ಕೊಳ್ಳೇಗಾಲ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ, ಶಾಸಕ ಆರ್.ನರೇಂದ್ರ ಭಾನುವಾರ ಭೂಮಿಪೂಜೆ ಸಲ್ಲಿಸಿದರು.
ನರೀಪುರ ಗ್ರಾಮದಲ್ಲಿ 15 ಲಕ್ಷ ರೂ., ಸರಗೂರು 10 ಲಕ್ಷ ರೂ., ಧನಗೆರೆ 10 ಲಕ್ಷ ರೂ., ಸತ್ತೇಗಾಲ 87 ಲಕ್ಷ ರೂ., ಪಾಳ್ಯ 10 ಲಕ್ಷ ರೂ., ಕರಿಯನಪುರದಲ್ಲಿ 10 ಲಕ್ಷ ರೂ. ಕಾಮಗಾರಿಗಳಿಗೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಶಾಸಕರು, ಸರ್ಕಾರ ಪರಿಶಿಷ್ಟ ಜಾತಿ, ಪಂಗಡ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ವತಿಯಿಂದ ವಿವಿಧ ಕಾಮಗಾರಿಗಳಿಗೆ 12 ಕೋಟಿ ರೂ. ಮಂಜೂರು ಮಾಡಿದ್ದು, ಹನೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾಮಗಾರಿಗಳು ಬರದಿಂದ ಸಾಗುತ್ತಿದೆ ಎಂದು ಹೇಳಿದರು.
ಸರ್ಕಾರ ವಿಶೇಷ ಅನುದಾನ ಕೊಡಲು ಮತ್ತಷ್ಟು ಮುಂದಾಗಿದ್ದು, ಹಣ ಬರುತ್ತಿದ್ದಂತೆ ಮತ್ತಷ್ಟು ಕಾಮಗಾರಿಗೆ ಚಾಲನೆ ನೀಡಲಾಗುವುದು. ಇನ್ನು ಒಂದು ವರ್ಷದಲ್ಲಿ ಕ್ಷೇತ್ರದ ಎಲ್ಲಾ ಬಡಾವಣೆಗಳಲ್ಲಿ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಹನೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿಗೆ ಸರ್ಕಾರದ ವತಿಯಿಂದ 12 ಕೋಟಿ ರೂ. ಮಂಜೂರಾಗಿದ್ದು, ಎಲ್ಲಾ ಕಾಮಗಾರಿಗಳನ್ನು ಲೋಕೋಪಯೋಗಿ ಇಲಾಖೆಗೆ ವಹಿಸಲಾಗಿದ್ದು, ಅಧಿಕಾರಿಗಳು ಗುಣಮಟ್ಟದ ಕಾಮಗಾರಿ ಮಾಡಬೇಕು. ಕಾಮಗಾರಿಯಲ್ಲಿ ಲೋಪ ಕಂಡು ಬಂದ ಪಕ್ಷದಲ್ಲಿ ಸಂಬಂಧಿಸಿದ ಇಲಾಖಾ ಅಧಿಕಾರಿಗಳ ಮೇಲೆ ಕೈಗೊಳ್ಳಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.
ವಿವಿಧ ಗ್ರಾಮಸ್ಥರು ಸಮುದಾಯ ಭವನ, ಅಂಗನವಾಡಿ ಕೇಂದ್ರ ಮತ್ತು ಇನ್ನಿತರ ಕಾಮಗಾರಿಗೆ ಅನುದಾನ ನೀಡಬೇಕು ಎಂದು ಮನವಿ ಮಾಡಿದ್ದು, ಕೂಡಲೇ ಗ್ರಾಮಸ್ಥರ ಬೇಡಿಕೆಗೆ ಅನುಗುಣವಾಗಿ ಅನುದಾನ ನೀಡಿ, ಭರವಸೆ ಈಡೇರಿಸುವುದಾಗಿ ಹೇಳಿದರು.
ಜಿಪಂ ಅಧ್ಯಕ್ಷೆ ಶಿವಮ್ಮ, ತಾಪಂ ಅಧ್ಯಕ್ಷ ರಾಜೇಂದ್ರ, ತಾಪಂ ಸದಸ್ಯ ಸುರೇಶ್, ಲೋಕೋಪಯೋಗಿ ಇಲಾಖೆಯ ಎಇಇ ಮಹದೇವಸ್ವಾಮಿ, ಇಂಜಿನಿಯರ್‌ಗಳಾದ ಚಿನ್ನಣ್ಣ, ರಾಜು, ಸತೀಶ್, ಮುಖಂಡರಾದ ಸೋಮಣ್ಣ, ಪಾಳ್ಯ ಕೃಷ್ಣ, ಶಿವಶಂಕರ್, ಸಿದ್ದರಾಜು ಇತರರಿದ್ದರು.