Advertisement

ಗಾಂಧಿನಗರ-ಸುದೆಕಾರು-ಕುರ್ಲೊಟ್ಟು ರಸ್ತೆಗೆ ಅಭಿವೃದ್ಧಿ ಭಾಗ್ಯವಿಲ್ಲ

02:45 AM Jun 28, 2018 | Karthik A |

ವೇಣೂರು: ಸುಮಾರು 50 ವರ್ಷಗಳ ಹಿಂದೆ ಗ್ರಾಮಸ್ಥರೇ ಸೇರಿ ನಿರ್ಮಿಸಿದ ಗಾಂಧಿನಗರ-ಸುದೆಕಾರು-ಕುರ್ಲೊಟ್ಟು ರಸ್ತೆಗೆ ಇಂದಿಗೂ ಅಭಿವೃದ್ಧಿ ಯೋಗ ಕೂಡಿ ಬಂದಿಲ್ಲ. ಇದೀಗ ರಸ್ತೆ ಕೆಸರುಗದ್ದೆಯಂತಾಗಿದ್ದು, ಶಾಲಾ, ಕಾಲೇಜು ವಿದ್ಯಾರ್ಥಿಗಳು, ರೈತರು ತೀರಾ ಸಂಕಷ್ಟ ಅನುಭವಿಸುವಂತಾಗಿದೆ.

Advertisement

300ಕ್ಕೂ ಅಧಿಕ ಕುಟುಂಬ
ವೇಣೂರು ಗ್ರಾ.ಪಂ. ವ್ಯಾಪ್ತಿಯ ಗಾಂಧಿನಗರದಿಂದ ಸುದೆಕಾರು ಮಾರ್ಗ ವಾಗಿ ಹೊಸಂಗಡಿ ಗ್ರಾ.ಪಂ. ವ್ಯಾಪ್ತಿಯ ಕುರ್ಲೊಟ್ಟುವನ್ನು ಸುಮಾರು 3 ಕಿ.ಮೀ. ಅಂತರದ ಈ ರಸ್ತೆಯನ್ನು ಎರಡೂ ಗ್ರಾ.ಪಂ. ವ್ಯಾಪ್ತಿಯ ಸುಮಾರು 300ಕ್ಕೂ ಅಧಿಕ ಕುಟುಂಬಗಳು ಆಶ್ರಯಿಸುವೆ.

ಸಾಮಗ್ರಿಗಳ ಸಾಗಾಟ ಕಷ್ಟ
ಇಲ್ಲಿಂದ ನೂರಾರು ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ತೆರಳುವವರಿದ್ದಾರೆ. ಕಷ್ಟಪಟ್ಟು ವಾಹನಗಳು ಇಲ್ಲಿಗೆ ಬರುತ್ತಿದ್ದರೆ, ನಡೆದು ಹೋಗುವ ವಿದ್ಯಾರ್ಥಿಗಳ ಕಷ್ಟ ದೇವರಿಗೆ ಪ್ರೀತಿ. ಮಳೆಗಾಲದಲ್ಲಿ ರಿಕ್ಷಾಗಳೂ ಈ ರಸ್ತೆಗೆ ಬರಲು ಹಿಂದೇಟು ಹಾಕುತ್ತಿದ್ದು, ರೈತರು ದಿನ ಬಳಕೆ ಸಾಮಗ್ರಿಗಳನ್ನು, ಕೃಷಿ ಗೊಬ್ಬರವನ್ನು ಹೊತ್ತುಕೊಂಡು ಕೊಂಡೊಯ್ಯಬೇಕಾದ ಪರಿಸ್ಥಿತಿ ಇದೆ.

ಮನವಿಗಳಿಗೆ ಲೆಕ್ಕವಿಲ್ಲ
ಈ ರಸ್ತೆ ದುರಸ್ತಿಗೆ ಆಗ್ರಹಿಸಿ ಸಂಸದರಿಗೆ, ಶಾಸಕರಾಗಿದ್ದ ಕೆ. ವಸಂತ ಬಂಗೇರರಿಗೆ, ಜಿ.ಪಂ., ತಾ.ಪಂ. ಸದಸ್ಯರಿಗೆ ಲಿಖಿತವಾಗಿ ಹಲವು ಮನವಿ ನೀಡಲಾಗಿದೆ. ಈ ಸಂದರ್ಭ ಸಿಕ್ಕಿದ ಭರವಸೆ ಈವರೆಗೆ ಈಡೇರಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ. ಪ್ರತೀ ಮಳೆಗಾಲ ತುರ್ತು ದುರಸ್ತಿ ನಡೆಸಿ ಎಂದು ಗ್ರಾಮಸ್ಥರು ಪಂ.ಗೆ ಮನವಿ ನೀಡುವುದು ಮಾಮೂಲಿ ಎಂಬಂತಾಗಿದೆ. 2017ರಲ್ಲಿ ಗಾಂಧಿನಗರದಿಂದ ಸುಮಾರು 100 ಮೀಟರ್‌ಗೆ ಕಾಂಕ್ರೀಟ್‌ ಹಾಕಲಾಗಿದೆ.

