Advertisement
ಶಾಂತಿಗೋಡು ಗ್ರಾಮದ ವೀರಮಂಗಲ – ಕೈಲಾಜೆ ಸಂಪರ್ಕ ರಸ್ತೆಯ ಸ್ಥಿತಿ ಉತ್ತು ಬಿಟ್ಟ ಗದ್ದೆಯಂತಾಗಿದೆ. ವಾಹನ ಸಂಚಾರ ಬಿಡಿ ನಡೆದಾಡಲೂ ಕಷ್ಟ ಪಡುವಂತಹ ಸ್ಥಿತಿಯಲ್ಲಿದೆ. ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಿಂದ ಒಂದು ಕಿ.ಮೀ. ದೂರವಿರುವ ಕೈಲಾಜೆ ಪ್ರದೇಶವನ್ನು ಒಂದು ಕಡೆ ಬೃಹತ್ ರಕ್ಷಿತಾರಣ್ಯ ಇನ್ನೊಂದೆಡೆ ಕುಮಾರಧಾರಾ ನದಿ ಆವರಿಸಿಕೊಂಡಿದ್ದು, ಸುಮಾರು ಇಪ್ಪತ್ತಕ್ಕೂ ಹೆಚ್ಚು ಜನವಸತಿ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಯಾರೂ ಮುಂದಾಗದಿರುವುದು, ದಾರಿದೀಪ, ಕುಡಿಯುವ ನೀರಿನ ಸಂಪರ್ಕ ಕಲ್ಪಿಸದೇ ಇರುವುದು ಈ ಭಾಗದ ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರಸ್ತುತ ಜಿ.ಪಂ.ಅಧ್ಯಕ್ಷರಾದ ಮೀನಾಕ್ಷಿ ಶಾಂತಿಗೋಡು ಅವರು ಪ್ರತಿನಿಧಿಸುವ ಪಾಣಾಜೆ ಜಿ.ಪಂ. ಕ್ಷೇತ್ರಕ್ಕೆ ಈ ಭಾಗ ಒಳಗೊಂಡಿದೆ. ಜಿ.ಪಂ.ಅಧ್ಯಕ್ಷರು ಹಾಗೂ ಇತರ ಜನಪ್ರತಿನಿಧಿಗಳು, ಶಾಸಕರು ಈ ಸಮಸ್ಯೆಗೆ ಇನ್ನಾದರೂ ಸ್ಪಂದಿಸಬೇಕಿದೆ. ಬ್ಯಾನರ್‌ನಲ್ಲಿ ಹೀಗಿದೆ!
ಜನಪ್ರತಿನಿಧಿಗಳೇ ಶಾಶ್ವತ ಮತದಾನ ಬಹಿಷ್ಕಾರ. ನಮ್ಮ ವಸತಿ ಪ್ರದೇಶಕ್ಕೆ ಮೂಲ ಸೌಕರ್ಯಗಳಾದ ದಾರಿದೀಪ, ಕುಡಿಯುವ ನೀರು ಹಾಗೂ ಡಾಮಾರು ರಸ್ತೆಯನ್ನು ಒದಗಿಸದೆ ಇಲ್ಲಿಯವರೆಗೆ ಕೇವಲ ಪೊಳ್ಳು ಆಶ್ವಾಸನೆಗಳನ್ನು ನೀಡುತ್ತಾ ಬಂದಿರುವ ಸ್ಥಳೀಯ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಹಾಗೂ ಸ್ಥಳೀಯ ಶಾಸಕರಿಗೆ ಧಿಕ್ಕಾರ. ಜನಪ್ರತಿನಿಧಿಗಳೇ ಇನ್ನು ಮುಂದೆ ನಮ್ಮ ಬಳಿಗೆ ಮತಯಾಚನೆಗೆ ಬರಬೇಡಿ.
– ನಿವಾಸಿಗಳು ಕೈಲಾಜೆ- ಕೊಯಕ್ಕುಡೆ – ವೀರಮಂಗಲ