Advertisement
ಇದು, ನಗರದ ಖಾಸಗಿ ಶಾಲೆಗಳ ಸುತ್ತಮುತ್ತಲ ರಸ್ತೆಗಳ ವಾಸ್ತವ ಸ್ಥಿತಿ. ಏಕೆಂದರೆ ಈ ರಸ್ತೆಗಳ ಶೇ.20ರಿಂದ 30ರಷ್ಟು ಜಾಗವನ್ನು ಆಕ್ರಮಿಸಿಕೊಳ್ಳುವುದು ಶಾಲಾ ವಾಹನಗಳು ಮತ್ತು ಮಕ್ಕಳನ್ನು ಕರೆದೊಯ್ಯಲು ಬರುವ ಖಾಸಗಿ ವಾಹನಗಳು.
Related Articles
Advertisement
ಹೀಗಾಗಿ ಆ ಶಾಲಾ ವಾಹನಗಳು ಬೆಳಗ್ಗೆ ಶಾಲೆ ಆರಂಭವಾಗುವ ಒಂದು ಗಂಟೆ ಮೊದಲು ಮತ್ತು ಶಾಲೆ ಬಿಡುವ ಒಂದು ಗಂಟೆ ನಂತರ ರಸ್ತೆಗಳಲ್ಲೇ ನಿಂತು ಮಕ್ಕಳನ್ನು ಕರೆದೊಯ್ಯುವುದು, ಬಿಡುವುದು ಮಾಡುತ್ತವೆ.
ಇದರಿಂದ ಇತರೆ ವಾಹನಗಳ ಸಂಚಾರಕ್ಕೆ ಭಾರೀ ತೊಂದರೆಯಾಗುತ್ತಿದೆ. ಈ ಬಗ್ಗೆ ಸಂಬಂಧಿಸಿದ ಶಾಲಾ ಆಡಳಿತ ಮಂಡಳಿಗೆ ದೂರು ನೀಡಿದರೂ, ಸಾಕಷ್ಟು ಬಾರಿ ದಂಡ ವಿಧಿಸಿದರೂ ಪ್ರಯೋಜನವಾಗಿಲ್ಲ ಎಂದು ಸಂಚಾರ ಪೊಲೀಸರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.
ನಗರದಲ್ಲಿವೇ 500ಕ್ಕೂ ಹೆಚ್ಚು ಶಾಲಾ ವಲಯಗಳು: ಸಂಚಾರ ಪೊಲೀಸ್ ವಿಭಾಗ ಮೂಲಗಳ ಪ್ರಕಾರ ನಗರದಲ್ಲಿ 500ಕ್ಕೂ ಹೆಚ್ಚು ಶಾಲಾ ವಲಯಗಳೆಂದು ಗುರುತಿಸಲಾಗಿದ್ದು, ಪ್ರತಿ ಶಾಲೆಯ 100-200 ಮೀಟರ್ ವ್ಯಾಪ್ತಿ ಶಾಲಾ ವಲಯವಾಗಿರುತ್ತದೆ.
ಈ ವಲಯಗಳಲ್ಲಿ ಸಂಚರಿಸುವ ವಾಹನಗಳ ವೇಗದ ಮಿತಿ ಸಾಮಾನ್ಯವಾಗಿ 15-20 ಕಿ.ಮೀ. ಇರಬೇಕು. ಹಾರ್ನ್ ಮಾಡಬಾರದು ಎಂಬೆಲ್ಲ ನಿಯಮಗಳನ್ನು ರೂಪಿಸಲಾಗಿದೆ. ಆದರೆ, ಇದ್ಯಾವುದು ಪಾಲನೆಯಾಗುತ್ತಿಲ್ಲ. ಏಕಾಏಕಿ ಒಮ್ಮೆಲೆ ಹತ್ತಾರು ಶಾಲಾ ವಾಹನಗಳು ಬಂದು ನಿಲ್ಲತ್ತವೆ. ಕೆಲ ಪೋಷಕರ ಸ್ವಂತ ವಾಹನಗಳಿಂದ ಸಂಚಾರ ದಟ್ಟಣೆ ಹೆಚ್ಚಾಗುತ್ತದೆ.
ಒಂದೆಡೆ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಳ್ಳದ ವಾಹನಗಳು ರಸ್ತೆ ಬದಿ ನಿಲ್ಲುತ್ತವೆ. ಮತ್ತೂಂದೆಡೆ ಶಾಲಾ ಆವರಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಇದ್ದರೂ ಚಾಲಕರು ರಸ್ತೆಯಲ್ಲಿ ನಿಲ್ಲಿಸುತ್ತಾರೆ. ಅದರಿಂದ ನಗರದ ವ್ಯಾಪ್ತಿಯಲ್ಲಿ ಪ್ರತಿಗಂಟೆಗೆ 40-50 ಕಿ.ಮೀ. ವೇಗದಲ್ಲಿ ಸಂಚರಿಸುವ ವಾಹನಗಳು ಕೇವಲ 20-25 ಕಿ.ಮೀ. ವೇಗದಲ್ಲಿ ಚಲಿಸುತ್ತವೆ. ಅದರ ಪರಿಣಾಮ ಶಾಲೆಯ ಸುತ್ತ-ಮುತ್ತ ಸುಮಾರು 2-3 ಕಿ.ಮೀ. ವ್ಯಾಪ್ತಿಯಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತದೆ ಎನ್ನುತ್ತಾರೆ ಸಂಚಾರ ತಜ್ಞರು.
