ಬೆಳ್ತಂಗಡಿ: ಬಿ.ಸಿ. ರೋಡ್ – ಕಡೂರು ರಾ.ಹೆ.ಯ ಬಿ.ಸಿ. ರೋಡ್ – ಚಾರ್ಮಾಡಿ ಮಧ್ಯೆ ಹತ್ತಾರು ಕಡೆಗಳಲ್ಲಿ ರಸ್ತೆಯಲ್ಲಿ ಬೃಹದಾಕಾರದ ಹೊಂಡಗಳು ಸೃಷ್ಟಿಯಾಗಿದ್ದರೂ ಯಾರೂ ಗಮನಹರಿಸುತ್ತಿಲ್ಲ. ಎಲ್ಲರೂ ಹೆದ್ದಾರಿಯನ್ನು ಚತುಷ್ಪಥಗೊಳಿಸುತ್ತೇವೆ ಎಂದು ಮಾತನಾಡುತ್ತಾರೆಯೇ ಹೊರತು ಹೊಂಡ ಮುಚ್ಚುವ ಕುರಿತು ಚಕಾರವೆತ್ತುತ್ತಿಲ್ಲ. ಹೆದ್ದಾರಿಯು ಬೆಳ್ತಂಗಡಿ ಹಾಗೂ ಬಂಟ್ವಾಳ ನಗರ ಸ್ಥಳೀಯಾಡಳಿತ ಸಹಿತ ಸುಮಾರು 10 ಗ್ರಾ.ಪಂ. ವ್ಯಾಪ್ತಿಯಲ್ಲಿ ಹಾದು ಹೋಗುತ್ತಿದ್ದು, ಸ್ಥಳೀಯಾಡಳಿತಗಳು ದುರಸ್ತಿಗಾಗಿ ಇಲಾಖೆ ಮೇಲೆ ಒತ್ತಡ ಹೇರುತ್ತಿಲ್ಲವೇ ಎಂಬ ಸಂಶಯ ಜನರನ್ನು ಕಾಡತೊಡಗಿದೆ. ಬಂಟ್ವಾಳ ನಗರ ವ್ಯಾಪ್ತಿಯಲ್ಲಿ ಬಂಟ್ವಾಳ ಬೈಪಾಸ್, ಜಕ್ರಿಬೆಟ್ಟು ಭಾಗದಲ್ಲಿ ಹೆದ್ದಾರಿ ಯಲ್ಲಿ ಹೊಂಡಗಳಿದ್ದು, ಬೆಳ್ತಂಗಡಿಯ ಚರ್ಚ್ ರೋಡ್, ಸಂತೆಕಟ್ಟೆ, ಮೂರು ಮಾರ್ಗ, ಬಸ್ ನಿಲ್ದಾಣದ ಬಳಿ, ವಗ್ಗ, ಪುಂಜಾಲಕಟ್ಟೆ, ಗುರುವಾಯನಕೆರೆ, ಲಾೖಲ, ಉಜಿರೆ, ನಿಡಿಗಲ್, ಮುಂಡಾಜೆ, ಚಿಬಿದ್ರೆ, ಕಕ್ಕಿಂಜೆ, ಬೀಟಿಗೆ ಹೀಗೆ ಹತ್ತಾರು ಕಡೆಗಳಲ್ಲಿ ಹೊಂಡ ಸೃಷ್ಟಿಯಾಗಿದ್ದು, ವಾಹನಗಳು ಎದ್ದು – ಬಿದ್ದು ಸಾಗಬೇಕಾದ ಸ್ಥಿತಿ ಇದೆ.
ಸಾಗುವುದೇ ಕಷ್ಟ
ಹೆದ್ದಾರಿಯ ವಗ್ಗ – ಮಣಿ ಹಳ್ಳದ ಮಧ್ಯೆ ವಾಹನಗಳು ಸಾಗುವುದೇ ಕಷ್ಟ ಎಂಬಂತಹ ಸ್ಥಿತಿ ಇದೆ. ಏಕಕಾಲದಲ್ಲಿ ಎರಡು ಘನ ವಾಹನಗಳು ಮುಖಾಮುಖೀಯಾದರೆ ಒಂದು ವಾಹನ ನಿಧಾನವಾಗಿ ಚಲಿಸಿದ ಬಳಿಕ ಮತ್ತೂಂದು ವಾಹನ ಸಾಗುತ್ತದೆ. ರಸ್ತೆ ಬದಿ ಮಣ್ಣು ತುಂಬಿಕೊಂಡಿದ್ದು, ವಾಹನ ರಸ್ತೆಯಿಂದ ಇಳಿದರೆ ಹೂತು ಹೋಗುವುದು ಗ್ಯಾರಂಟಿ ಎಂಬ ಸ್ಥಿತಿ ಇದೆ.
