ಹನೂರು: ಅಜ್ಜಿಪುರ ಕಾಂಚಳ್ಳಿ ಮುಖ್ಯ ರಸ್ತೆಯ 2 ಕಿ.ಮೀ. ರಸ್ತೆ ಮತ್ತು ರಾಮಾಪುರ- ಮುನಿಯಪ್ಪನದೊಡ್ಡಿ ಗ್ರಾಮದ ಬಾಕಿ ಉಳಿದಿರುವ ರಸ್ತೆ ಅಭಿವೃದ್ಧಿಗೆ 1.43 ಕೋಟಿ ವೆಚ್ಚದಲ್ಲಿ ಭೂಮಿಪೂಜೆ ನೆರವೇರಿಸಲಾಗುತ್ತಿದೆ ಎಂದು ಶಾಸಕ ಆರ್.ನರೇಂದ್ರ ಹೇಳಿದರು.
ತಾಲೂಕಿನ ಅಜ್ಜಿಪುರ ಗ್ರಾಮದಲ್ಲಿ ಅಜ್ಜಿಪುರ-ಕಾಂಚಳ್ಳಿ ಮುಖ್ಯ ರಸ್ತೆಯನ್ನು 1.03 ಕೋಟಿ ವೆಚದಲ್ಲಿ 2 ಕಿ.ಮೀ. ಹಾಗೂ ಮುನಿಯಪ್ಪನ ದೊಡ್ಡಿಗೆ 40 ಲಕ್ಷ ವೆಚ್ಚದಲ್ಲಿ ಬಾಕಿ ಉಳಿದಿರುವ ಕಾಮಗಾರಿಗೆ ಭೂಮಿಪೂಜೆ ನೆರವೇರಿ ಸಿದರು. ಬಳಿಕ ಮಾತನಾಡಿ, ಕಾಮಗಾರಿಯ ಹೊಣೆ ಹೊತ್ತ ವರು ಉತ್ತಮ ರೀತಿಯಲ್ಲಿ ಕಾಮಗಾರಿ ನಿರ್ವಹಿಸಿ ಮುಂದಿನ 20 ವರ್ಷಗಳ ಕಾಲ ಬಾಳಿಕೆಗೆ ಬರುವಂತೆ ನಿರ್ವಹಿಸಬೇಕು ಎಂದು ಮಾಹಿತಿ ನೀಡಿದರು.
6 ಗಂಟೆ ನಂತರ ಸಂಚಾರ ನಿಷೇಧಕ್ಕೆ ಕ್ರಮ: ಹನೂರು ತಾಲೂಕಿನಿಂದ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ತಾಳಬೆಟ್ಟ- ಪಾಲಾರ್ ಮತ್ತು ನಾಲಾರೋಡ್ ಗರಿಕೆಕಂಡಿ ಮಾರ್ಗಗಳಲ್ಲಿ ಸಂಜೆ 6 ಗಂಟೆ ನಂತರ ಭಾರೀ ವಾಹನಗಳ ಸಂಚಾರ ನಿಷೇಧಕ್ಕೆ ಕ್ರಮವಹಿಸಲಾಗಿದೆ. ಭಾರೀ ವಾಹನಗಳ ಸಂಚಾರದಿಂದ ನಿರಂತರವಾಗಿ ಅಪಘಾತಗಳು ಸಂಭವಿಸುತ್ತಿರುವುದು ಮತ್ತು ರಸ್ತೆಗಳು ಅತಿವೇಗ ಹಾಳಾಗುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲು ಕ್ರಮವಹಿಸಲಾಗಿದೆ ಎಂದು ತಿಳಿಸಿದರು.
ಮಳೆಹಾನಿ ಬಗ್ಗೆ ಚರ್ಚಿಸಲಾಗಿದೆ: ನಿರಂತರ ಮಳೆಯಿಂದಾಗಿ ಹನೂರು ತಾಲೂಕಿನಲ್ಲಿ 24 ಹೆಕ್ಟೇರ್ ಭೂಮಿಯಲ್ಲಿ ಬೆಳೆದಿದ್ದ ಆಲೂಗೆಡ್ಡೆ, ಬೆಳ್ಳುಳ್ಳಿ ಬೆಳೆ ಹಾನಿಯಾಗಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಬಂದಿದೆ. ಅಲ್ಲದೆ ಪ್ರವಾಹ ಸಂದರ್ಭದಲ್ಲಿ ಭನಗೆರೆ, ಸರಗೂರು, ಸತ್ತೇಗಾಲ, ಯಡಕುರಿಯಾದಲ್ಲಿ 20 ಎಕರೆ ಭೂಮಿ ಯಲ್ಲಿ ಬಎಳೆದಿದ್ದ ಭತ್ತದ ಬೆಳೆ ನಷ್ಟವಾಗಿರುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವರದಿ ನೀಡಿದ್ದು ಸೂಕ್ತ ಪರಿಹಾರ ನೀಡಲು ಸೂಚನೆ ನೀಡಲಾಗಿದೆ.
ತಲಾ 3 ಲಕ್ಷ ಪರಿಹಾರ: ಅಲ್ಲದೆ 8-9 ಮನೆಗಳು ಹಾನಿಗೀಡಾಗಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದು ತಾತ್ಕಾಲಿಕವಾಗಿ ತಲಾ 10 ಸಾವಿರ ಪರಿಹಾರ ನೀಡಿ ತಲಾ 3 ಲಕ್ಷ ಪರಿಹಾರ ಕಲ್ಪಿಸಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ಮುಳುಗು ಸೇತುವೆಗಳ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಲಿದ್ದು ಸೇತುವೆ ನಿರ್ಮಾಣಕ್ಕೆ ಅಗತ್ಯವಿರುವ ಅನುಮತಿಗಳನ್ನು ನೀಡಲು ಸಚಿವರು ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.
ಜಿಪಂ ಮಾಜಿ ಉಪಾಧ್ಯಕ್ಷ ಬಸವರಾಜು, ಮುಖಂಡರಾದ ಅಜ್ಜಿಪುರ ನಾಗರಾಜು, ಬಸಪ್ಪನ ದೊಡ್ಡಿ ಮಹದೇವ ಪ್ರಸಾದ್, ಖಲಂದರ್ ಪಾಷ, ಗುತ್ತಿಗೆದಾರ ಅಪ್ಪಾದೊರೈ ಇದ್ದರು.