ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಮುಚ್ಚಿರುವ ರಸ್ತೆ ಗುಂಡಿಗಳ ಕಾಮಗಾರಿ ಪರಿಶೀಲನೆಗೆ “ವಿಶೇಷ ಕೋರ್ಟ್ ಕಮೀಷನ್’ ನೇಮಕ ಮಾಡಿರುವ ಹೈಕೋರ್ಟ್, ಮಂಗಳವಾರ (ಸೆ.25) ಪ್ರಾಥಮಿಕ ವರದಿ ಸಲ್ಲಿಸುವಂತೆ ಸೂಚನೆ ನೀಡಿದೆ.
ಈ ಸಂಬಂಧದ ಅರ್ಜಿ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಹಾಗೂ ನ್ಯಾ. ಎಸ್.ಜಿ.ಪಂಡಿತ್ ಅವರನ್ನು ಒಳಗೊಂಡಿರುವ ವಿಭಾಗೀಯ ನ್ಯಾಯಪೀಠದ ಎದುರು ಬಿಬಿಎಂಪಿ ಪರ ವಕೀಲರು, ರಸ್ತೆ ಗುಂಡಿ ಮುಚ್ಚು ಕೆಲಸ ಭರದಿಂದ ಸಾಗಿದೆ. ಈಗಾಗಲೇ ಶೇ.90ರಷ್ಟು ಗುಂಡಿಗಳನ್ನು ಭರ್ತಿ ಮಾಡಲಾಗಿದೆ ಎಂದು ವಿವರಣೆ ನೀಡಿದರು.
ಹಾಗಾದರೆ, ನಗರದಲ್ಲಿ ಇಲ್ಲಿವರೆಗೆ ಎಷ್ಟು ವಾರ್ಡ್‌ಗಳಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ ಎಂದು ನ್ಯಾಯಪೀಠ ಪ್ರಶ್ನಿಸಿತು. ಪಶ್ವಿಮ ವಲಯದ ಮಲ್ಲೇಶ್ವರದ ಏಳು, ಮಹಾಲಕ್ಷ್ಮೀಲೇಔಟ್‌ನ ಏಳು ಹಾಗೂ ಯಲಹಂಕದ ನಾಲ್ಕು ವಾರ್ಡ್‌ಗಳಲ್ಲಿ ಕಾಮಗಾರಿ ಪೂರ್ಣಗೊಂಡಿದೆ ಎಂದು ಬಿಬಿಎಂಪಿ ಪರ ವಕೀಲರು ಉತ್ತರಿಸಿದರು.
ಗುಣಮಟ್ಟ ಮುಖ್ಯ: ತರಾತುರಿಯಲ್ಲಿ ಕೆಲಸ ಮಾಡಿದರೆ ಸಾಲದು, ಗುಣಮಟ್ಟ ಮುಖ್ಯ. ಆದ್ದರಿಂದ ನೀವು (ಬಿಬಿಎಂಪಿ) ಮಾಡಿದ ಕೆಲಸದ ಬಗ್ಗೆ ಸ್ಥಳ ಪರಿಶೀಲನೆ ನಡೆಸಲು ಕೋರ್ಟ್ ಕಮಿಷನ್ ನೇಮಕ ಮಾಡಲಾಗುವುದು ಎಂದು ಹೇಳಿದ ನ್ಯಾಯಪೀಠ, ಸೇನಾ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ದಿನೇಶ್ ಅಗರವಾಲ್ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಜಿ.ಉಮಾ ನೇತೃತ್ವದಲ್ಲಿ ಕೋರ್ಟ್ ಕಮಿಷನ್ ನೇಮಕ ಮಾಡಿತು.
ಈ ದಿನ (ಸೆ.24) ಮಧ್ಯಾಹ್ನ 3.30ರಿಂದಲೇ ಕಮಿಷನ್ ತನ್ನ ಕೆಲಸ ಆರಂಭಿಸಿ, ಮಂಗಳವಾರ ಪ್ರಾಥಮಿಕ ವರದಿ ಸಲ್ಲಿಸಬೇಕು ಎಂದು ಸೂಚನೆ ನೀಡಿತು. ಅಲ್ಲದೇ ಕೋರ್ಟ್ ಕಮಿಷನ್‌ನ ಕಾರ್ಯಾಚರಣೆಗೆ ಬೇಕಾದ ಎಲ್ಲ ರೀತಿ ಸಹಕಾರ ನೀಡುವಂತೆ ಸರ್ಕಾರದ ಪರ ಹಾಗೂ ಬಿಬಿಎಂಪಿ ಪರ ವಕೀಲರಿಗೆ ನಿರ್ದೇಶನ ನೀಡಿತು. ಪೊಲೀಸ್ ರಕ್ಷಣೆಯ ಅಗತ್ಯ ಬಿದ್ದರೆ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ನಗರ ಪೊಲೀಸ್ ಆಯುಕ್ತರಿಗೆ ನ್ಯಾಯಪೀಠ ಸೂಚಿಸಿತು.