ಖಾಸಗಿ ಜಮೀನಿನ ಬೇಲಿಗಳು ಹೆದ್ದಾರಿಗೆ ತಾಗಿಕೊಂಡೇ ಇದ್ದು, ಕೆಲವೊಂದೆಡೆ ಬೃಹದಾಕಾರದ ಮರಗಳು ರಸ್ತೆ ಬದಿಯಲ್ಲಿವೆ. ಮಣ್ಣಿಹಳ್ಳದಲ್ಲಿ ರಸ್ತೆ ಕುಸಿದಿದ್ದು, ಕೆಳಗೆ ಕಣಿವೆ ಇದೆ. ಹೀಗಾಗಿ ಈ ಹೆದ್ದಾರಿಯಲ್ಲಿ ಸಾಗುವ ವಾಹನ ಚಾಲಕರು ಜೀವ ಕೈಯಲ್ಲೇ ಹಿಡಿದು ತೆರಳಬೇಕಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಹೆದ್ದಾರಿಯನ್ನು ಮೇಲ್ದರ್ಜೆಗೆ, ಚತುಷ್ಪಥಗೊಳಿಸುವ ಮೊದಲು ರಸ್ತೆಯಲ್ಲಿ ತಾತ್ಕಾಲಿಕ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಬೆಳ್ತಂಗಡಿಯಲ್ಲಿ ಸ್ಥಿತಿ ಶೋಚನೀಯ
ಬೆಳ್ತಂಗಡಿ ನಗರದಲ್ಲೇ ನಾಲ್ಕು ಕಡೆ ಹೆದ್ದಾರಿಯಲ್ಲಿ ಭಾರೀ ಹೊಂಡಗಳಿದ್ದು, ಸ್ಥಳೀಯಾಡಳಿತ ಸಹಿತ ಯಾವ ಜನಪ್ರತಿನಿಧಿಯೂ ಇದರ ದುರಸ್ತಿಗೆ ಮುಂದಾಗುತ್ತಿಲ್ಲ. ಗುರುವಾಯನಕರೆ- ಉಜಿರೆ ಮಧ್ಯೆ ವಾಹ ಸಂಚಾರದ ಒತ್ತಡವೂ ಹೆಚ್ಚಿದ್ದು, ಹೊಂಡಗಳು ಟ್ರಾಫಿಕ್ ಸಮಸ್ಯೆಗೂ ಕಾರಣವಾಗುತ್ತಿವೆ.
ಈ ರಸ್ತೆಯಲ್ಲಿ ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಆಗಮಿಸುವ ಭಕ್ತರು, ಪ್ರವಾಸಿಗರ ಸಂಖ್ಯೆ ಹೆಚ್ಚಿದ್ದು, ಹೊಂಡ ಇರುವುದು ಗಮನಕ್ಕೆ ಬಾರದೆ ತೊಂದರೆಗೆ ಸಿಲುಕುವ ಘಟನೆ ನಡೆಯುತ್ತಲೇ ಇದೆ. ಮಳೆಗಾಲವಾದುದರಿಂದ ಹೊಂಡಗಳಲ್ಲಿ ನೀರು ನಿಂತು ಆಳ ತಿಳಿಯದೆ ಇಳಿದು ಎಷ್ಟೋ ವಾಹನಗಳು ಬಾಕಿಯಾಗುತ್ತಿವೆ. ಮೂರುಮಾರ್ಗದ ಬಳಿ ನಿತ್ಯ ವಾಹನಗಳು ಈ ರೀತಿ ಸಮಸ್ಯೆಗೆ ಸಿಲುಕುತ್ತಿವೆ. ನಿರಂತರ ಮಳೆಯಾಗುತ್ತಿರುವ ಕಾರಣ ಹೊಂಡಗಳಿಗೆ ತೇಪೆ ಹಾಕುವುದು ಕಷ್ಟವಾದರೂ ಡಸ್ಟ್ ಮಿಶ್ರಿತ ಜಲ್ಲಿ ಹಾಕಿ ಹೊಂಡ ಮುಚ್ಚಬಹುದು. ಈ ಕುರಿತು ಬೆಳ್ತಂಗಡಿ ಸ್ಥಳೀಯಾಡಳಿತ ಒತ್ತಡ ಹೇರಿ ಹೊಂಡಕ್ಕೆ ತಾತ್ಕಾಲಿಕ ಪರಿಹಾರ ಕಲ್ಪಿಸಬೇಕಿದೆ.
ದುರಸ್ತಿ ಕಾರ್ಯ
ಪ್ರಸ್ತುತ ರಸ್ತೆಗೆ ನೀರು ಬರದಂತೆ ಚರಂಡಿ ದುರಸ್ತಿಯ ಕಾರ್ಯ ನಡೆಯುತ್ತಿದೆ. ಹೆಚ್ಚಿನ ಹೊಂಡ ಇರುವ ಸ್ಥಳಗಳಲ್ಲಿ ವೆಟ್‌ಮಿಕ್ಸ್ ಹಾಕಿ ಹೊಂಡ ಮುಚ್ಚಲಾಗುತ್ತಿದೆ. ಆದರೆ ಜೋರಾಗಿ ಮಳೆ ಬಂದರೆ ಅದು ಕೂಡ ನಿಲ್ಲುತ್ತಿಲ್ಲ. ಪ್ರಸ್ತುತ ಪುಂಜಾಲಕಟ್ಟೆ ಭಾಗದಲ್ಲಿ ಚರಂಡಿ ಕಾಮಗಾರಿ ನಡೆಯುತ್ತಿದೆ.
– ಸುಬ್ಬರಾಮ ಹೊಳ್ಳ, ಕಾರ್ಯಪಾಲಕ ಎಂಜಿನಿಯರ್, ರಾ.ಹೆ. ಇಲಾಖೆ, ಮಂಗಳೂರು