ವಿಶೇಷ ವರದಿ – ಆಲಂಕಾರು: ಕೊಯಿಲ ಗ್ರಾಮದ ಗೋಳಿತ್ತಡಿ – ಏಣಿತ್ತಡ್ಕ ರಸ್ತೆ ಕಾಮಗಾರಿ ಮುಗಿದು ಎರಡು ತಿಂಗಳು ಕಳೆಯುವುದರ ಒಳಗೆ ಡಾಮರು ಕಿತ್ತು ಹೋಗಿದ್ದು, ಕಳಪೆ ಕಾಮಗಾರಿಯ ವಿರುದ್ಧ ಜನತೆ ಪ್ರತಿಭಟನೆಗೆ ಸಿದ್ಧರಾಗಿದ್ದಾರೆ. ಹಲವು ವರ್ಷಗಳಿಂದ ಈ ರಸ್ತೆಯನ್ನು ಅಭಿವೃದ್ಧಿಪಡಿಸುವಂತೆ ಜನಪ್ರತಿನಿಧಿಗಳಿಗೆ ಬೇಡಿಕೆ ಸಲ್ಲಿಸಲಾಗುತ್ತಿತ್ತು. ಕೊನೆಗೆ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆ ಯಾದರೂ ಕಾಮಗಾರಿ ಆಮೆಗತಿಯಲ್ಲೇ ಮುಂದುವರಿದಿತ್ತು. ಅಭಿವೃದ್ಧಿಪಡಿಸುವ ನೆಪದಲ್ಲಿ ರಸ್ತೆಯನ್ನು ಅಗೆದು ಹಾಕಿ ತಿಂಗಳುಗಟ್ಟಲೆ ಜಲ್ಲಿಯನ್ನು ಹರಡಿ ಹಾಗೆಯೇ ಬಿಡಲಾಗಿತ್ತು. ಗ್ರಾಮಸ್ಥರು ಪ್ರತಿಭಟನೆಯ ಎಚ್ಚರಿಕೆ ನೀಡಿದಾಗ ಕೊನೆಕ್ಷಣದಲ್ಲಿ ಆತುರದ ಕಾಮಗಾರಿ ಮಾಡಿದ ಕಾರಣ ನೂತನ ರಸ್ತೆ ಹೊಂಡಮಯವಾಗಿದೆ. ಈ ಮೂಲಕ ನೂತನ ರಸ್ತೆಯ ಖುಷಿಯಲ್ಲಿದ್ದ ಜನತೆಗೆ ಸುಗಮ ಸಂಚಾರ ತೊಂದರೆಯಾಗುವ ಆತಂಕ ಎದುರಾಗಿದೆ. ಗೋಳಿತ್ತಡಿ – ನೆಲ್ಯೊಟ್ಟು ತನಕ ಸುಮಾರು 2 ಕಿ.ಮೀ. ದೂರ ರಸ್ತೆಯು ನಬಾರ್ಡ್ ಯೋಜನೆಯಿಂದ 46 ಲಕ್ಷ ರೂ. ವೆಚ್ಚದಲ್ಲಿ ಕಳೆದ ಎಪ್ರಿಲ್ ತಿಂಗಳಲ್ಲಿ ಡಾಮರು ಕಂಡಿತ್ತು. ಇದೀಗ ಮಳೆ ಆರಂಭವಾಗುತ್ತಿದ್ದಂತೆ ಈ ರಸ್ತೆ ಅಲ್ಲಲ್ಲಿ ಕಿತ್ತುಹೋಗಿದ್ದು, ಕೆಸರು ಹೊಂಡವಾಗಿ ಮಾರ್ಪಡಾಗುತ್ತಿದೆ.
ಆರಂಭದಿಂದಲೂ ತೊಂದರೆ
ಏಣಿತ್ತಡ್ಕ ಪರಿಶಿಷ್ಟ ಜಾತಿ ಪಂಗಡದ ಕಾಲನಿ, ಕುದುಲೂರು, ಕೊಲ್ಯ, ಪರಂಗಾಜೆ, ತಿಮರೆಗುಡ್ಡೆ, ನೀಡೇಲು, ಸಬಳೂರು, ಬುಡಲೂರು ಪ್ರದೇಶಗಳ 500ಕ್ಕೂ ಹೆಚ್ಚು ಕುಟುಂಬಗಳು ಉಪಯೋಗಕ್ಕಿರುವ ಮತ್ತು ಸರಕಾರಿ ಶಾಲೆ, ಅಂಗನವಾಡಿ ಕೇಂದ್ರ, ಭಜನ ಮಂದಿರ, ಮಸೀದಿಗಳಿಗೆ ಸಂಪರ್ಕ ಕಲ್ಪಿಸುವ ಬಹೂಪಯೋಗಿ ರಸ್ತೆಯಿದು.
