Advertisement

ಪ್ರತಿಭಟನೆ ಎಚ್ಚರಿಕೆಗೆ ಎಚ್ಚೆತ್ತು ರಸ್ತೆ ಪರಿಶೀಲನೆ

04:05 PM Dec 11, 2022 | Team Udayavani |

ಮಂಡ್ಯ: ಶಾಸಕ ಸಿ.ಎಸ್‌.ಪುಟ್ಟರಾಜು ಪ್ರತಿಭಟನೆ ಎಚ್ಚರಿಕೆಯಿಂದ ಎಚ್ಚೆತ್ತ ಮೈಸೂರು-ಕೊಡಗು ಸಂಸದ ಪ್ರತಾಪ ಸಿಂಹ ಶನಿವಾರ ಹದಗೆಟ್ಟ ಮಂಡ್ಯ- ಮೇಲುಕೋಟೆ ರಸ್ತೆಯನ್ನು ಪರಿಶೀಲಿಸಿದರು.

Advertisement

ಕಳೆದ 15 ದಿನಗಳ ಹಿಂದೆ ಪುನೀತೋತ್ಸವ ಆಚರಣೆ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಸಂದರ್ಭದಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿ ಕಾಮಗಾರಿಯಿಂದ ಮಂಡ್ಯ- ಮೇಲುಕೋಟೆ ರಸ್ತೆಯಲ್ಲಿ ಅಧಿಕ ಭಾರದ ಲಾರಿಗಳು ಸಂಚರಿಸಿ ಹದಗೆಟ್ಟಿದ್ದು, ರಸ್ತೆ ಸರಿಪಡಿಸದಿದ್ದರೆ ಸಂಸದ ಪ್ರತಾಪಸಿಂಹ ಮನೆ ಮುಂದೆ ಬೃಹತ್‌ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದರು. ಶಾಸಕ ಸಿ.ಎಸ್‌.ಪುಟ್ಟರಾಜು ಎಚ್ಚರಿಕೆಯಿಂದ ಎಚ್ಚೆತ್ತ ಸಂಸದ ಪ್ರತಾಪಸಿಂಹ ಶನಿವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.

ಪಾಂಡವಪುರದ ದೊಡ್ಡ ಬ್ಯಾಡಹಳ್ಳಿ ಸೇರಿ ದುದ್ದ ಹೋಬಳಿಯ ರಸ್ತೆ, ಗ್ರಾಮೀಣ ರಸ್ತೆಗಳು ಹದಗೆಟ್ಟಿರುವ ಬಗ್ಗೆ ಶಾಸಕ ಪುಟ್ಟರಾಜು ಸಂಪೂರ್ಣ ಮಾಹಿತಿ ನೀಡಿದರು. ಬೆಂಗಳೂರು-ಮೈಸೂರು ಹೆದ್ದಾರಿ ಕಾಮಗಾರಿಗಾಗಿ ಕಲ್ಲು ಮಣ್ಣು ತುಂಬಿಕೊಂಡ ಲಾರಿಗಳು ಸಂಚರಿಸಿದ್ದವು. ಅಧಿಕ ಭಾರದ ವಾಹನಗಳ ಸಂಚಾರದಿಂದ ಗುಂಡಿ ಬಿದ್ದು ರಸ್ತೆಗಳು ಹಾಳಾಗಿದ್ದವು.

ಸಿಎಂ ಜತೆ ಚರ್ಚಿಸಿ ರಸ್ತೆಗಳ ದುರಸ್ತಿ: ನಂತರ ಸಂಸದ ಪ್ರತಾಪಸಿಂಹ ಸುದ್ದಿಗಾರರೊಂದಿಗೆ ಮಾತನಾಡಿ, ಬೆಂಗಳೂರು-ಮೈಸೂರು ಹೆದ್ದಾರಿ ನಿರ್ಮಾಣಕ್ಕಾಗಿ ಲಾರಿಗಳು ಸಂಚರಿಸಿದ್ದವು. ಇದರಿಂದ ರಸ್ತೆಗಳು ಕೆಲವು ಕಡೆ ಹಾಳಾಗಿರುವುದು ನಿಜ. ಪರಿಶೀಲನೆಯಿಂದ ಕಂಡು ಬಂದಿದೆ. ರಸ್ತೆ ಅವ್ಯವಸ್ಥೆಯಿಂದ ಜನರಿಗೆ ತೊಂದರೆ ಆಗಿದೆ. ಆದ್ದರಿಂದ ಶಾಸಕ ಸಿ.ಎಸ್‌. ಪುಟ್ಟರಾಜು ಅವರು ಹೇಳಿದ ಪ್ರಕಾರ ರಸ್ತೆ ಪರಿಶೀಲನೆ ಮಾಡಿದ್ದೇನೆ ಎಂದು ಹೇಳಿದರು.