ವಾತಾವರಣ ಕಲುಷಿತ: ಹೆಚ್ಚಿನ ಶಾಲೆಗಳು ಬಹುತೇಕ ನಗರದ ಹೃದಯ ಭಾಗದಲ್ಲೇ ಇರುವುದರಿಂದ ವಾಹನಗಳು ಉಗುಳುವ ಹೊಗೆ ಹಾಗೂ ಶಬ್ದಗಳಿಂದ ಸುತ್ತಮುತ್ತಲ ವಾತಾವರಣ ಕಲುಷಿತವಾಗುತ್ತಿದೆ. ಜತೆಗೆ ಮಕ್ಕಳ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ.
ಸಾಮಾನ್ಯವಾಗಿ ವಾಹನಗಳು ನಿಧಾನವಾಗಿ ಚಲಿಸುವುದರಿಂದ ಆ ನಿಗದಿತ ಪ್ರದೇಶದಲ್ಲಿ ವಾಯು ಮತ್ತು ಶಬ್ಧ ಮಾಲಿನ್ಯ ಹೆಚ್ಚಾಗುತ್ತದೆ. ಇದರಿಂದ ಮಕ್ಕಳು ಮಾತ್ರವಲ್ಲದೆ, ಸಾರ್ವಜನಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆ ಎನ್ನುತ್ತಾರೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು.
ಒಂದಂಕಿ ದಾಟದ ವೇಗಮಿತಿ: ಸಂಚಾರ ಪೊಲೀಸರ ಪ್ರಕಾರ ಶಾಲಾ ವಲಯಗಳಲ್ಲಿ 15-20 ಕಿ.ಮೀ ವೇಗಮಿತಿ ಇರಬೇಕು. ಆದರೆ, ಕೆಲ ಶಾಲೆಗಳ ಸುತ್ತ-ಮುತ್ತಲ ಕಿರಿದಾದ ರಸ್ತೆಗಳಲ್ಲೇ ಶಾಲಾ ವಾಹನಗಳು ನಿಲ್ಲಿಸುವುದರಿಂದ, ಇತರೆ ವಾಹನಗಳ ವೇಗಮಿತಿ ಒಂದಂಕಿಯನ್ನೂ ಮೀರುವುದಿಲ್ಲ ಎಂದು ಸಂಚಾರ ಪೊಲೀಸರು ಹೇಳಿದರು.
ಸರ್ಕಾರಕ್ಕೂ ನಷ್ಟ: ಸಾಮಾನ್ಯವಾಗಿ ವಸತಿ ಪ್ರದೇಶದಲ್ಲಿನ 600 ಚದರ ಅಡಿಯ ಒಂದು ಬಿಎಚ್‌ಕೆ ಮನೆಯ ಬಾಡಿಗೆ ಲೆಕ್ಕಹಾಕಿದರೆ, ಚದರ ಅಡಿಗೆ ಒಂದು ತಿಂಗಳಿಗೆ 1,300 ರೂ. ಆಗುತ್ತದೆ. ಅದೇ ರೀತಿ, ಒಂದು ಕಾರು ನಿಲುಗಡೆಗೆ ಒಂದು ತಿಂಗಳಿಗೆ ಪಾರ್ಕಿಂಗ್ ಶುಲ್ಕ 1,500ರಿಂದ 1,800 ರೂ. ಇದೆ (ಮೆಟ್ರೋ ನಿಲ್ದಾಣಗಳಲ್ಲಿನ ಶುಲ್ಕದ ಅನ್ವಯ). ಈ ರೀತಿಯ ವೈಜ್ಞಾನಿಕ ಲೆಕ್ಕ ಹಾಕಿದರೆ, ಬೆಳಗ್ಗೆಯಿಂದ ಸಂಜೆವರೆಗೂ ರಸ್ತೆಯಲ್ಲಿ ನಿಲ್ಲುವ ಶಾಲಾ ವಾಹನಗಳ ಜಾಗವನ್ನು ಉಚಿತವಾಗಿ ಕೊಡಲಾಗುತ್ತಿದೆ. ಇದರಿಂದ ಸರ್ಕಾರಕ್ಕೂ ನಷ್ಟ ಉಂಟಾಗುತ್ತಿದೆ.
ಪ್ರತಿಷ್ಠಿತ ಶಾಲಾ ವಾಹನಗಳು ಶಾಲೆಗಳ ಮುಂಭಾಗದ ರಸ್ತೆಗಳಲ್ಲೇ ಪಾರ್ಕಿಂಗ್ ಮಾಡುವುದರಿಂದ ಸಂಚಾರ ದಟ್ಟಣೆ ಹೆಚ್ಚಾಗುತ್ತದೆ. ಇದರಿಂದ ಇತರೆ ವಾಹನಗಳ ವೇಗ ಮಿತಿಯೂ ಕಡಿಮೆಯಾಗುತ್ತದೆ. ಈ ಬಗ್ಗೆ ಸಂಚಾರ ಪೊಲೀಸರು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು.-ಪ್ರೊ ಎಂ.ಎನ್.ಶ್ರೀಹರಿ, ನಗರ ಸಂಚಾರ ತಜ್ಞರು * ಮೋಹನ್ ಭದ್ರಾವತಿ