Advertisement

ಹೆದ್ದಾರಿ ಸಚಿವರಿಗೆ ಹದಗೆಟ್ಟ ರಸ್ತೆ ಬಗ್ಗೆ ರೋಡ್‌ ಚಾಲೆಂಜ್‌!

10:43 PM Sep 29, 2020 | mahesh |

ಮಹಾನಗರ: ಫೇಸ್ಬುಕ್‌ನಲ್ಲಿ ಕೆಲ ದಿನಗಳಿಂದ ಕಪಲ್‌ ಚಾಲೆಂಜ್‌, ಸ್ಮೈಲ್‌ ಚಾಲೆಂಜ್‌ ಸಹಿತ ನಾನಾ ಚಾಲೆಂಜ್‌ಗಳು ಕಾಣಿಸಿಕೊಳ್ಳುತ್ತಿವೆ. ಆದರೆ, ಯುವ ಕಾಂಗ್ರೆಸ್‌ ದ.ಕ. ಜಿಲ್ಲಾಧ್ಯಕ್ಷ ಮಿಥುನ್‌ ರೈ ಅವರು ಹೆದ್ದಾರಿ ಸಚಿವರಿಗೆ ರೋಡ್‌ ಚಾಲೆಂಜ್‌ ಹಾಕುವುದರ ಮೂಲಕ ವಿಶಿಷ್ಟ ಚಾಲೆಂಜ್‌ ಶುರು ಮಾಡಿದ್ದು, ಸಾಮಾಜಿಕ ತಾಣದಲ್ಲಿ ಸದ್ದು ಮಾಡುತ್ತಿದೆ.

Advertisement

ಬೆಂಗಳೂರು- ಗೋವಾ-ಕೊಚ್ಚಿ- ಸೊಲ್ಲಾ ಪುರ ಸಹಿತ ವಿವಿಧ ಪ್ರಮುಖ ನಗರಗಳನ್ನು ಸಂಪರ್ಕಿಸುವ ದ.ಕ. ಜಿಲ್ಲೆಯ ಹೆದ್ದಾರಿಗಳು ಹೊಂಡ-ಗುಂಡಿಗಳಿಂದ ಕೂಡಿದ್ದು, ಸಂಚಾರ ದುಸ್ತರವಾಗಿದೆ. ಬೆಂಗಳೂರಿಗೆ ತೆರಳುವ ಹೆದ್ದಾರಿಯ ಬಿ.ಸಿ. ರೋಡ್‌ನಿಂದ ಗುಂಡ್ಯ ತನಕ ಹಾಗೂ ಸಕಲೇಶಪುರ-ಹಾಸನ ರಸ್ತೆಯಲ್ಲಿ ಸಂಚರಿಸುವುದೇ ಸಂಕಟವಾಗಿದೆ. 6-7 ಗಂಟೆಯಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ಇದ್ದ ಪ್ರಯಾಣಕ್ಕೆ ಅಲ್ಲಲ್ಲಿ ರಾಡಿ ಎದ್ದ ರಸ್ತೆಯಿಂದಾಗಿ 9-10 ಗಂಟೆ ತಗಲುತ್ತಿದೆ. ಸೊಲ್ಲಾಪುರ ಹೆದ್ದಾರಿಯಲ್ಲಿ ಮನಪಾ ವ್ಯಾಪ್ತಿಯ ಕುಲಶೇಖರದಿಂದ ವಾಮಂಜೂರು ತನಕ ಹೊಂಡ-ಗುಂಡಿಗಳು ಬಿದ್ದು ಅವಘಡಕ್ಕೆ ಕಾರಣವಾಗುತ್ತಿವೆ.

