ಕನಕಪುರ: ನಮ್ಮ ಹೊಲ ನಮ್ಮ ರಸ್ತೆ ಯೋಜನೆ ಮತ್ತು ಅಭಿವೃದ್ಧಿ ಪಡಿಸಿದ ರಸ್ತೆಗೆ ಮರು ಕಾಮಗಾರಿ ಮಾಡಿ ಗ್ರಾಪಂ ಅನುದಾನ ದುರ್ಬಳಕೆ ಮಾಡಿಕೊಳ್ಳುತ್ತಿರುವ ಸದಸ್ಯರ ಪತಿ ಮತ್ತು ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮೇಡನಹಳ್ಳಿ ಬಂಡಿಗನಹಳ್ಳಿ ಗ್ರಾಮಸ್ಥರು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ದೂರು ನೀಡಿದ್ದಾರೆ.
ತಾಲೂಕಿನ ಹಾರೋಹಳ್ಳಿ ಹೋಬಳಿಯ ದೊಡ್ಡಮ್ಮದುವಾಡಿ ಗ್ರಾಪಂನ ನರೇಗಾ ಯೋಜನೆಯಲ್ಲಿ ಭಾರೀ ಅಕ್ರಮ ಮತ್ತು ಅವ್ಯವಹಾರ ನಡೆಯುತ್ತಿದೆ. ಗ್ರಾಪಂ ಸದಸ್ಯರ ಪತಿಯೊಂದಿಗೆ ಅಧಿಕಾರಿಗಳು ಭಾಗಿಯಾಗಿ ನರೇಗಾ ಯೋಜನೆ ಅನುದಾನ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಲಿಂಗರಾಜು, ಗಿರೀಶ್, ವಿಶ್ವನಾಥ್ ಆರೋಪಿಸಿದ್ದಾರೆ.
ದೊಡ್ಡ ಮುದುವಾಡಿ ಗ್ರಾಪಂ ವ್ಯಾಪ್ತಿಯ ಮೇಡನಹಳ್ಳಿ ದೊಡ್ಡಿ ಮತ್ತು ಆರತಿಪಾಳ್ಯ ಮಾರ್ಗದ ಮುಖ್ಯ ರಸ್ತೆಯಿಂದ ಹರಟಬೆಲೆ ಮುಖ್ಯರಸ್ತೆ ವರೆಗೂ ಮೇಲ್ದರ್ಜೆಗೇರಿಸಿದ್ದ ರಸ್ತೆಯನ್ನು ಕಿತ್ತು, ನಮ್ಮ ಹೊಲ ನಮ್ಮ ದಾರಿ ಯೋಜನೆಯಡಿ ಅವಕಾಶ ಇಲ್ಲದಿದ್ದರೂ, ರಸ್ತೆಗೆ ಜಲ್ಲಿಂಗ್, ಮೆಟ್ಲಿಂಗ್ ಕಾಮಗಾರಿ ಕೈಗೊಂಡು, ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಅಲ್ಲದೆ, ಗೂಗಾರ ದೊಡ್ಡಿ ಗ್ರಾಮದಿಂದ ಬಂಡಿಗನಹಳ್ಳಿಯವರೆಗೂ ಚಾನಲ್ ರಸ್ತೆ ಅಭಿವೃದ್ಧಿ ಕಾಮಗಾರಿಯಲ್ಲೂ ಭಾರಿ ಅಕ್ರಮ ನಡೆಸಿದ್ದಾರೆ.
ಎರಡು ವರ್ಷ ಹಿಂದೆ ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದ ರಸ್ತೆ ಕಿತ್ತುಹಾಕಿ ಮಳೆ ಮತ್ತು ಪ್ರವಾಹದ ನೆಪ ಒಡ್ಡಿ ಮತ್ತೂಂದು ಕಾಮಗಾರಿ ಕೈಗೊಳ್ಳಲು ಹೊರಟಿದ್ದಾರೆ. ಹಣದಾಸೆಗೆ ಚೆನ್ನಾಗಿರುವ ರಸ್ತೆ ಕಿತ್ತು ಹಾಕಿ ಮರು ಕಾಮಗಾರಿ ಕೈಗೆತ್ತಿಕೊಂಡು ನರೇಗಾ ನಿಯಮ ಗಾಳಿಗೆ ತೂರಿ ಮಾನವ ಸಂಪನ್ಮೂಲ ಬಳಸದೆ, ಜೆಸಿಬಿ ಯಂತ್ರ, ಇಟಾಚಿ, ಟ್ರ್ಯಾಕ್ಟರ್ ಯಂತ್ರಗಳ ಮೂಲಕ ಹಾಗೂ ನಾಮ್‌ಕೇವಾಸ್ತೆಗೆ ಕಳಪೆ ಕಾಮಗಾರಿ ಮಾಡಿ, ಅಕ್ರಮ ಎಸಗಿ ನರೇಗಾ ಹಣ ಲೂಟಿ ಮಾಡುತ್ತಿರುವ ಗ್ರಾಪಂ ಸದಸ್ಯ ಪತಿ ಪರಮೇಶ್ ಹಾಗೂ ಗ್ರಾಪಂ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡುವಂತೆ ಒತ್ತಾಯಿಸಿದ್ದಾರೆ.