Advertisement
ಹಳೆ ಸೇತುವೆಗೆ ತಾಗಿಕೊಂಡು ಕಡಬ ಭಾಗದಲ್ಲಿ ನಸುಕಿನ ವೇಳೆ ಭೂಮಿ ಕುಸಿದು ರಸ್ತೆ ತುಂಡರಿಸಿ ಹೋಗಿ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಹೊಸ ಸೇತುವೆ ಮತ್ತು ಹಳೆಯ ಸೇತುವೆ ಸಂಪರ್ಕ ರಸ್ತೆ ನಡುವೆ ಇರುವ ತೋಡಿನಲ್ಲಿ ಮಳೆಯಿಂದಾಗಿ ನೀರಿನ ಹರಿವು ಹೆಚ್ಚಾಗಿ ರಸ್ತೆಯ ಪಕ್ಕದ ಮಣ್ಣು ಕೊರೆದು ಹೋಗಿ ಭೂಮಿ ಕುಸಿತವಾಗಿದೆ. ಬೆಳಗ್ಗೆ ಸುಮಾರು 9 ಗಂಟೆಯ ಸುಮಾರಿಗೆ ನೂತನ ಸೇತುವೆಯ ಕಾಮಗಾರಿಗೆ ತರಿಸಲಾಗಿದ್ದ ಹಿಟಾಚಿ ಯಂತ್ರದ ಮೂಲಕ ಕುಸಿದ ರಸ್ತೆಯ ಭಾಗಕ್ಕೆ ಕಪ್ಪುಕಲ್ಲು ತುಂಬಿಸಿ ಮಣ್ಣು ಹಾಕಿ ದುರಸ್ತಿಗೊಳಿಸಿದ ಬಳಿಕ ರಸ್ತೆ ಸಂಚಾರ ಸುಗಮಗೊಂಡಿತು.
ಎರಡು ವರ್ಷಗಳ ಹಿಂದೆಯೇ ಮುಗಿಯಬೇಕಿತ್ತು
ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ (KRDCL) ಅಡಿಯಲ್ಲಿ 7.50 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಸೇತುವೆಯ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಸೇತುವೆಯ ಕೆಲಸ ಬಹುತೇಕ ಮುಗಿದಿದ್ದರೂ ಸಂಪರ್ಕ ರಸ್ತೆ ನಿರ್ಮಾಣವಾಗಿಲ್ಲ. ಎಲ್ಲವೂ ಅಂದುಕೊಂಡಂತೆಯೇ ನಡೆದಿದ್ದರೆ ಸೇತುವೆಯ ಇಕ್ಕೆಲಗಳ ರಸ್ತೆ ಕಾಮಗಾರಿಯೂ ಪೂರ್ತಿಯಾಗಿ 2 ವರ್ಷಗಳ ಹಿಂದೆಯೇ ಮಳೆಗಾಲದಲ್ಲಿ ಮುಳುಗಡೆಯ ಭೀತಿ ಇಲ್ಲದೆ ಹೊಸ ಸೇತುವೆಯ ಮೇಲೆ ವಾಹನಗಳು ಸಂಚರಿಸಬಹುದಾಗಿತ್ತು. ಸೇತುವೆಯ ಎರಡೂ ಬದಿಯಲ್ಲಿ ಸಂಪರ್ಕ ರಸ್ತೆ ನಿರ್ಮಿ ಸುವುದಕ್ಕಾಗಿ ಖಾಸಗಿಯವರಿಂದ ಜಮೀನು ಸ್ವಾಧೀನಪಡಿಸುವುಕೊಳ್ಳುವ ಪ್ರಕ್ರಿಯೆ ವಿಳಂಬವಾದ ಕಾರಣದಿಂದಾಗಿ ಸಂಪರ್ಕ ರಸ್ತೆ ನಿರ್ಮಾಣವೂ ನೆನೆಗುದಿಗೆ ಬಿದ್ದಿತ್ತು. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆ, ಜನರ ಅಸಹಕಾರ ಪ್ರವೃತ್ತಿಯ ಕಾರಣದಿಂದಾಗಿ ನೂತನ ಸೇತುವೆ ಬಳಕೆಗೆ ಇನ್ನೂ ಕಾಲ ಕೂಡಿ ಬಂದಿಲ್ಲ. ಗಾಬರಿಗೊಂಡ ಜನತೆ
ನಸುಕಿನ 4 ಗಂಟೆಯ ವೇಳೆಗೆ ಕಡಬದ ಹೊಟೇಲ್ ಉದ್ಯಮಿ ಮನೋಹರ ರೈ ಬೆದ್ರಾಜೆ ಅವರು ಇದೇ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದ ವೇಳೆ ರಸ್ತೆ ಕುಸಿದಿರುವುದು ಬೆಳಕಿಗೆ ಬಂದಿತ್ತು. ಮುಂಜಾಗರೂಕತಾ ಕ್ರಮವಾಗಿ ಕುಸಿದ ರಸ್ತೆ ಸುತ್ತ ಮರಳು ತುಂಬಿದ ಗೋಣಿಚೀಲಗಳನ್ನು ಇರಿಸಿದ್ದ ಅವರು, ಬಳಿಕ ಈ ಕುರಿತು ಮಾಧ್ಯಮದವರಿಗೆ ಮಾಹಿತಿ ನೀಡಿದ್ದರು. ಈ ಮಧ್ಯೆ ಹೊಸಮಠ ಸೇತುವೆ ಕುಸಿದಿದೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳ ಮೂಲಕ ಎಲ್ಲೆಡೆ ಹರಡಿದ ಪರಿಣಾಮವಾಗಿ ಪರಿಸರದ ಜನರು ಆತಂಕದಿಂದ ಸ್ಥಳಕ್ಕೆ ಧಾವಿಸಿ ಬಂದಿದ್ದರು.
Related Articles
ಸಂಪರ್ಕ ರಸ್ತೆಗೆ ಬೇಕಾದ ಭೂಮಿಯ ಸ್ವಾಧೀನ ಪ್ರಕ್ರಿಯೆ ತಡವಾದುದರಿಂದ ಕಾಮಗಾರಿಗೆ ತಡೆಯುಂಟಾಗಿತ್ತು. ಇದೀಗ ಸಮಸ್ಯೆ ಬಗೆಹರಿದಿದೆ. ಈಗಾಗಲೇ ಮಳೆ ಆರಂಭಗೊಂಡಿರುವುದರಿಂದ ಸಂಪರ್ಕ ರಸ್ತೆೆ ನಿರ್ಮಿಸಿದರೂ ಡಾಮರು ಹಾಕುವುದು ಕಷ್ಟಸಾಧ್ಯ. ಆದರೆ ಮಳೆ ಜೋರಾಗುವ ಮೊದಲು ಸಂಪರ್ಕ ರಸ್ತೆಯನ್ನು ಗಟ್ಟಿ ಮರಳು ಹಾಕಿ ಹದಗೊಳಿಸಿ ಹೊಸ ಸೇತುವೆಯ ಮೇಲೆ ವಾಹನ ಸಂಚಾರಕ್ಕೆ ಅನುವುಮಾಡಿಕೊಡಲಾಗುವುದು.
– ಪುಟ್ಟಸ್ವಾಮಿ, AEE, KRDCL ಹಾಸನ
Advertisement
— ನಾಗರಾಜ್ ಎನ್.ಕೆ.