ಕಡಬ: ಹೊಸಮಠ ಮುಳುಗು ಸೇತುವೆಯ ಪಕ್ಕದಲ್ಲಿ ಸೋಮವಾರ ನಸುಕಿನಲ್ಲಿ ರಸ್ತೆ ಕುಸಿತ ಸಂಭವಿಸಿ ವಾಹನ ಸಂಚಾರಕ್ಕೆ ತೊಡಕಾದ ಹಿನ್ನೆಲೆಯಲ್ಲಿ ಸುಳ್ಯ ಶಾಸಕ ಎಸ್. ಅಂಗಾರ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸ ಸೇತುವೆಯ ಕಾಮಗಾರಿಯ ಸಲುವಾಗಿ ಮಳೆ ನೀರು ಹರಿದುಹೋಗಲು ನಿರ್ಮಿಸಲಾಗಿದ್ದ ಕಾಲುವೆಯಲ್ಲಿ ರವಿವಾರ ರಾತ್ರಿ ಮಳೆಯಿಂದಾಗಿ ಹಠಾತ್ತನೆ ಹೆಚ್ಚಿನ ನೀರು ಹರಿದುಬಂದ ಕಾರಣ ಹಳೆ ಸೇತುವೆಯ ಬಳಿ ಭೂಕುಸಿತ ಉಂಟಾಗಿ ರಸ್ತೆಗೆ ಹಾನಿಯಾಗಿತ್ತು. ರಸ್ತೆಯನ್ನು ಕೆಲವೇ ತಾಸುಗಳಲ್ಲಿ ದುರಸ್ತಿಪಡಿಸಲಾಗಿದ್ದು, ಉಪ್ಪಿನಂಗಡಿ- ಕಡಬ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರ ಪುನರಾರಂಭಗೊಂಡಿದೆ ಎಂದರು.
ಹೊಸ ಸೇತುವೆಯ ಸಂಪರ್ಕ ರಸ್ತೆ ನಿರ್ಮಾಣ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ ಮಳೆಗಾಲದಲ್ಲಿ ಸೇತುವೆಯ ಮೇಲೆ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಸ್ಥಳದಲ್ಲಿದ್ದ ಇಲಾಖಾಧಿಕಾರಿಗಳಿಗೆ ಅವರು ಸೂಚಿಸಿದರು.
ಶಾಸಕರ ಸೂಚನೆಗೆ ಪ್ರತಿಕ್ರಿಯಿಸಿದ ಲೋಕೋಪಯೋಗಿ ಇಲಾಖಾ ಸಹಾಯಕ ಎಂಜಿನಿಯರ್ ಪ್ರಮೋದ್‌ಕುಮಾರ್ ಕೆ.ಕೆ. ಅವರು ಹೊಸ ಸೇತುವೆ ಸಂಪರ್ಕ ರಸ್ತೆಯ ಪಕ್ಕದಲ್ಲಿ ಮಣ್ಣು ಕುಸಿಯದಂತೆ ತಡೆಗೊಡೆ ನಿರ್ಮಾಣ ಮತ್ತು ನೀರು ಹರಿದುಹೋಗಲು ಕಾಂಕ್ರೀಟ್ ಕಾಲುವೆ ರಚನೆಯ ಕಾಮಗಾರಿ ಪ್ರಗತಿಯಲ್ಲಿದ್ದು, ಶೀಘ್ರ ರಸ್ತೆಯ ಕಾಮಗಾರಿ ಮುಗಿಸಿ ಹೊಸ ಸೇತುವೆಯ ಮೇಲೆ ವಾಹನ ಸಂಚರಿಸಲು ಅವಕಾಶ ನೀಡಲಾಗುವುದು ಎಂದು ಭರವಸೆಯಿತ್ತರು.
ಪ್ರಮುಖರಾದ ವೆಂಕಟ್ ವಳಲಂಬೆ, ಪ್ರಕಾಶ್ ಎನ್.ಕೆ., ಕುಟ್ರಾಪ್ಪಾಡಿ ಗ್ರಾ.ಪಂ. ಸದಸ್ಯರಾದ ಶಿವ ಪ್ರಸಾದ್ ಪುತ್ತಿಲ, ದೇವಯ್ಯ ಗೌಡ ಪನ್ಯಾಡಿ, ಸೈಟ್ ಎಂಜಿನಿಯರ್ ಸೋಮ ಶೇಖರ್, ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆ ಹಾಜರಿದ್ದರು.