಿ ಸಂಚಾರಯೋಗ್ಯವಾಗಿಸಲಾಗುವುದು. ಮಳೆಗಾಲ ಮುಕ್ತಾಯವಾದ ಬಳಿಕ ಶಾಶ್ವತ ದುರಸ್ತಿ ಕಾಮಗಾರಿ ಕೈಗೆತ್ತಿಗೊಳ್ಳಲಾಗುವುದು. ಅದಕ್ಕೆ ಆವಶ್ಯವಿರುವ ಅನುದಾನವನ್ನು ಮುಂದಿನ ಹಂತದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಸಚಿವ ಪಾಟೀಲ್ ತಿಳಿಸಿದರು.
ಕೆಂಪಣ್ಣ ಬಹಿರಂಗ ಪಡಿಸಲಿ
ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಮಾಡಿರುವ ಶೇ. 40 ಕಮಿಷನ್ ಆರೋಪ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸರಕಾರದ ಮೇಲೆ ಕಮಿಷನ್ ಆರೋಪ ಮಾಡಲು ಕಾಂಗ್ರೆಸ್‌ನಿಂದ ಅವರೆಷ್ಟು ಕಮಿಷನ್ ತೆಗೆದುಕೊಂಡಿದ್ದಾರೆ ಎಂಬುದನ್ನು ಮೊದಲು ಬಹಿರಂಗ ಪಡಿಸಲಿ ಎಂದರು.