ಪ್ರತಿಭಟನೆಯೂ ನಡೆಸಿದ್ದರು
ಈ ರಸ್ತೆ ದುರಸ್ತಿಗಾಗಿ ಗ್ರಾಮಸ್ಥರು ವೇಣೂರು ಗ್ರಾ.ಪಂ. ಮುಂದೆ ಪ್ರತಿಭಟನೆ ನಡೆಸಿದ್ದರು. ಆಗ ಆಡಳಿತ ವರ್ಗ ಪಂ.ನಲ್ಲಿ ಅನುದಾನವಿಲ್ಲದ ಕಾರಣ ಶಾಸಕರಿಗೆ ಮನವಿ ನೀಡುವುದಾಗಿ ಭರವಸೆ ನೀಡಿತ್ತು. ರಸ್ತೆ ಕೆಸರುಮವಾಗಿರುವ ಕಾರಣ ವಾಹನ ಸಂಚಾರ ಕಷ್ಟವಾಗುತ್ತಿದೆ. ಗ್ರಾಮಸ್ಥರಿಗೆ ಅನಾರೋಗ್ಯ ಕಾಡಿದರೆ ದೇವರೇ ಗತಿ. ಈ ರಸ್ತೆ ದುರಸ್ತಿಗೆ ಆಗ್ರಹಿಸಿ ಶಾಸಕರು, ಸಂಸದರು, ಜಿ.ಪಂ. ಸದಸ್ಯರು ಸಹಿತ ಸ್ಥಳೀಯ ಜನಪ್ರತಿನಿಧಿಗಳಿಗೆ ಲಿಖಿತ ಮನವಿ ನೀಡಿದರೂ ಅಭಿವೃದ್ಧಿ ಕಾರ್ಯ ನಡೆದಿಲ್ಲ. ಮಣ್ಣಿನ ಈ ರಸ್ತೆಯಿಂದ ಮಳೆಗಾಲದಲ್ಲಿ ನಡೆದಾಡಲು ಅಸಾಧ್ಯವಾಗಿದೆ ಎಂದು ಸುದೆಕಾರು ಗ್ರಾಮದ ಆನಂದ ಪೂಜಾರಿ ಅಳಲು ತೋಡಿಕೊಂಡಿದ್ದಾರೆ.

Advertisement

50 ವರ್ಷ ಇತಿಹಾಸ
ಸುಮಾರು 50 ವರ್ಷಗಳ ಹಿಂದೆ ಗ್ರಾಮಸ್ಥರೇ ಸೇರಿ ಗಾಂಧಿನಗರ-ಸುದೆಕಾರ್‌-ಹೇಟಾವು-ಕುರ್ಲೊಟ್ಟು ಸಂಪರ್ಕದ ಸುಮಾರು 3 ಕಿ.ಮೀ. ರಸ್ತೆಯನ್ನು ರಚಿಸಿದ್ದಾರೆ. ಈ ರಸ್ತೆ ಡಾಮರು ಹಾಗೂ ಕೆಲವೆಡೆ ಕಾಂಕ್ರೀಟ್‌ ಕಾಮಗಾರಿ ನಡೆಸಿ ಎಂದು ಅಂದಿನಿಂದ ಇಂದಿನವರೆಗೂ ಮನವಿ ನೀಡು ತ್ತಲೇ ಬಂದಿದ್ದು, ಅಭಿವೃದ್ಧಿ ಮರೀಚಿಕೆಯಾಗಿಯೇ ಉಳಿದಿದೆ. ಈ ರಸ್ತೆ ಆರಂಬೋಡಿ ಗ್ರಾ.ಪಂ. ವ್ಯಾಪ್ತಿಯ ಗುಂಡೂರಿ ಗ್ರಾಮಕ್ಕೂ ನೇರ ಸಂಪರ್ಕ ಹೊಂದಿದೆ.

ರಸ್ತೆಅಭಿವೃದ್ಧಿ
ಗಾಂಧಿನಗರ-ಸುದೆಕಾರು ರಸ್ತೆ ಅಭಿವೃದ್ಧಿ ಬಗ್ಗೆ ಮನವಿ ಬಂದಿದೆ. ಸರಕಾರದಿಂದ ಅನುದಾನ ದೊರೆತ ಕೂಡಲೇ ಈ ರಸ್ತೆಯ ಅಭಿವೃದ್ಧಿಗೆ ಚಾಲನೆ ನೀಡಲಾಗುವುದು.
– ಹರೀಶ್‌ ಪೂಂಜ, ಶಾಸಕರು

ಗ್ರಾಮಸಭೆಯಲ್ಲಿ ನಿರ್ಣಯ
ಗಾಂಧಿನಗರ ರಸ್ತೆಗೆ ಈಗಾಗಲೇ NREG ಯೋಜನೆಯಡಿ 100 ಮೀ.ನಷ್ಟು ಕಾಂಕ್ರೀಟ್‌ ಹಾಕಲಾಗಿದೆ. ಗ್ರಾಮಸ್ಥರ ಸಹಕಾರದಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಕಾಮಗಾರಿ ಮುಂದುವರಿಸಬಹುದು. ಗ್ರಾಮಸಭೆಯಲ್ಲಿ ನಿರ್ಣಯ ಕೈಗೊಂಡು ಶಾಸಕರಿಗೆ ನೀಡುತ್ತೇವೆ.
– ಅರುಣ್‌ ಕ್ರಾಸ್ತ, ಉಪಾಧ್ಯಕ್ಷರು, ವೇಣೂರು  ಗ್ರಾ.ಪಂ. 

— ಪದ್ಮನಾಭ ವೇಣೂರು

Advertisement

Udayavani is now on Telegram. Click here to join our channel and stay updated with the latest news.

Next