Advertisement

ಸುಸಜ್ಜಿತ ಕಿರುರಸ್ತೆಯಾಗುತ್ತಿದೆ ಮಣ್ಣಗುಡ್ಡೆಯ ʼಸ್ವಚ್ಛತೆ ಹಾದಿ’!

03:34 PM Jun 14, 2022 | Team Udayavani |

ಮಣ್ಣಗುಡ್ಡೆ: ನಗರದ ಸೌಂದರ್ಯಕ್ಕೆ ತೊಡಕಾಗಿದ್ದ ಹಾಗೂ ಹಲವು ದಶಕದಿಂದ ನಿರುಪಯುಕ್ತ ಸ್ಥಿತಿಯಲ್ಲಿದ್ದ ಮಣಗುಡ್ಡೆಯ ಸ್ವಚ್ಛತೆ ಹಾದಿ (ಸ್ಕ್ಯಾವೆಂಜರ್‌ ಲೈನ್‌) ಇದೀಗ ಸುಸಜ್ಜಿತ ರಸ್ತೆಯಾಗಿ ಮಾರ್ಪಾಡುಗೊಂಡಿದೆ. ಮಣ್ಣಗುಡ್ಡೆ ಪರಿಸರದಲ್ಲಿ ಮಾತ್ರ ಇರುವ 12ಕ್ಕೂ ಅಧಿಕ ಸ್ಕ್ಯಾವೆಂಜರ್‌ ಲೈನ್‌ ಈ ಮುಖೇನ ಸಂಪರ್ಕ ರಸ್ತೆಯಾಗಿ ಬಳಕೆಯಾಗಲಿದೆ.

Advertisement

ಮಂಗಳೂರು ಮಹಾನಗರ ಪಾಲಿಕೆ ಒಳಚರಂಡಿ ಪೈಪ್‌ ಅಳವಡಿಕೆಗೆ ಈ ಹಾದಿಯನ್ನು ಬಳಸಲಾಗಿದ್ದು, ಪೈಪ್‌ ಅಳವಡಿಕೆ ಪೂರ್ಣಗೊಂಡ ಬಳಿಕ ಡಾಮರು ಹಾಕುವ ಮೂಲಕ ಸಂಪರ್ಕ ರಸ್ತೆಯಾಗಿ ಮಾರ್ಪಾಡು ಗೊಳಿಸ ಲಾಗಿದೆ. ಕುಡ್ಸೆಂಪ್‌ ಯೋಜನೆಯಡಿ ಇಲ್ಲಿ 1.6 ಕೋ. ರೂ. ವೆಚ್ಚದಲ್ಲಿ ಒಳಚರಂಡಿ ಪೈಪ್‌ ಅಳವಡಿಕೆ ಪೂರ್ಣಗೊಂಡಿದೆ. 1.5 ಕೋ.ರೂ. ವೆಚ್ಚದಲ್ಲಿ ರಸ್ತೆಯನ್ನು ಸುಸಜ್ಜಿತಗೊಳಿಸುವ ಕಾಮಗಾರಿ ಇಲ್ಲಿ ಪ್ರಗತಿಯಲ್ಲಿದೆ.

ಮಣ್ಣಗುಡ್ಡೆಯ ಬಹುತೇಕ ಅಡ್ಡ ರಸ್ತೆಯ, ಮನೆಗಳ ಸಾಲಿನ ಹಿಂಭಾಗದಲ್ಲಿ ಇಂತಹ ಪ್ರತ್ಯೇಕ ಹಾದಿಯನ್ನು ಕಾಣಬಹುದಾಗಿದೆ. ಒಳಚರಂಡಿ ವ್ಯವಸ್ಥೆಯ ಪೈಪ್‌ ಲೈನ್‌ ಹಾಗೂ ಮ್ಯಾನ್‌ಹೋಲ್‌ಗ‌ಳನ್ನು ಬಳಿಕ ಈ ಹಾದಿಯಲ್ಲಿ ಅಳವಡಿಸಲಾಗಿತ್ತು. ಆದರೆ ಕಾಲಾನಂತರ ಈ ಹಾದಿ ಬಳಕೆಯಾಗದೆ ಹುಲ್ಲು, ಪೊದೆ ಬೆಳೆದಿತ್ತು. ತ್ಯಾಜ್ಯ ತಂದು ಇಲ್ಲೇ ಸುರಿಯುತ್ತಿದ್ದರು. ನಗರದ ಸ್ವಚ್ಛತೆಗೆ ಈ ಹಾದಿಯೇ ಅಡ್ಡಿಯಾಗಿತ್ತು.