ಡಾಮರು ಕಾಮಗಾರಿಗೆ ಮುನ್ನ ಮಣ್ಣಿನ ಕಾಮಗಾರಿ ನಡೆದ ಬಳಿಕ ದೊಡ್ಡ ಗಾತ್ರದ ಜಲ್ಲಿಗಳನ್ನು ಹರವಿ ಎರಡು ತಿಂಗಳ ಕಾಲ ಹಾಗೆಯೇ ಬಿಡಲಾಗಿತ್ತು. ಇದರಿಂದ ರಸ್ತೆ ಸಂಚಾರವೇ ದುಸ್ತರವಾಗಿ, ಗ್ರಾಮಸ್ಥರು ಪ್ರತಿಭಟನೆಗೆ ಮುಂದಾಗಿದ್ದರು. ಕೆಲವು ದಿನಗಳ ಬಳಿಕ ಒಂದೇ ದಿನದಲ್ಲಿ 1.30 ಕಿ.ಮೀ. ಡಾಮರು ಕಾಮಗಾರಿ ಮುಗಿಸಲಾಯಿತು. ತರಾತುರಿಯಲ್ಲಿ ಕೆಲಸ ಮಾಡಿದ್ದರಿಂದಲೇ ಕಳಪೆ ಕಾಮಗಾರಿಯಾಗಿ, ಡಾಮರು ಕಿತ್ತುಹೋಗಿದೆ ಎನ್ನುವುದು ಸ್ಥಳೀಯರ ಆರೋಪ.
ಸ್ಥಳೀಯರ ಭವಿಷ್ಯ ನಿಜವಾಯಿತು
ಕಾಮಗಾರಿ ಆರಂಭದಲ್ಲಿ ಡಾಮರು ಮಾಡುವ ಕೆಲವು ಮಾನದಂಡಗಳನ್ನು ಪಾಲಿಸಿಲ್ಲ ಎನ್ನುವ ಆರೋಪವೂ ವ್ಯಕ್ತವಾಗಿತ್ತು. ಡಾಮರು ತೆಳುವಾಗಿದೆ. ಇದು ಹೆಚ್ಚು ದಿನ ಬಾಳಿಕೆ ಬರುವುದಿಲ್ಲ ಎನ್ನುವ ಅನುಮಾನವನ್ನು ಸ್ಥಳೀಯರು ವ್ಯಕ್ತಪಡಿಸಿದ್ದರು. ಕಾಮಗಾರಿ ನಡೆಯುವ ಸಂದರ್ಭ ಗುಣಮಟ್ಟದ ಬಗ್ಗೆ ಸಂಬಂಧಪಟ್ಟ ಎಂಜಿನಿಯರ್ ಅವರನ್ನು ಪ್ರಶ್ನಿಸಿದ್ದರು. ಆದರೆ, ಸಮರ್ಪಕ ಉತ್ತರ ಸಿಕ್ಕಿರಲಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಕಳಪೆ ಕಾಮಗಾರಿಗೆ ಎಂಜಿನಿಯರ್ ಮತ್ತು ಗುತ್ತಿಗೆದಾರರು ನೇರ ಕಾರಣ ಎಂದು ಆರೋಪಿಸಿ, ಸಂಬಂಧಪಟ್ಟವರಿಗೆ ದೂರು ನೀಡಲು ಸ್ಥಳೀಯರು ಮುಂದಾಗಿದ್ದಾರೆ.
ಸತ್ಯಕ್ಕೆ ದೂರ
ರಸ್ತೆ ಕಾಮಗಾರಿ ಮುಗಿದಿದೆಯಾದರೂ ಗುತ್ತಿಗೆದಾರನಿಗೆ ಇನ್ನೂ ಬಿಲ್ ಪಾವತಿಸಿಲ್ಲ. ಕಾಮಗಾರಿ ಕೊನೆಕ್ಷಣದಲ್ಲಿ ಆಗಿರುವುದರಿಂದ ಮಳೆ ಬಂದು ಬಹಳಷ್ಟು ಸಮಸ್ಯೆಯಾಗಿದೆ. ಕಾಮಗಾರಿಯ ವೇಳೆ ಮಳೆ ಸುರಿದಿರುವುದು ಡಾಮರು ಕಿತ್ತು ಹೋಗಲು ಕಾರಣವಾಗಿದೆ. ಕಾಮಗಾರಿ ಕಳಪೆಯಾಗಿದೆ ಎಂಬ ಆರೋಪ ಸತ್ಯಕ್ಕೆ ದೂರವಾಗಿದೆ. ಮಳೆ ನಿಂತ ತತ್ ಕ್ಷಣ ತೇಪೆ ಕಾರ್ಯವನ್ನು ಮಾಡಲಾಗುವುದು.
– ಸಂದೀಪ್, ಪಂಚಾಯತ್ ರಾಜ್ ಕಿರಿಯ ಎಂಜಿನಿಯರ್