Advertisement

ತೋಡಿನಂತಾದ ಅರಂತೋಡು –ಎಲಿಮಲೆ ರಸ್ತೆ

03:10 AM Jul 10, 2018 | Team Udayavani |

ಅರಂತೋಡು: ಅರಂತೋಡು ಮಾಣಿ-ಮೈಸೂರು ರಾಜ್ಯ ಹೆದ್ದಾರಿಯಿಂದ ಸಂಪರ್ಕ ಕಲ್ಪಿಸುವ ಅರಂತೋಡು-ಅಡ್ತಲೆ-ಮರ್ಕಂಜ-ಎಲಿಮಲೆ ಲೋಕೋಪಯೋಗಿ (PWD) ರಸ್ತೆ ಸಂಪೂರ್ಣ ಕೆಸರುಮಯವಾಗಿದ್ದು, ಈ ಮಾರ್ಗವಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆರಳುವ ಭಕ್ತರ ಸಹಿತ ಇತರ ವಾಹನ ಚಾಲಕರೂ ತೊಂದರೆಗೆ ಒಳಗಾಗಿದ್ದಾರೆ. ಇಲಾಖೆಯವರು 8 ಲಕ್ಷ ರೂ. ಅನುದಾನದಲ್ಲಿ ಜನವರಿ ತಿಂಗಳಿನಲ್ಲಿ ರಸ್ತೆಯ ಎರಡೂ ಬದಿಗಳಿಗೆ ಮಣ್ಣು ಹಾಕಿ ಸಮತಟ್ಟು ಮಾಡಿದ್ದರು. ಈ ಮಣ್ಣು ಸಂಪೂರ್ಣ ಕೆಸರಾಗಿ ಪರಿವರ್ತನೆಗೊಂಡಿದೆ. ಇದರಲ್ಲಿ ಚಾಲಕರು ವಾಹನ ಚಲಾಯಿಸಲು ಹರಸಹಾಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಗೂಗಲ್‌ ನಲ್ಲಿ ಮಾಹಿತಿ ಲಭ್ಯ
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯಕ್ಕೆ ಪ್ರಯಾಣಿಸಲು ಅತೀ ಹತ್ತಿರದ ರಸ್ತೆ ಇದಾಗಿದೆ ಎಂದು ಗೂಗಲ್‌ ನಲ್ಲಿ ಮಾಹಿತಿ ಇದೆ. ಈ ಕಾರಣದಿಂದ ಮಡಿಕೇರಿ, ಮೈಸೂರು, ಮಂಡ್ಯ, ಬೆಂಗಳೂರು ಭಾಗದ ಭಕ್ತರು ತಲಕಾವೇರಿಗೆ ಹೋಗಿ ಅಲ್ಲಿಂದ ಈ ರಸ್ತೆಯ ಮೂಲಕ ಕುಕ್ಕೆ ಸುಬ್ರಹ್ಮಣ್ಯವನ್ನು ಸೇರುತ್ತಾರೆ. ಅರಂತೋಡು- ಅಡ್ತಲೆ-ಮರ್ಕಂಜ-ಎಲಿಮಲೆ ರಸ್ತೆ, ಸುಳ್ಯ-ಸುಬ್ರಹ್ಮಣ್ಯ ರಸ್ತೆಯನ್ನು ಎಲಿಮಲೆ ಎನ್ನುವಲ್ಲಿ ಸಂಪರ್ಕಿಸುತ್ತದೆ. ಸುಳ್ಯ ತಾಲೂಕು ಕೇಂದ್ರಕ್ಕೆ ತೆರಳಿ ಸುಳ್ಯ-ಸುಬ್ರಹ್ಮಣ್ಯ ರಸ್ತೆಯ ಮೂಲಕ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಪ್ರಯಾಣಿಸಿದರೆ 13 ಕಿ.ಮೀ. ಹೆಚ್ಚು ದೂರವಾಗುತ್ತದೆ. ಅರಂತೋಡು- ಅಡ್ತಲೆ- ಮರ್ಕಂಜ ಎಲಿಮಲೆ ರಸ್ತೆ 13 ಕಿ.ಮೀ. ಉಳಿಸುತ್ತದೆ. ಇದರಿಂದ ಭಕ್ತರ ಸಮಯ, ವಾಹನದ ಇಂಧನ, ಶ್ರಮ ಉಳಿತಾಯವಾಗುತ್ತದೆ. 


