Advertisement

ಶಿರಾಡಿ ಘಾಟಿಯ ದೋಣಿಗಲ್ ನಲ್ಲಿ ರಸ್ತೆ ಕುಸಿತ; ಬದಲಿ ಮಾರ್ಗ ವ್ಯವಸ್ಥೆ

09:51 PM Jul 15, 2022 | Team Udayavani |

ಹಾಸನ: ಭಾರೀ ಮಳೆಯಿಂದಾಗಿ ಸಕಲೇಶಪುರ ತಾಲೂಕು ದೋಣಿಗಾಲ್‌ ಬಳಿ ರಾಷ್ಟ್ರೀಯ ಹೆದ್ದಾರಿಯು ಕುಸಿತದ ಹಿನ್ನೆಲೆಯಲ್ಲಿ ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ – 75 ರ ಶಿರಾಡಿಘಾಟ್‌ನಲ್ಲಿ ಎಲ್ಲ ವಾಹನಗಳ ಸಂಚಾರವನ್ನು ನಿಷೇಧಿಸಿ ಹಾಸನ ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಅವರು ಶುಕ್ರವಾರ ಆದೇಶ ಹೊರಡಿಸಿದ್ದಾರೆ.

Advertisement

ರಾಷ್ಟ್ರೀಯ ಹೆದ್ದಾರಿ – 75 ರ ಸಕಲೇಶಪುರ ತಾಲೂಕು ವ್ಯಾಪ್ತಿಯ ದೋಣಿಗಾಲ್‌ನಿಂದ ಮಾರನಹಳ್ಳಿವರೆಗೆ ಭಾರೀ ಸರಕು ಸಾಗಣೆಯ ವಾಹನಗಳ ಹೊರತುಪಡಿಸಿ ಸರ್ಕಾರಿ, ಶಾಸಗಿ ಬಸ್ಸುಗಳು, ಕಾರು, ಜೀಪು, ದ್ವಿಚಕ್ರ ವಾಹನಗಳ ಸಂಚಾರಕ್ಕೆ ಅವಕಾಶ ನೀಡಿ ಗುರುವಾರ ಜಿಲ್ಲಾಧಿಕಾರಿಯವರು ಆದೇಶ ಹೊರಡಿಸಿದ್ದರು. ಆದರೆ ಶುಕ್ರವಾರ ಮತ್ತೆ ಮುಂಗಾರು ಮಳೆ ಅಬ್ಬರ ತೀವ್ರಗೊಂಡು ರಸ್ತೆ ಕುಸಿಯುವ ಅಪಾಯ ಎದುರಾಗಿದೆ.

ಹಾಗಾಗಿ ಹೆಚ್ಚಿನ ಆನಾಹುತವನ್ನು ತಡೆಯುವ ಹಾಗೂ ಸಾರ್ವಜನಿಕರ ಹಿತದೃಷ್ಠಿಯಿಂದ ಗುರುವಾರ ಹೊರಡಿಸಿದ ಆದೇಶವನ್ನು ಪರಿಷ್ಕರಿಸಿ ಈ ಮಾರ್ಗದಲ್ಲಿ ಎಲ್ಲ ವಾಹನಗಳ ಸಂಚಾರವನ್ನು ಮುಂದಿನ ಆದೇಶದವರೆಗೆ ನಿಷೇಧಿಸಿ ಶುಕ್ರವಾರ ಪರಿಷ್ಕೃತ ಆದೇಶ ಹೊರಡಿಸಿದ್ದಾರೆ.

ಬೆಂಗಳೂರು – ಮಂಗಳೂರು ನಡುವೆ ಸಂಚರಿಸುವ ವಾಹನಗಳಿಗೆ ಬದಲಿ ಮಾರ್ಗವನ್ನೂ ಜಿಲ್ಲಾಧಿಕಾರಿಯವರು ಉಲ್ಲೇಖಿಸಿದ್ದು ಬೆಂಗಳೂರಿನಿಂದ ಮಂಗಳೂರಿಗೆ ಹೋಗುವ 16,200 ಕೆಜಿಗಿಂತ ಕಡಿಮೆ ಭಾರದ ವಾಹನಗಳು ಹಾಸನ – ಅರಕಲಗೂಡು – ಕುಶಾಲನಗರ – ಸಂಪಾಜೆ ಮಾರ್ಗದಲ್ಲಿ ಮಂಗಳೂರಿಗೆ ಸಂಚಿರಿಸಲು ಸೂಚನೆ ನೀಡಿದ್ದಾರೆ. ಮತ್ತೊಂದು ಮಾರ್ಗವನ್ನೂ ಅವರು ಸೂಚಿಸಿದ್ದು, ಹಾಸನ – ಬೇಲೂರು – ಮೂಡಿಗೆರೆ – ಚಾರ್ಮಾಡಿ ಘಾಟ್‌ ಮೂಲಕವೂ ಮಂಗಳೂರು ತಲಪಬಹುದು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

