ಬೆಂಗಳೂರು: ರಾಜಧಾನಿಯಲ್ಲಿ ಇತ್ತೀಚೆಗೆ ಮಳೆ ಅಬ್ಬರ ಹೆಚ್ಚಾದ ಹಿನ್ನೆಲೆಯಲ್ಲಿ ನಗರದಲ್ಲಿ ಮತ್ತೆ ರಸ್ತೆ ಗುಂಡಿಗಳು ಬಾಯ್ತೆರೆಯುತ್ತಿವೆ. ಮತ್ತೂಂದೆಡೆ ಮುಂದಿನ ದಿನಗಳಲ್ಲಿ ಬೆಂಗಳೂರು ಸೇರಿ ರಾಜ್ಯಾದ್ಯಂತ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಈ ಬೆನ್ನಲ್ಲೇ ಬಿಬಿಎಂಪಿ ಹಾಗೂ ಸಂಚಾರ ಪೊಲೀಸರು ಬಾಯ್ತೆರೆದಿರುವ ರಸ್ತೆ ಗುಂಡಿಗಳ ಮುಚ್ಚುವ ಕಾರ್ಯಕೈಗೊಳ್ಳಲು ಮುಂದಾಗಿದ್ದಾರೆ. ಕಳೆದ ಒಂದೂವರೆ ವರ್ಷದಲ್ಲಿ ರಸ್ತೆ ಗುಂಡಿಗೆ ಸುಮಾರು 16ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಸಾರ್ವಜನಿಕ ವಲಯ ಮಾತ್ರವಲ್ಲದೆ, ಹೈಕೋರ್ಟ್ ಕೂಡ ರಸ್ತೆ ಗುಂಡಿಗಳ ಮುಚ್ಚಲು ಬಿಬಿಎಂಪಿಗೆ ತಾಕೀತು ಮಾಡಿತ್ತು.
ಜತೆಗೆ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆಯೂ ನೀಡಿತ್ತು. ಈ ಹಿನ್ನೆಲೆಯಲ್ಲಿ ತ್ವರಿತ ಕಾರ್ಯಾಚರಣೆ ಆರಂಭಿಸಿದ್ದ ಬಿಬಿಎಂಪಿ ಅಧಿಕಾರಿಗಳು, ಕಳೆದ ಒಂದು ವರ್ಷದಲ್ಲಿ ನಗರದಲ್ಲಿ 30 ಸಾವಿರಕ್ಕೂ ಅಧಿಕ ರಸ್ತೆ ಗುಂಡಿಗಳನ್ನು ಗುರುತಿಸಿದ್ದು, ಈ ಪೈಕಿ 24 ಸಾವಿರಕ್ಕೂ ಅಧಿಕ ಗುಂಡಿಗಳನ್ನು ಮುಚ್ಚಿದ್ದಾರೆ. ಇದರೊಂದಿಗೆ ಸಂಚಾರ ಪೊಲೀಸರು ಬಿಬಿಎಂಪಿಯ “ಮೈ ಸ್ಟ್ರೀಟ್’ ಆ್ಯಪ್ ಮೂಲಕ ರಸ್ತೆ ಗುಂಡಿಗಳ ಫೋಟೋ ತೆಗೆದು ಬಿಬಿಎಂಪಿಗೆ ಮಾಹಿತಿ ನೀಡುತ್ತಿದ್ದಾರೆ. ಅದಕ್ಕೆ ಬಿಬಿಎಂಪಿ ಅಧಿಕಾರಿಗಳು ಕೂಡ ಸಕರಾತ್ಮಕವಾಗಿ ಸ್ಪಂದಿಸಿದ್ದು, ರಸ್ತೆ ಗುಂಡಿಗಳನ್ನು ಮುಚ್ಚುತ್ತಿದ್ದಾರೆ. ಕಳೆದ ಆರೇಳು ತಿಂಗಳಿಂದ ಇದುವರೆಗೂ ನಾಲ್ಕು ಸಾವಿರಕ್ಕೂ ಅಧಿಕ ರಸ್ತೆ ಗುಂಡಿಗಳನ್ನು ಸಂಚಾರ ಪೊಲೀಸರು ಗುರುತಿಸಿದ್ದು, ಈ ಪೈಕಿ 3895 ರಸ್ತೆ ಗುಂಡಿಗಳನ್ನು ಮುಚ್ಚಲಾಗಿದ್ದು, 169 ರಸ್ತೆ ಗುಂಡಿಗಳು ಬಾಕಿ ಇವೆ.