ಹೆದ್ದಾರಿ ನಿರ್ಮಾಣ ಕಾಮಗಾರಿ ಹೊಣೆಯನ್ನು ಡಿಬಿಎಲ್‌ ಕಂಪನಿಗೆ ನೀಡ ಲಾಗಿದೆ. ರಸ್ತೆ ಬಳಕೆ ಮಾಡಿ, ನಂತರ ರಸ್ತೆ ಸರಿಪಡಿಸುವ ಕೆಲಸ ಮಾಡಲಾಗುತ್ತದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೈಸೂರಿಗೆ ಬರುತ್ತಿದ್ದಾರೆ. ಶಾಸಕ ಪುಟ್ಟರಾಜು ಹೇಳಿರುವಂತೆ ಸಿಎಂ ಚರ್ಚೆ ನಡೆಸಿ ರಸ್ತೆ ಸರಿಪಡಿಸುವ ಕೆಲಸವನ್ನು ಮಾಡುತ್ತೇವೆ. ಈಗಾಗಲೇ ಪಿಡಬ್ಲೂಡಿಗೆ ಸೂಚನೆ ನೀಡಿದ್ದು, ರಸ್ತೆ ಸರಿಪಡಿಸುವ ಕಾರ್ಯ ನಡೆಯಲಿದೆ ಎಂದು ಭರವಸೆ ನೀಡಿದರು.

Advertisement

ಶಾಸಕರ ಧ್ವನಿಗೆ ನಾನು ಬದ್ಧ: ಇದರ ಜತೆಗೆ ಗ್ರಾಮೀಣ ಭಾಗದ ರಸ್ತೆಯನ್ನು ಸಹ ಸರಿಪಡಿಸುವ ಕೆಲಸ ಮಾಡಲಾಗುವುದು. ಹೆದ್ದಾರಿ ನಿರ್ಮಾಣ ಮಾಡುವಾಗ ಜನರಿಗೆ ತೊಂದರೆ ಮಾಡುವುದು ಸರಿಯಲ್ಲ. ಜನರಿಗೂ ಅನುಕೂಲವಾ ಗಬೇಕು. ಪುಟ್ಟರಾಜು ಅವರ ಧ್ವನಿಗೆ ನಾನು ಬದ್ಧನಾಗಿದ್ದೇನೆ. ಆದಷ್ಟು ಬೇಗ ಸಿಎಂ ಜತೆ ಚರ್ಚಿಸಿ ರಸ್ತೆ ಸರಿಪಡಿಸಲಾಗುವುದು ಎಂದು ತಿಳಿಸಿದರು.

ಕಾದು ನೋಡೋಣ: ಶಾಸಕ ಸಿ.ಎಸ್‌. ಪುಟ್ಟರಾಜು ಮಾತನಾಡಿ, ಹೆದ್ದಾರಿ ಕಾಮಗಾರಿ ಯಿಂದ ಮಂಡ್ಯ- ಮೇಲು ಕೋಟೆಯ ಗ್ರಾಮೀಣ ರಸ್ತೆಗಳು ಹದಗೆಟ್ಟಿದ್ದವು. ಇದರ ಬಗ್ಗೆ ಸಂಸದ ಪ್ರತಾಪಸಿಂಹ ಅವರ ಮನೆ ಮುಂದೆ ಧರಣಿ ಮಾಡುವುದಾಗಿ ತಿಳಿಸಿದ್ದೆ. ಅದರಂತೆ ಅಧಿಕಾರಿಗಳ ಜತೆ ರಸ್ತೆಗಳ ಪರಿ ಶೀಲನೆ ನಡೆಸಿದ್ದಾರೆ ಎಂದರು. ಸಮಸ್ಯೆಗಳ ಬಗೆಹರಿ ಸುವ ಜವಾಬ್ದಾರಿ ಹೊರುತ್ತೇನೆ ಅಂತ ಹೇಳಿದ್ದಾರೆ. ಸಿಎಂ ಜತೆ ಚರ್ಚಿಸಿ ಸಮಸ್ಯೆ ಸರಿಪಡಿಸುವುದಾಗಿ ಭರವಸೆ ಕೊಟ್ಟಿದ್ದಾರೆ. ಸಮಸ್ಯೆಗೆ ತಕ್ಷಣವೇ ಸ್ಪಂದಿಸಿದ್ದಾರೆ. ಬಹಳ ಚುರುಕಾಗಿ ಸಂಸದ ಪ್ರತಾಪ್‌ ಸಿಂಹ ಕೆಲಸ ಮಾಡುತ್ತಿದ್ದಾರೆ. ಮುಂದೆ ಕಾದು ನೋಡೋಣ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next