ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರು ಪ್ರತಿನಿಧಿಸುತ್ತಿದ್ದ ಆರ್.ಕೆ.ನಗರ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯ ಮತ ಎಣಿಕೆ ಭಾನುವಾರ ನಡೆಸಲಾಗುತ್ತಿದ್ದು, ಪಕ್ಷೇತರ ಅಭ್ಯರ್ಥಿ ಶಶಿಕಲಾ ಆಪ್ತ ಟಿಟಿವಿ ದಿನಕರನ್ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಮೊದಲ ಸುತ್ತಿನಮತ ಎಣಿಕೆಯಲ್ಲಿ ಆಡಳಿತಾರೂಢ ಎಐಎಡಿಎಂಕೆ ಅಭ್ಯರ್ಥಿ ಮಧುಸೂದನ್ ಅವರಿಗಿಂತ ಭಾರೀ ಅಂತರದ ಮುನ್ನಡೆ ಸಾಧಿಸಿದ್ದ ದಿನಕರನ್ 31 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ದಿನಕರನ್ ‘ಗೆಲುವು ತಂದು ಕೊಟ್ಟ ಆರ್.ಕೆ.ನಗರದ ಜನರಿಗೆ ನನ್ನ ಕೃತಜ್ಞತೆಗಳು. ಅಮ್ಮನ ನೈಜ ಅನುಯಾಯಿಯನ್ನು ಗೆಲ್ಲಿಸಿದ್ದಾರೆ’ ಎಂದರು.
ಎಐಎಡಿಎಂಕೆಯಿಂದ ಉಚ್‌ಛಾಟಿಸಲ್‌ಪಟ್ಟಿದ್ದ ದಿನಕರನ್ ಗೆಲುವು ಮುಖ್ಯಮಂತ್ರಿ ಪಳನಿಸ್ವಾಮಿ ಮತ್ತು ಉಪಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಅವರಿಗೆಭಾರೀ ಮುಖಭಂಗಕ್ಕೀಡಾಗಿದ್ದಾರೆ.
ಮತ ಎಣಿಕೆ ಕೇಂದ್ರದಲ್ಲಿ ಉದ್ವಿಗ್ನ ವಾತಾವರಣ
ಮತ ಎಣಿಕೆ ಕೇಂದ್ರದಲ್ಲಿ ಎಐಎಡಿಎಂಕೆ ಬೆಂಬಲಿಗರು ಮತ್ತು ದಿನಕರನ್ ಬೆಂಬಲಿಗರಿಗೆ ತೀವ್ರ ವಾಗ್ವಾದ ನಡೆದಿದೆ. ಕುರ್ಚಿಗಳನ್ನು ಪರಸ್ಪರ ತೂರಾಡಿ ಕೊಂಡ ಬಗ್ಗೆ ವರದಿಯಾಗಿದೆ.