Advertisement
ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಮಂಗಳೂರು ಭೇಟಿ ಹಿನ್ನೆಲೆಯಲ್ಲಿ ನಗರದ ಆಯ್ದ ರಸ್ತೆಗಳ ಹೊಂಡ ಗುಂಡಿಗಳಿಗೆ ಕೆಲವೆಡೆ ತರಾತುರಿಯಲ್ಲಿ ತೇಪೆ ನಡೆಸಲಾಗಿತ್ತು. ಆದರೆ ಆ ರಸ್ತೆಯಲ್ಲಿ ಇದೀಗ ಮತ್ತೆ ಗುಂಡಿ ಕಾಣಿಸಿಕೊಂಡಿದೆ. ನಗರದಲ್ಲಿ ಮತ್ತೂಮ್ಮೆ ಮಳೆ ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ತೇಪೆಯೂ ಮಳೆ ನೀರಲ್ಲಿ ಹೋಗಿದೆ. ಇದು ಪ್ರಯಾಣಿಕರಿಗೆ ಸಂಚಾರ ಸಂಕಷ್ಟ ಸೃಷ್ಟಿಸಿದೆ.ಮುಖ್ಯರಸ್ತೆಗಳು ಕಾಂಕ್ರೀಟ್ ರಸ್ತೆಗಳಾಗಿ ಬದಲಾಗಿದ್ದರೂ ಅದಕ್ಕೆ ಸಂಪರ್ಕವಿರುವ ಕೆಲವು ಕಡೆಯ ಡಾಮರು ರಸ್ತೆಗಳು ಗುಂಡಿಯಿಂದಾಗಿ ಸಮಸ್ಯೆಗೆ ಕಾರಣವಾಗಿದೆ. ಅದರಲ್ಲಿಯೂ ನಗರದ ಒಳರಸ್ತೆಗಳಂತೂ ಸಂಚಾರಕ್ಕೆ ಅಯೋಗ್ಯವಾಗಿದೆ.
ನಗರದ ಮುಖ್ಯಭಾಗದಲ್ಲಿರುವ ರಸ್ತೆಯ ಹೊಂಡ ಮುಚ್ಚುವ ಕಾಮಗಾರಿ ಕೆಲವೆಡೆ ನಡೆದಿದ್ದರೂ ಒಳರಸ್ತೆಗಳ ಹೊಂಡಗಳಿಗೆ ತೇಪೆ ಭಾಗ್ಯ ಯಾವಾಗ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ವಾರ್ಡ್‌ನ ಒಳ ರಸ್ತೆಗಳ ಕೆಲವು ಭಾಗದ ಡಾಮರು ಕಿತ್ತುಹೋಗಿದ್ದು, ಸವಾರರು ಸಮಸ್ಯೆ ಎದುರಿಸುತ್ತಿದ್ದಾರೆ. ಇದನ್ನು ಕೂಡ ತುರ್ತಾಗಿ ದುರಸ್ತಿ ಮಾಡುವ ನಿಟ್ಟಿನಲ್ಲಿ ಪಾಲಿಕೆ ಕ್ರಮ ಕೈಗೊಳ್ಳಬೇಕಿದೆ.
Related Articles
Advertisement
ಗೈಲ್, ಜಲಸಿರಿ ಕಾಮಗಾರಿಯೇ ಸಮಸ್ಯೆ!
ನಗರದ ಹಲವು ಕಡೆಗಳಲ್ಲಿ ಗೈಲ್ ಗ್ಯಾಸ್‌ಲೈನ್, ಜಲಸಿರಿ, ಪಾಲಿಕೆ, ಸ್ಮಾರ್ಟ್ ಸಿಟಿಯಿಂದ ವಿವಿಧ ಕಾಮಗಾರಿ ನಡೆಯುತ್ತಿದೆ. ಈ ಉದ್ದೇಶಕ್ಕೆ ಅನೇಕ ಕಡೆಗಳಲ್ಲಿ ರಸ್ತೆ ಅಗೆಯಲಾಗಿದೆ. ಕೆಲವೆಡೆ ಅಗೆದ ರಸ್ತೆ ಅದೇ ಸ್ಥಿತಿಯಲ್ಲಿದ್ದು, ಇನ್ನೂ ಕೆಲವು ಪ್ರದೇಶದಲ್ಲಿ ಅರ್ಧಂಬರ್ಧ ಕಾಮಗಾರಿ ನಡೆಸಲಾಗಿದೆ. ಅಗೆದ ಕಾಂಕ್ರೀಟ್ ರಸ್ತೆಯಲ್ಲಿ ಎತ್ತರ ತಗ್ಗು ನಿರ್ಮಾಣಗೊಂಡಿದೆ. ಕೆಲವೆಡೆ ಅಗೆದ ಗುಂಡಿ ಸರಿಯಾಗಿ ಮುಚ್ಚದೆ ವಾಹನ ಸಂಚಾರ ದುಸ್ತರವೆನಿಸಿದೆ. ಇನ್ನೂ ಕೆಲವೆಡೆ ಜಲ್ಲಿ ಹಾಕಲಾಗಿದ್ದು ಅದನ್ನು ಎದ್ದು ಹೋಗಿದೆ.