ರಸ್ತೆ ದುರಸ್ತಿಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಮಾಡಿದ ಮನವಿಗಳಿಗೆ ಲೆಕ್ಕವಿಲ್ಲ. ಇದಕ್ಕಾಗಿಯೇ ಕಾಂಗ್ರೆಸ್‌ ಯುವ ಘಟಕದ ಅಧ್ಯಕ್ಷ ಮಿಥುನ್‌ ರೈ ರೋಡ್‌ ಚಾಲೆಂಜ್‌ ಆರಂಭಿಸಿದ್ದು, ಹಲವರು ಇದಕ್ಕೆ ಸಹಮತ ವ್ಯಕ್ತಪಡಿಸಿ ತಮ್ಮ ತಮ್ಮ ಪ್ರದೇಶಗಳ ರಸ್ತೆ ಫೋಟೋವನ್ನು ಸಾಮಾಜಿಕ ತಾಣದಲ್ಲಿ ಪೋಸ್ಟ್‌ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಹೆದ್ದಾರಿ ಖಾತೆ ಸಚಿವ ನಿತಿನ್‌ ಗಡ್ಕರಿ, ಸಂಸದ ನಳಿನ್‌ ಕುಮಾರ್‌ ಕಟೀಲು, ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರಿಗೆ ಫೇಸುºಕ್‌ ಮತ್ತು ಟ್ವೀಟರ್‌ ಮೂಲಕ “ರೋಡ್‌ ಚಾಲೆಂಜ್‌’ ಸವಾಲು ಹಾಕಿದ್ದಾರೆ.

ಗಮನಸೆಳೆಯಲು ಅಭಿಯಾನ
ಮಂಗಳೂರಿಗೆ ಸಂಪರ್ಕಿಸುವ ಹೆದ್ದಾರಿಗಳು ರಾಡಿ ಎದ್ದು ಹೋಗಿದ್ದು, ಸಂಚಾರಕ್ಕೆ ಸಂಕಷ್ಟವಾಗಿದೆ. ಅಲ್ಲಲ್ಲಿ ಗುಂಡಿ ಬಿದ್ದ ರಸ್ತೆಗಳಿಂದಾಗಿ ಮಂಗಳೂರು-ಬೆಂಗಳೂರು ಸಂಚಾರಕ್ಕೆ ಕನಿಷ್ಠ 3 ಗಂಟೆ ಹೆಚ್ಚುವರಿಯಾಗಿ ತಗಲುತ್ತಿದೆ. ಮಂಗಳೂರಿಗೆ ಹೊರಭಾಗದವರು ಬಂದಾಗ ನನ್ನ ಜಿಲ್ಲೆಯ ರಸ್ತೆಯ ದುಃಸ್ಥಿತಿಯ ಬಗ್ಗೆ ಮಾತನಾಡುವಂತಾಗಬಾರದು; ರಸ್ತೆ ಉತ್ತಮವಾಗಿದೆ ಎಂದೇ ಹೇಳಬೇಕು. ಇದಕ್ಕಾಗಿ ಹೆದ್ದಾರಿ ಸಚಿವರನ್ನು ಗಮನ ಸೆಳೆಯುವ ಪ್ರಯತ್ನವಾಗಿ ರೋಡ್‌ ಚಾಲೆಂಜ್‌ ಅಭಿಯಾನ ಆರಂಭಿಸಿದೆ. ಇದಕ್ಕೆ ಜನಸಾಮಾನ್ಯರಿಂದ ಉತ್ತಮ ಪ್ರತಿಕ್ರಿಯೆ ಬಂದಿದ್ದು, ಹಲವರು ಸಾಮಾಜಿಕ ತಾಣಗಳಲ್ಲಿ ರಸ್ತೆ ದುರವಸ್ಥೆಯನ್ನು ಪ್ರಕಟಿಸಿ ಸಚಿವರು, ಸಂಸದರಿಗೆ ಟ್ಯಾಗ್‌ ಮಾಡುತ್ತಿದ್ದಾರೆ.
-ಮಿಥುನ್‌ ರೈ, ಅಧ್ಯಕ್ಷರು, ದ.ಕ. ಜಿಲ್ಲಾ ಯುವ ಕಾಂಗ್ರೆಸ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next