ನಿರ್ಲಕ್ಷ್ಯ ಸಲ್ಲ

ಅರಂತೋಡು – ಎಲಿಮಲೆ ಸುಬ್ರಹ್ಮಣ್ಯ ಸಂಪರ್ಕ ರಸ್ತೆಯು ಅತ್ಯಂತ ಮುಖ್ಯ ರಸ್ತೆಯಾಗಿದೆ. ಈ ರಸ್ತೆ ಅಗತ್ಯವಾಗಿ ಮೇಲ್ದರ್ಜೆಗೆ ಏರಬೇಕಿದೆ. ಮೇಲ್ದರ್ಜೆಗೆ ಏರಿಸಲು ಲೋಕೋಪಯೋಗಿ ಇಲಾಖೆಯು ಈ ತನಕ ಯಾವುದೇ ಪ್ರಸ್ತಾವನೆಯನ್ನು ಸಲ್ಲಿಸಿಲ್ಲ ಎನ್ನುವುದು ಅಧಿಕಾರಿಗಳ ನಿರ್ಲಕ್ಷ್ಯವೆನ್ನಬಹುದು. ರಸ್ತೆಯನ್ನು ಮೇಲ್ದರ್ಜೆಗೇರಿಸಲು ಜನಪ್ರತಿನಿಧಿಗಳು, ಇಲಾಖೆಯ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

23 ವರ್ಷ: ಒಮ್ಮೆ ಡಾಮರು
ಸುಮಾರು 23 ವರ್ಷಗಳ ಹಿಂದೆ ಈ ರಸ್ತೆ ಡಾಮರು ಕಂಡಿತ್ತು. ಆ ಬಳಿಕ ಒಂದು ಸಲ ಮಾತ್ರ ಡಾಮರು ಹಾಕಲಾಗಿದೆ. ಹಿಂದೆ ಬೆರಳೆಣಿಕೆಯ ವಾಹನ ಸಂಚಾರ ಇತ್ತು. ಈಗ ಹೆಚ್ಚಾಗಿದೆ. ಈ ರಸ್ತೆಯಲ್ಲಿ ಸಿಗುವ ವೈ.ಎಂ.ಕೆ. ಚಡಾವು ಅತ್ಯಂತ ದೊಡ್ಡ ಏರಿಕೆಯಾಗಿದ್ದು, ಹಲವು ಏರಿಳಿತಗಳಿವೆ. ಅನೇಕ ಮೋರಿಗಳಿದ್ದು, ಅವುಗಳು ಕಡಿದಾಗಿವೆ. ಹೆಚ್ಚು ತಿರುವುಗಳು, ಹಂಪ್‌ ಗಳಿರುವುದರಿಂದ ವಾಹನಗಳನ್ನು ಓವರ್‌ ಟೇಕ್‌ ಮಾಡುವುದೂ ಕಷ್ಟ. ಈ ಕಾರಣದಿಂದ ಇಲ್ಲಿ ಅಪಘಾತಗಳು ಹೆಚ್ಚುತ್ತಿವೆ.

ಮೇಲ್ದರ್ಜೆ ಪ್ರಸ್ತಾವನೆ ಇಲ್ಲ
ಈ ರಸ್ತೆ ಕಿರಿದಾಗಿದ್ದ ಹಿನ್ನೆಲೆಯಲ್ಲಿ ಜನವರಿ ತಿಂಗಳಿನಲ್ಲಿ ರಸ್ತೆಯ ಎರಡೂ ಬದಿಗಳಿಗೆ 8 ಲಕ್ಷ ರೂ. ಅನುದಾನದಲ್ಲಿ ಮಣ್ಣು ಹಾಕಿ ಸಮತಟ್ಟು ಮಾಡಲಾಗಿದೆ. ಇಲ್ಲಿ ಮಣ್ಣು ಕೆಸರಾಗಿ ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ ಎನ್ನುವ ಕುರಿತು ನಮಗೆ ದೂರು ಬಂದಿದೆ. ಇದನ್ನು ಸರಿ ಮಾಡುವ ಕಾರ್ಯ ನಡೆಯುತ್ತಿದೆ. ರಸ್ತೆಯನ್ನು ಮೇಲ್ದರ್ಜೆಗೆ ಏರಿಸುವ ಪ್ರಸ್ತಾವನೆ ಇಲ್ಲ.
– ಹರೀಶ್‌, PWD ಎಂಜಿನಿಯರ್‌

Advertisement

ಮೇಲ್ದರ್ಜೆಗೆ ಏರಲೇಬೇಕು
ಅರಂತೋಡು – ಎಲಿಮಲೆ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ತೆರಳುವ ರಸ್ತೆ ಇದು. ಲೋಕೋಪಯೋಗಿ ಇಲಾಖೆಯ ಅತ್ಯಂತ ಹಳೆಯ ರಸ್ತೆ ಇದಾಗಿದ್ದು, ಇಲ್ಲಿ ವಾಹನ ದಟ್ಟಣೆ ಜಾಸ್ತಿಯಾಗಿರುವ ಕಾರಣ ರಸ್ತೆಯನ್ನು ಮೇಲ್ದರ್ಜೆಗೆ ಏರಿಸುವ ಕಾರ್ಯ ಅಗತ್ಯವಾಗಿ ಆಗಲೇಬೇಕು. ರಸ್ತೆಯ ಎರಡೂ ಬದಿಗಳಲ್ಲಿ ಇನ್ನೂ ಒಂದೊಂದು ಮೀಟರಿನಷ್ಟು ಡಾಮರು ಹಾಕಬೇಕು.
– ಕೇಶವ ಅಡ್ತಲೆ, ಅರಂತೋಡು ಗ್ರಾ.ಪಂ. ಸದಸ್ಯರು

— ತೇಜೇಶ್ವರ್‌ ಕುಂದಲ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next