16,200 ಕೆಜಿಗಿಂತ ಹೆಚ್ಚು ಭಾರದ ಸರಕು ಸಾಗಾಣೆಯ ವಾಹನಗಳು ಈ ಎರಡೂ ಮಾರ್ಗಗಳ ಹೊರತುಪಡಿಸಿ ಬೇರೆ ಮಾರ್ಗಗಳಲ್ಲಿ ಬೆಂಗಳೂರು – ಮಂಗಳೂರು ನಡುವೆ ಸಂಚರಿಸಬಹುದು ಎಂದು ಜಿಲ್ಲಾಧಿಕಾರಿಯವರು ಉಲ್ಲೇಖೀಸಿದ್ದಾರೆ.

Advertisement

ಆಲೂರು , ಸಕಲೇಶಪುರ ತಾಲೂಕು ಶಾಲೆಗಳಿಗೆ ಶನಿವಾರ ( ಜು.16) ರಜೆ ಘೋಷಣೆ
ಹಾಸನ: ಜಿಲ್ಲೆಯ ಮಲೆನಾಡು ಭಾಗಗಳಲ್ಲಿ ಮಳೆ ಮುಂದುವರಿದಿರುವುದರಿಂದ ಶನಿವಾರ ( ಜು.16) ಎರಡು ತಾಲೂಕುಗಳ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಆಲೂರು ತಾಲೂಕಿನ ಶಾಲೆಗಳು ಹಾಗೂ ಅಂಗನವಾಡಿ ಕೇಂದ್ರಗಳಿಗೆ ಹಾಗೂ ಸಕಲೇಶಪುರ ತಾಲೂಕಿನ ಶಾಲೆಗಳು, ಅಂಗನವಾಡಿ ಕೇಂದ್ರಗಳು ಹಾಗೂ ಕಾಲೇಜುಗಳಿಗೂ ರಜೆ ಘೋಷಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಕವಿತಾ ರಾಜರಾಂ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕ್ಯಾತನಹಳ್ಳಿಯಲ್ಲಿ ತಹಸೀಲ್ದಾರ್‌ ಗ್ರಾಮ ವಾಸ್ತವ್ಯ
ಹಾಸನ: ಪ್ರತಿ ತಿಂಗಳ ಮೂರನೇ ಶನಿವಾರ ತಾಲೂಕು ವ್ಯಾಪ್ತಿಯಲ್ಲಿ ಬರುವ ಒಂದು ಗ್ರಾಮಕ್ಕೆ ತಹಸೀಲ್ದಾರರು ಭೇಟಿ ನೀಡಿ ಗ್ರಾಮದಲ್ಲಿ ವಾಸ್ತವ್ಯ ಹೂಡಿ ಗ್ರಾಮಸ್ಥರ ಕುಂದು ಕೊರತೆಗಳನ್ನು ಪರಿಹರಿಸಬೇಕಾಗಿದೆ.

ಆ ನಿಟ್ಟಿನಲ್ಲಿ ಜು.16 ರಂದು ಹಾಸನ ತಾಲೂಕು , ಸಾಲಗಾಮೆ ಹೋಬಳಿ, ಕ್ಯಾತನಹಳ್ಳಿ ಗ್ರಾಮದಲ್ಲಿ ತಹಸೀಲ್ದಾರ್‌ ನಟೇಶ್‌ ಅವರು ಗ್ರಾಮವಾಸ್ತವ್ಯ ಮಾಡಲಿದ್ದಾರೆ. ಸಾರ್ವಜನಿಕ ತಮ್ಮ ಕುಂದು ಕೊರತೆಗಳನ್ನು ಆ ಸಂದರ್ಭದಲ್ಲಿ ಪರಿಹರಿಸಿಕೊಳ್ಳಬಹುದಾಗಿದೆ ಎಂದು ತಹಸೀಲ್ದಾರರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next