ಕಳೆದ ಕೆಲ ದಿನಗಳ ಹಿಂದೆ ನಗರದಲ್ಲಿ ಸುರಿದ ಬಾರಿ ಮಳೆಗೆ ಶಿವಾಜಿನಗರ, ಶಿವಾನಂದ ವೃತ್ತ, ಯಶವಂತಪುರ, ಓಕಳೀಪುರ, ಬಿನ್ನಿಮಿಲ್ ರಸ್ತೆ , ಚಾಮರಾಜಪೇಟೆ, ಸಂಜಯನಗರ, ಪ್ಯಾಲೇಸ್ ಗುಟ್ಟಹಳ್ಳಿ, ಸಂಜಯನಗರ, ಮಂತ್ರಿಮಾಲ್ ರಸ್ತೆ, ಹೆಬ್ಟಾಳ ರಸ್ತೆ, ಸುಂಕದಕಟ್ಟೆ, ಮಾಗಡಿ ರಸ್ತೆ ಸೇರಿ ನಗರದ ಎಲ್ಲಾ ಪ್ರಮುಖ ಹಾಗೂ ಸಣ್ಣ ರಸ್ತೆಗಳಲ್ಲೂ ಗುಂಡಿ ಬಾಯ್ತೆರೆದುಕೊಂಡಿವೆ. ಅದರಲ್ಲೂ ಮಾಗಡಿ ರಸ್ತೆಯ ಬ್ಯಾಡರಹಳ್ಳಿ ಮುಖ್ಯರಸ್ತೆಯಲ್ಲಿ ರಸ್ತೆಗಳು ಬಾಯ್ತೆರೆದು ಕೊಂಡಿದ್ದು, ಧೂಳು ತುಂಬಿಕೊಂಡು ವಾಹನ ಸವಾರರು ಸಂಚರಿಸಲು ಹರಸಾಹಸ ಪಡಬೇಕಾಗಿದೆ. ವಿಧಾನಸಭಾ ಚುನಾವಣೆ ಭದ್ರತೆ ಹಿನ್ನೆಲೆಯಲ್ಲಿ ಕಾರ್ಯದೊತ್ತಡದಲ್ಲಿದ್ದ ಸಂಚಾರ ಪೊಲೀಸರು ಇದೀಗ ಮತ್ತೆ ರಸ್ತೆ ಗುಂಡಿಗಳ ಮುಚ್ಚಿಸುವ ಕಾರ್ಯಕ್ಕೆ ಸನ್ನದ್ಧರಾಗಿದ್ದಾರೆ.
ಈಗಾಗಲೇ ಮೈಸ್ಟ್ರೀಟ್ ಆ್ಯಪ್ ಮೂಲಕ ರಸ್ತೆ ಗುಂಡಿಯ ಫೋಟೋ ತೆಗೆದು, ನಿಖರ ಸ್ಥಳದ ಮಾಹಿತಿ ನೋಂದಾಯಿಸಿ ಬಿಬಿಎಂಪಿಗೆ ಮಾಹಿತಿ ನೀಡಲಾಗುತ್ತಿದೆ. ಈ ಪ್ರಕ್ರಿಯೆಯನ್ನು ಮತ್ತೆ ಮುಂದುವರಿಸುತ್ತಿದ್ದೇವೆ. ಸಂಚಾರ ನಿರ್ವಹಣೆ ಯಲ್ಲಿರುವ ಎಲ್ಲಾ ಸಿಬ್ಬಂದಿಗೆ ಆ್ಯಪ್ ಬಳಸಲು ಸೂಚಿಸಲಾಗಿದೆ. ರಸ್ತೆ ಗುಂಡಿಗಳು ಮುಚ್ಚುವುದರಿಂದ ಅಪಘಾತ ಪ್ರಕರಣಗಳು ಕಡಿಮೆ ಆಗಲಿವೆ. ಜತೆಗೆ ಸುಗಮ ಸಂಚಾರಕ್ಕೂ ಅನುಕೂಲವಾಗಲಿದೆ ಎನ್ನುತ್ತಾರೆ ಸಂಚಾರ ಪೊಲೀಸರು ಮತ್ತೂಂದೆಡೆ ಬಿಬಿಎಂಪಿ ಅಧಿಕಾರಿಗಳು ಕೂಡ ತತ್‌ಕ್ಷಣ ಸ್ಪಂದಿಸುತ್ತಿದ್ದಾರೆ. ಸಣ್ಣ-ಪುಟ್ಟ ರಸ್ತೆ ಗುಂಡಿಗಳನ್ನು ಕಿರಿಯ ಸಿಬ್ಬಂದಿ ಮುಚ್ಚಿಸುತ್ತಿದ್ದಾರೆ. ಒಂದು ವೇಳೆ ದೊಡ್ಡ ಮಟ್ಟದ ಗುಂಡಿಗಳಿದ್ದರೆ ಎಂಜಿನಿಯರ್‌ಗಳೇ ತಮ್ಮನ್ನು ಸಂಪರ್ಕಿಸಿ ಮುಚ್ಚಿಸುತ್ತಿದ್ದಾರೆ ಎಂದು ಹಿರಿಯ ಸಂಚಾರ ಪೊಲೀಸರು ಮಾಹಿತಿ ನೀಡಿದರು.