ಪಾಲಿಕೆಯ ಜಾಗವಾದ ಕಾರಣ ಸ್ಥಳೀಯ ನಿವಾಸಿಗಳು ಇದನ್ನು ಅಭಿವೃದ್ಧಿ ಪಡಿಸಲು ಮನಸ್ಸು ಮಾಡಿಲ್ಲ. ಪಾಲಿಕೆಯಿಂದ ಈ ಹಿಂದೆ 3 ಹಾದಿಗೆ ಡಾಮರು ಹಾಕಿ ಕಿರು ರಸ್ತೆಯಾಗಿ ಅಭಿವೃದ್ದಿ ಪಡಿಸಲಾಗಿತ್ತು. ಕೆಲವು ಕಡೆ ಸ್ಥಳೀಯರೇ ಇಂಟರ್‌ ಲಾಕ್‌ ಅಳವಡಿಸಿ ಹಾದಿಯನ್ನು ಸ್ವತ್ಛವಾಗಿಸಿದ್ದರು. ಉಳಿದ ಹಾದಿಗಳು ಕೊಳಚೆ ರಾಶಿಯಿಂದ ಪಾಳು ಬಿದ್ದಿದ್ದವು. ಈಗ ಎಲ್ಲ ಹಾದಿಗಳ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ.

ಸ್ಕ್ಯಾವೆಂಜರ್‌ ಲೈನ್‌; ಏನಿದು?

Advertisement

ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಬಿಳಿಯರು ಹೆಚ್ಚಾಗಿ ಮಂಗಳೂರಿನ ಮಣ್ಣಗುಡ್ಡೆ, ಗಾಂಧಿನಗರ ಪ್ರದೇಶದಲ್ಲಿ ವಾಸವಾಗಿದ್ದರು. ಈ ಪ್ರದೇಶದಲ್ಲಿ ವ್ಯವಸ್ಥಿತವಾಗಿ ಮನೆಗಳ ಸಾಲು, ಮುಂಭಾಗದಲ್ಲಿ ರಸ್ತೆ ನಿರ್ಮಿಸಲಾಗಿತ್ತು. ಆಗ ಒಳಚರಂಡಿ ವ್ಯವಸ್ಥೆ ಇರಲಿಲ್ಲ. ಮಲ ಹೊರುವ ಅನಿಷ್ಠ ಪದ್ಧತಿ ಜಾರಿಯಲ್ಲಿತ್ತು. ಅದಕ್ಕಾಗಿ ಮನೆಗಳ ಹಿಂಭಾಗದಲ್ಲಿ ಸ್ವಚ್ಛಗೊಳಿಸುವವರು ಅಡ್ಡಾಡಲು ಪ್ರತ್ಯೇಕವಾಗಿ ಸ್ಕ್ಯಾವೆಂಜರ್‌ ಲೈನ್‌ ನಿರ್ಮಿಸಲಾಗಿತ್ತು. ಮಣ್ಣಗುಡ್ಡೆ ಪ್ರದೇಶದಲ್ಲಿ ಮಾತ್ರ ಇಂತಹ ವ್ಯವಸ್ಥೆ ಇತ್ತು.

ಕಿರುರಸ್ತೆಯಾಗಿ ಅಭಿವೃದ್ಧಿ:  ಸ್ಕ್ಯಾವೆಂಜರ್‌ ಲೈನ್‌ ಎಂದು ಈ ಹಿಂದೆ ಕರೆಯಲ್ಪಡುತ್ತಿದ್ದ ಮಣ್ಣಗುಡ್ಡೆ ಪರಿಸರದ 12 ಓಣಿಗಳನ್ನು ಕಿರು ರಸ್ತೆಯಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ. ನಿರುಪಯುಕ್ತವಾಗಿದ್ದ ಈ ಓಣಿಗಳಲ್ಲಿ ಕೆಲವರು ತ್ಯಾಜ್ಯ ಸುರಿಯುತ್ತಿದ್ದ ಕಾರಣ ಸ್ವಚ್ಛತೆಗೆ ಅಡ್ಡಿಯಾಗಿತ್ತು. ಈಗ ಪರಿಸರ ಸ್ವಚ್ಛವಾಗಿದೆ. –ಪ್ರೇಮಾನಂದ ಶೆಟ್ಟಿ, ಮೇಯರ್‌, ಮಹಾನಗರ ಪಾಲಿಕೆ

 

Advertisement

Udayavani is now on Telegram. Click here to join our channel and stay updated with the latest news.

Next