ಪೊಲೀಸರಿಂದಲೇ ರಸ್ತೆ ಗುಂಡಿಗೆ ಮುಕ್ತಿ: ಈ ಮಧ್ಯೆ ರಸ್ತೆ ಗುಂಡಿಗಳಿಂದ ದೊಡ್ಡ ಮಟ್ಟದಲ್ಲಿ ಸಂಚಾರ ದಟ್ಟಣೆ, ಅಪಘಾತಗಳು ಸಂಭವಿಸುತ್ತಿದ್ದರೆ, ಅಂತಹ ಕಡೆ ಸಂಚಾರ ಪೊಲೀಸರು ಬಿಬಿಎಂಪಿಗೆ ಮಾಹಿತಿ ನೀಡುವುದರ ಜತೆಗೆ, ತುರ್ತಾಗಿ ಸ್ಥಳೀಯರ ನೆರವು ಪಡೆದು ಮಣ್ಣು ಮತ್ತು ಸಿಮೆಂಟ್ ತುಂಬಿಸಿ ತಾತ್ಕಾಲಿಕ ಗುಂಡಿ ಮುಚ್ಚಿಸುತ್ತಿದ್ದಾರೆ ಎಂದು ಸಂಚಾರ ಪೊಲೀಸರು ಹೇಳಿದರು. ಕಳೆದ ಆರೇಳು ತಿಂಗಳಿಂದ ಸಂಚಾರ ಪೊಲೀಸರು 4064 ರಸ್ತೆ ಗುಂಡಿಗಳನ್ನು ಮುಚ್ಚಿಸಿದ್ದು, ಈ ಪೈಕಿ 3895 ಗುಂಡಿಗಳನ್ನು ಮುಚ್ಚಿಸಲಾಗಿದೆ. 169 ಬಾಕಿ ಇದ್ದು, ಅವುಗಳ ಮುಚ್ಚುವ ಕಾರ್ಯ ಸದ್ಯ ಸ್ಥಗಿತಗೊಳಿಸಲಾಗಿತ್ತು. ಚುನಾವಣೆ ಮುಕ್ತಾಯವಾಗಿದ್ದರಿಂದ ಮತ್ತೆ ಗುಂಡಿಗಳ ಮುಚ್ಚುವ ಕಾರ್ಯ ಮುಂದುವರಿಯುವ ಸಾಧ್ಯತೆಯಿದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದರು.
ಒಂದೂವರೆ ತಿಂಗಳಿಂದ ಚುನಾವಣಾ ಕಾರ್ಯದೊತ್ತಡ ದಲ್ಲಿದ್ದ ಸಂಚಾರ ಅಧಿಕಾರಿ-ಸಿಬ್ಬಂದಿ ಇದೀಗ ಕೊಂಚ ರಿಲೀಫ್ ಆಗಿದ್ದು, ಸೋಮವಾರದಿಂದ ಮತ್ತೆ ಸಂಚಾರ ನಿರ್ವಹಣೆಗೆ ಸೂಚಿಸಲಾಗಿದೆ. ಅದೇ ರೀತಿ ರಸ್ತೆ ಗುಂಡಿಗಳನ್ನು ಗುರುತಿಸುವ ಕಾರ್ಯವೂ ನಡೆಯಲಿದೆ.
– ಡಾ. ಎಂ. ಎಂ.ಸಲೀಂ, ಸಂಚಾರ ವಿಭಾಗ ವಿಶೇಷ ಆಯುಕ್ತರು.
– ಮೋಹನ್ ಭದ್ರಾವತಿ